More

    ಚಿದಾನಂದಗೌಡರಿಗೆ ಒಳೇಟಿನ ಭೀತಿ?

    ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯನ್ನು ಒಳಗೊಂಡಿರುವ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಲಿರುವ ಬಿಜೆಪಿ ಅಧಿಕೃತ ಅಭ್ಯರ್ಥಿ ಚಿದಾನಂದಗೌಡಗೆ ಜಿಲ್ಲೆಯಲ್ಲಿ ಸ್ವಪಕ್ಷದವರಿಂದಲೇ ಒಳೇಟಿನ ಆತಂಕ ಎದುರಾಗಿದೆ.

    ಚಿದಾನಂದಗೌಡರ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ವಿರೋಧ ಇಲ್ಲದಿದ್ದರೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಮೇಲಿನ ಸಿಟ್ಟಿನಿಂದ ತಟಸ್ಥರಾಗಿ ಉಳಿಯಲು ನಿರ್ಧರಿಸಿರುವುದರಿಂದ ಇದರ ಲಾಭ ಇದೇ ಜಿಲ್ಲೆಯವರಾದ ಜೆಡಿಎಸ್‌ನ ಆರ್.ಚೌಡರೆಡ್ಡಿ ಪಡೆಯಬಹುದು ಎನ್ನಲಾಗಿದೆ.

    ವೈ.ಎ.ಎನ್.ಜಿಲ್ಲೆಗೆ ಯಾರಾದರು ಸಚಿವರು, ಪಕ್ಷದ ಹಿರಿಯರು ಬಂದಾಗ ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆಯೇ ವಿನಾ ಪಕ್ಷ ಸಂಘಟನೆಗೆ ಸಮಯ ಮೀಸಲಿಟ್ಟಿಲ್ಲ, ಚುನಾವಣೆ ವಿಚಾರದಲ್ಲೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಚಿದಾನಂದಗೌಡರಿಗೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನಲಾಗಿದೆ.

    ಇದರೊಂದಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಾಲಾಕ್ಷ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ನಾರಾಯಣಸ್ವಾಮಿ ವಿರುದ್ಧ ಹರಿಹಾಯ್ದಿದ್ದು ಮುಖಂಡರು ಇದಕ್ಕೆ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದೂ ಬಂಡಾಯಕ್ಕೆ ಕಾರಣವಾಗಿ ಅಡ್ಡ ಪರಿಣಾಮ ಉಂಟಾಗಬಹುದು ಎನ್ನಲಾಗಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಆಕಾಂಕ್ಷಿಯಾಗಿದ್ದು ಮಾಲೂರು ಸೇರಿ ಜಿಲ್ಲೆಯ ಇನ್ನಿತರೆಡೆ ಪ್ರಚಾರ ಕೈಗೊಂಡಿರುವುದರಿಂದ ಅಧಿಕೃತ ಅಭ್ಯರ್ಥಿಗೆ ಚುನಾವಣೆ ಎದುರಿಸುವುದು ಸವಾಲಾಗಿದೆ.

    ವೀರಶೈವ ಪಾಲಾಕ್ಷ ಮತ್ತು ಗೊಲ್ಲ ಸಮುದಾಯದ ಶ್ರೀನಿವಾಸ್ ಕಣಕ್ಕಿಳಿದಲ್ಲಿ ಮತ ಛಿದ್ರವಾಗುವುದರಿಂದ ಅಧಿಕೃತ ಅಭ್ಯರ್ಥಿ ಚಿದಾನಂದಗೌಡರಿಗೆ ಹಿನ್ನಡೆಯಾಗುವುದು ಕಟ್ಟಿಟ್ಟ ಬುತ್ತಿ. ಬಿಜೆಪಿ ಮುಖಂಡರು ಎಂಎಲ್‌ಸಿ ವೈ.ಎ.ಎನ್. ವಿರುದ್ಧ ತಿರುಗಿ ಬಿದ್ದಿರುವ ಕಾರ್ಯಕರ್ತರನ್ನು ಸಮಾಧಾನಪಡಿಸಿ ಒಗ್ಗಟ್ಟಿನಿಂದ ಚುನಾವಣೆ ನಡೆಸಲು ಕಾರ್ಯತಂತ್ರ ಹೆಣೆಯದಿದ್ದರೆ ಆರ್.ಚೌಡರೆಡ್ಡಿಗೆ ಅನುಕೂಲವಾಗುವುದು ಖಚಿತ ಎಂಬ ಮಾತು ಕೇಳಿ ಬಂದಿದೆ.

    ಚಿದಾನಂದಗೌಡರಿಗೆ ಕೋಲಾರ ಜಿಲ್ಲೆಯಲ್ಲಿ ಲೀಡ್ ದೊರಕಿಸಿಕೊಡುವ ಜವಾಬ್ದಾರಿಯನ್ನು ನಾರಾಯಣಸ್ವಾಮಿ ಹೆಗಲಿಗೆ ಹೊರಿಸಲಾಗಿದೆ. ಹೀಗಾಗಿ ಕಾರ್ಯಕರ್ತರನ್ನು ಸಮಾಧಾನಪಡಿಬೇಕಿರುವುದು ವೈಎಎನ್‌ಗೆ ಸವಾಲಾಗಿದೆ.

    ಕಳೆದ ಬಾರಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಾಗಿ ಚೌಡರೆಡ್ಡಿ ಲಾಭ ಪಡೆದಿದ್ದರು. ಈ ಬಾರಿ ಗೆಲುವಿಗೆ ತಂತ್ರಗಾರಿಕೆ ರೂಪಿಸಿದ್ದಾರೆ. ಬಿಜೆಪಿಯಲ್ಲಿರುವ ಸಮುದಾಯದ ಮುಖಂಡರು ಹಾಗೂ ಗೆಳೆಯರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ ಎನ್ನಲಾಗಿದ್ದು, ಸೋಮವಾರ ಕೋಲಾರ ಹೊರವಲಯದಲ್ಲಿ ನಡೆಯಲಿರುವ ಸಭೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಮುಖಂಡರು ಹೆಚ್ಚಿನ ಗಮನಹರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬುದು ಹೆಸರು ಹೇಳಲಿಚ್ಛಿಸಿದ ಕಾರ್ಯಕರ್ತರ ಎಚ್ಚರಿಕೆ ಸಂದೇಶವಾಗಿದೆ.

    ಪಕ್ಷದ ಅಧಿಕೃತ ಅಭ್ಯರ್ಥಿ ಎಂ.ಚಿದಾನಂದಗೌಡರ ಗೆಲುವು ಖಚಿತ, ಪಾಲಾಕ್ಷ ಪಕ್ಷದ ಮುಖಂಡರ ಆಜ್ಞೆ ಮೀರಲ್ಲ, ಎಂಎಲ್‌ಸಿ ನಾರಾಯಣಸ್ವಾಮಿ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನವಿರುವುದು ನನ್ನ ಗಮನಕ್ಕೆ ಬಂದಿಲ್ಲ, ಕಾರ್ಯಕಾರಿಣಿ ಸಭೆಯಲ್ಲಿ ಯಾರಾದರೂ ವಿಷಯ ಪ್ರಸ್ತಾಪಿಸಿದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.
    ಡಾ.ಕೆ.ಎನ್.ವೇಣುಗೋಪಾಲ್, ಜಿಲ್ಲಾಧ್ಯಕ್ಷ, ಬಿಜೆಪಿ, ಕೋಲಾರ

    ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದರೆ ಚಿದಾನಂದಗೌಡರ ಗೆಲವು ಖಚಿತ, ಪಕ್ಷಕ್ಕೆ ನಿಷ್ಠರಾದವರನ್ನು ಕಡೆಗಣಿಸಬಾರದು, ನಮ್ಮದೇ ಸರ್ಕಾರ ಇರುವುದರಿಂದ ಕಾರ್ಯಕರ್ತರ ಹಿತ ಕಾಪಾಡಬೇಕು, ಎಂಎಲ್‌ಸಿ ನಾರಾಯಣಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕಾರ್ಯಕರ್ತರನ್ನು ಕರೆದು ಮಾತನಾಡಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಬೇಕು.
    ಅಲ್ಲಿಕುಂಟೆ ಶ್ರೀನಿವಾಸ್, ಮಾಜಿ ಮಾಧ್ಯಮ ಪ್ರಮುಖ್, ಕೋಲಾರ

    ನನ್ನ ಮೇಲೆ ಯಾರಿಗಾದರು ಅಸಮಾಧಾನ ಇದ್ದರೆ ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ನನ್ನ ಅಥವಾ ಪಕ್ಷದ ವಿರುದ್ಧ ಟೀಕಿಸುವುದು ಸರಿಯಲ್ಲ, ಬಿಜೆಪಿ ಅಸಭ್ಯವಾಗಿ ವರ್ತಿಸುವವರನ್ನು ಸಹಿಸುವುದಿಲ್ಲ. ಪಕ್ಷದ ವೇದಿಕೆಯಲ್ಲಿ ನನ್ನ ಬಗ್ಗೆ ಚರ್ಚೆಯಾದರೆ ಅದಕ್ಕಷ್ಟೇ ಪ್ರತಿಕ್ರಿಯಿಸುತ್ತೇನೆ.
    ವೈ.ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts