More

    ಚುನಾವಣೆ ಬಳಿಕ ಕಾಂಗ್ರೆಸ್ ಧೂಳೀಪಟ- ಬಾಡಾದಲ್ಲಿ ಯಡಿಯೂರಪ್ಪ ವಾಗ್ದಾಳಿ

    ದಾವಣಗೆರೆ: ಚುನಾವಣೆ ನಂತರದಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ, ಅದನ್ನು ಹುಡುಕಬೇಕಾದ ಸ್ಥಿತಿ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
    ಮಾಯಕೊಂಡ ಕ್ಷೇತ್ರದ ಬಾಡಾ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ಅನುಭವಿಸಿದೆ. ಉತ್ತರ ಪ್ರದೇಶದ 400 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬೆರಳೆಣಿಕೆಯ ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಟೀಕಿಸಿದರು.
    ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಸಮನಾಗುತ್ತಾರೇನಣ್ಣ. ಎಲ್ಲಿಯ ನರೇಂದ್ರ ಮೋದಿ, ಎಲ್ಲಿಯ ರಾಹುಲ್ ಗಾಂಧಿ. ಒಂದು ಕಾಲದಲ್ಲಿ ಹಣ-ಹೆಂಡ, ಜಾತಿ, ಅಧಿಕಾರ ಬಲದಿಂದ ಸರ್ಕಾರ ರಚಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಆಟ ಇನ್ನು ನಡೆಯೋದಿಲ್ಲ ಎಂದು ಹೇಳಿದರು.
    ನರೇಂದ್ರ ಮೋದಿ ಅವರಂಥ ನಾಯಕರನ್ನು ಪಡೆದ ಪಕ್ಷ ನಮ್ಮದು. ನಾನು ರಾಜ್ಯದ ಉದ್ದಗಲಕ್ಕೂ ಸಂಚರಿಸಲಿದ್ದೇನೆ. ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಬರುವುದು ಶತಸ್ಸಿದ್ಧ. ರಾಜ್ಯದ ಜನರು ಇನ್ನು ಕೆಲವೇ ದಿನಗಳ ಕಾಲ ಸಂಯಮದಿಂದ ಇದ್ದರೆ ಇನ್ನೈದು ವರ್ಷ ನೆಮ್ಮದಿಯಿಂದಿರುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದರು.
    ದೇಶದಲ್ಲಿ ಪ್ರತಿ ಮನೆಗೂ 4ರಿಂದ 5 ಸಾವಿರ ರೂ.ವರೆಗೆ ಸವಲತ್ತನ್ನು ನಮ್ಮ ಸರ್ಕಾರ ನೀಡಿದೆ. ಸವಲತ್ತು ಸಿಗದ ಒಂದಾದರೂ ಮನೆಯನ್ನು ತೋರಿಸಿ. ಇನ್ನು 10 ದಿನದಲ್ಲಿ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಬೇಕು. ಗೆಲುವಿನ ಅಂತರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
    ಬಿಜೆಪಿ ಸರ್ಕಾರ ಎಸ್ಸಿ-ಎಸ್ಟಿ ಮೀಸಲು ಹೆಚ್ಚಿಸಿದೆ. 22 ಕೆರೆಗಳ ಭರ್ತಿಗೆ 500 ಕೋಟಿ ರೂ., ಭದ್ರಾ ನಾಲಾ ಆಧುನೀಕರಣಕ್ಕೆ 980 ಕೋಟಿ ರೂ, ಬಹುಗ್ರಾಮ ಕುಡಿವ ನೀರಿನ ಯೋಜನೆಗೆ 250 ಕೋಟಿ ರೂ., ಇನ್ನಿತರೆ ಕಾರ್ಯಕ್ರಮಗಳಿಗೆ ಅನುದಾನವನ್ನು ನೀಡಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಕರ್ನಾಟಕದಲ್ಲಿ ಬಿಜೆಪಿಗೆ ಸಹಕರಿಸಿ ಎಂದರು.
    ಪ್ರಚಾರ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಎಂ.ಎಲ್ಸಿ ನವೀನ್, ಅಭ್ಯರ್ಥಿ ಎಂ.ಬಸವರಾಜನಾಯ್ಕ, ಅಣಬೇರು ಜೀವನಮೂರ್ತಿ, ಶ್ಯಾಗಲೆ ದೇವೇಂದ್ರಪ್ಪ, ನಟರಾಜ್, ಶೈಲಜಾ ಬಸವರಾಜ್, ಸಹನಾ ರವಿ, ಎನ್.ರಾಜಶೇಖರ್, ಜಿ.ಎಸ್.ಶ್ಯಾಮ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts