More

    ಚಿತ್ರದುರ್ಗ ಜಿಲ್ಲೆಗೆ ಬಜೆಟ್‌ನಲ್ಲಿ ಸಿದ್ದಿ‘ಸಿದ್ದು’

    ಚಿತ್ರದುರ್ಗ: ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭದ್ರೆಗೆ ಅನುದಾನದ ಭದ್ರ ಬುನಾದಿ ಹಾಕಿಕೊಡುವುದು ಗ್ಯಾರಂಟಿ ಎಂದು ನಂಬಿದ್ದ ಚಿತ್ರದುರ್ಗ ಜಿಲ್ಲೆ ಜನರಿಗೆ ನಿರಾಸೆಯಾಗಿದೆ.
    ಕೇಂದ್ರ ಸರ್ಕಾರ ಘೋಷಿಸಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದೆಂಬ ಹೇಳಿಕೆ ಹೊರತು ಪ್ರಸಕ್ತ ಸಾಲಿನಲ್ಲಿ ಯೋಜನೆಗೆ ಇಂತಿಷ್ಟು ಅನುದಾನವೆಂದು ರಾಜ್ಯ ಸರ್ಕಾರ ಘೋಷಿಸಿಲ್ಲ. ಆದರೆ, ಚಿತ್ರದುರ್ಗ ಜಿಲ್ಲೆ ಸಂಪೂರ್ಣ ಹಾಗೂ ತುಮಕೂರು ಮೂರು, ಚಿಕ್ಕಮಗಳೂರು ಎರಡು ಹಾಗೂ ದಾವಣಗೆರೆ ಜಿಲ್ಲೆ ಒಂದು ತಾಲೂಕು ಸಹಿತ 2,25,515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮನೀರಾವರಿ ಸೌಲಭ್ಯ ಒದಗಿಸುವ ಉದ್ದೇಶಿತ ಯೋಜನೆಯಡಿ ಪ್ರಸ್ತಕ್ತ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆ 75 ಸಾವಿರ ಎಕರೆಗೆ ನೀರು ಒದಗಿಸಲು ಕ್ರಮ ವಹಿಸಲಾಗುವುದೆಂಬ ಹೇಳಿಕೆ ಜಿಲ್ಲೆ ರೈತರನ್ನು ಸಮಾಧಾನಪಡಿಸುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.
    ಉತ್ಸಾಹದಿಂದ 15ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ‘ಭದ್ರೆ’ ತ್ವರಿತ ಅನುಷ್ಠಾನಕ್ಕಾಗಿ ಬರದ ನಾಡಿನ ಜನರ ನಿರಂತರ ಹೋರಾಟ ನೆನಪಿಗೆ ಬರಲಿಲ್ಲವೆ? ಎಂಬ ಪ್ರಶ್ನೆ ಉದ್ಭವಿಸಿದೆ.
    ತುಮಕೂರು-ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ನೇರ ಪ್ರಸ್ತಾಪಿಸದಿದ್ದರೂ, ವೆಚ್ಚ ಹಂಚಿಕೆಯೊಂದಿಗೆ ರಾಜ್ಯದಲ್ಲಿ 12147 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನವಾಗುತ್ತಿರುವ 9 ರೈಲ್ವೆ ಕಾಮಗಾರಿಗಳಲ್ಲಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗವೂ ಸೇರಿದಿಯೇ ಎಂಬುದನ್ನು ಜಿಲ್ಲೆ ಜನಪ್ರತಿನಿಧಿಗಳು ಸ್ಪಷ್ಟಪಡಿಸಬೇಕಿದೆ.

    *ಮೀನುಗಾರಿಕೆ:

    ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳ ಗಣಿಭಾದಿತ ಪ್ರದೇಶದಲ್ಲಿ ಮೀನುಗಾರಿಕೆ ಪ್ರೋತ್ಸಾಹ ಕ್ಕೆ 6 ಕೋಟಿ ರೂ. ಅನುದಾನ ಒದಗಿಸಲಾಗಿದೆ.
    ಅಗ್ರಿ-ಟೆಕ್ ಕಂಪನಿ ಮತ್ತು ರಿಟೈಲ್ ಚೈನ್ಸ್‌ಗಳ ಮೂಲಕ ಕೈಗೆಟುಕವ ದರದಲ್ಲಿ ಗ್ರಾಹಕರಿಗೆ ಸಂಸ್ಕರಿಸಿದ-ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಒದಗಿಸಲು ಉದ್ದೇಶಿಸಿರುವ ‘ನಮ್ಮ ಮಿಲ್ಲೆಟ್’ ಹೊಸ ಕಾರ‌್ಯಕ್ರಮದಿಂದ ರಾಜ್ಯದಲ್ಲೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ಚಿತ್ರದುರ್ಗ ಜಿಲ್ಲೆ ಬೆಳೆಗಾರರಿಗೆ ಅನುಕೂಲವಾಗಬಹುದು.
    ಬರಪೀಡಿತ, ಮಳೆಯಾಶ್ರೀತ ಜಿಲ್ಲೆಗಳಲ್ಲಿ ನರೇಗಾದಡಿ ಪ್ರತಿ ವರ್ಷ ಒಂದು ಸಾವಿರದಂತೆ ಐದು ಸಾವಿರ ಸರೋವರಗಳ ನಿರ್ಮಾಣ ಯೋಜನೆ ಲಾಭ ಚಿತ್ರದುರ್ಗಕ್ಕೂ ಸಿಗುವ ನಿರೀಕ್ಷೆ ಇದೆ.
    ಪ್ರಮುಖ ಜಲಾಶಯಗಳ ಹಿನ್ನೀರಿನಲ್ಲಿ ಜಲಕ್ರೀಡೆ, ಸಾಹಸಕ್ಕೆ ಪ್ರೋತ್ಸಾಹ ಕಾರ‌್ಯಕ್ರಮದಡಿ ಹಿರಿಯೂರು ತಾಲೂಕು ವಿವಿ ಸಾಗರಕ್ಕೂ ಅವಕಾಶ ಸಿಗಬಹುದು. ರಾಜ್ಯದ 10 ಪ್ರವಾಸಿ ತಾಣಗಳಲ್ಲಿ ಕೇಬಲ್‌ಕಾರ್, ರೋಪ್‌ವೇ ನಿರ್ಮಾಣ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.
    ಚಿತ್ರದುರ್ಗದ ಕೋಟೆಯಿಂದ ಚಂದ್ರವಳ್ಳಿಯಲ್ಲಿ ಕೇಬಲ್‌ಕಾರ್ ಸೌಲಭ್ಯ ಕಲ್ಪಿಸುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಅಥವಾ ಯಾವುದೇ ಜಿಲ್ಲೆ ಹೆಸರಿಸದೆ ಇಂತಿಷ್ಟು ಜಿಲ್ಲೆಗಳೆಂದು ಪ್ರಸ್ತಾಪಿಸಿರುವ ವಿವಿಧ ಕ್ಷೇತ್ರಗಳ ಹತ್ತು ಹಲವು ಯೋಜನೆಗಳ ಗರಿಷ್ಠ ಲಾಭ ಪಡೆಯುವ ಹೊಣೆ ಈಗ ಜಿಲ್ಲೆ ಜನಪ್ರತಿನಿಧಿಗಳ ಮೇಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    *ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ
    ಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ 20 ಕೋಟಿ ರೂ. ವೆಚ್ಚದಲ್ಲಿ ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದ್ದು, ಚಿತ್ರದುರ್ಗದಲ್ಲೂ ಈ ಕೇಂದ್ರದೊಂದಿಗೆ ಕ್ರಿಟಿಕಲ್ ಕೇರ್‌ಬ್ಲಾಕ್ ಹಾಗೂ ಡಿಜಿಟಲ್ ಮ್ಯಾಮೋಗ್ರಫಿ ಕೇಂದ್ರ ಸ್ಥಾಪನೆಯಾಗಬಹುದು. ಸ್ಟೆಮಿ ಮತ್ತು ಸ್ಟ್ರೋಕ್ ಔಷಧಕ್ಕಾಗಿ ಚಿತ್ರದುರ್ಗಕ್ಕೂ ಅನುದಾನ ಸಿಗಬಹುದು.
    ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಐಪಿಎಚ್‌ಎಲ್) ಸ್ಥಾಪನೆಯಾಗಲಿದೆ. ಇದರಿಂದ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳು ಲಭ್ಯವಾಗಲಿದೆ. ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು, ಕಾಲೇಜು ಕಟ್ಟಡ, ವಿದ್ಯಾರ್ಥಿ ನಿಲಯ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಹೇಳಿದೆ. ಜಿಲ್ಲಾ ಖನಿಜ ನಿಧಿ ಮೂಲಕ ಜಿಲ್ಲೆಯಲ್ಲಿ ಹೊಸ ಜಿಟಿಟಿಸಿ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ. ಉದ್ದಿಮೆಗಳ ಉತ್ತೇಜನಕ್ಕೆ ಜಿಲ್ಲಾಮಟ್ಟದ ಇನ್ಕುಬೇಶನ್ ಸೆಂಟರ್ ಪ್ರಾರಂಭವಾಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts