More

    ಚಿತ್ರದುರ್ಗದಲ್ಲಿ 28ಕ್ಕೆ ಶೋಷಿತರ ಜಾಗೃತಿ ಸಮಾವೇಶ

    ದಾವಣಗೆರೆ: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಚಿತ್ರದುರ್ಗದಲ್ಲಿ ಜ.28 ರಂದು ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

    ರಾಜ್ಯದ ಹಿಂದುಳಿದ ಜಾತಿಗಳು ಹಾಗೂ ಶೋಷಿತ ಸಮುದಾಯಗಳ ಸಂಘಟನೆ ಹಾಗೂ ಸ್ವಾಭಿಮಾನದ ಸಂರಕ್ಷಣೆಗಾಗಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಚಿತ್ರದುರ್ಗದ ಸುಮಾರು 150 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಎಲ್ಲ ಶೋಷಿತ ಸಮುದಾಯಗಳ ಮುಖಂಡರಿಗೆ ಪಕ್ಷಾತೀತ ಆಹ್ವಾನ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 10 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
    ಸಮಾವೇಶದಲ್ಲಿ ಹಲವು ಹಕ್ಕೊತ್ತಾಯ ಮಂಡಿಸಲಿದ್ದು, ರಾಜ್ಯಸರ್ಕಾರ ಎಚ್. ಕಾಂತರಾಜು ವರದಿ ಸ್ವೀಕರಿಸಿ ಯಥಾವತ್ತಾಗಿ ಅಂಗೀಕರಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಬೇಕು. ಇಡಬ್ಲೂಎಸ್ ನೀಡಿರುವ ಶೇ.10 ಮೀಸಲಾತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
    ಮಹಿಳಾ ಮೀಸಲಾತಿ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು, ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು ಹಾಗೂ ಖಾಸಗಿ ಕ್ಷೇತ್ರಕ್ಕೂ ಇದನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
    ಸರ್ಕಾರ ಕಾಂತರಾಜು ವರದಿ ಸ್ವೀಕರಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು. ಆನಂತರ ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂಬುದನ್ನು ತೀರ್ಮಾನಿಸಬೇಕು. ಅವೈಜ್ಞಾನಿಕ ಎಂದು ಕಂಡುಬಂದರೆ ತಿರಸ್ಕಾರ ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಮುಖಂಡರಾದ ಆರ್. ವೆಂಕಟರಾಮಯ್ಯ, ವೆಂಕಟಸುಬ್ಬರಾಜ್, ಎಂ. ರಾಮಚಂದ್ರಪ್ಪ, ಡಿ. ಬಸವರಾಜ್, ಹೊದಿಗೆರೆ ರಮೇಶ್, ಹರಪನಹಳ್ಳಿ ಅಂಜಿನಪ್ಪ, ಸುಬ್ರಹ್ಮಣ್ಯ, ಕೆ.ಎಚ್. ನಾಗರಾಜ್, ಜೆ.ಸಿ. ನಿಂಗಪ್ಪ, ತುರ್ಚಘಟ್ಟ ಬಸವರಾಜಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts