More

    ಚಿತಾಗಾರ ನಿರ್ಮಾಣ ವಿಳಂಬ ಸಲ್ಲ, ಅಧಿಕಾರಿಗಳ ವಿರುದ್ಧ ಸಚಿವ ಅಶೋಕ್ ಕಿಡಿ ಶಿಸ್ತು ಕ್ರಮಕ್ಕೆ ಸೂಚನೆ

    ನೆಲಮಂಗಲ: ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ ಸರ್ಕಾರದಿಂದ ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿ ಗ್ರಾಪಂನ ಗಿಡ್ಡೇನಹಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ತಾತ್ಕಾಲಿಕ ಚಿತಾಗಾರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

    ಚಿತಾಗಾರ ನಿರ್ಮಾಣ ಜವಾಬ್ದಾರಿ ಹೊತ್ತ ಅಧಿಕಾರಿಗಳು ಹಣದಾಸೆಗಾಗಿ ವಿನಾಕಾರಣ ವಿಳಂಬ ಮಾಡುವ ಜತೆಗೆ ಯೋಜಿತ ರೀತಿಯಲ್ಲಿ ಚಿತಾಗಾರ ನಿರ್ಮಿಸುತ್ತಿಲ್ಲ. ತಾವರೇಕೆರೆಯಲ್ಲಿರುವಂತೆ ಚಿತಾಗಾರ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ನಿರ್ಲಕ್ಷ್ಯವಹಿಸಿ ಕಾಲ ದೂಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕಾಮಗಾರಿ ವಿಳಂಬ ಮಾಡುತ್ತಿರುವ ಬಿಬಿಎಂಪಿ ಯಲಹಂಕ ವಿಭಾಗದ ಹಿರಿಯ ಇಂಜಿನಿಯರ್ ಎಸ್.ಪಿ.ರಂಗನಾಥ್ ವಿರುದ್ಧ ಕಾನೂನು ರೀತಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದರು.

    ಬೆಂಗಳೂರಿನಲ್ಲಿ ಕರೊನಾ ಸೋಂಕು ಹೆಚ್ಚಾಗಿರುವುದು ಒಂದೆಡೆಯಾದರೆ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಮೃತ ಕುಟುಂಬದವರು ಶವಸಂಸ್ಕಾರಕ್ಕಾಗಿ ಪರದಾಡುತ್ತಿರುವ ಸನ್ನಿವೇಶ ಮನಗಂಡ ಮುಖ್ಯಮಂತ್ರಿಗಳು ಶವಸಂಸ್ಕಾರಕ್ಕಾಗಿ ಚಿತಾಗಾರ ನಿರ್ಮಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

    ಬೆಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಮೃತಪಡುವ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಯ ಜನರ ಅನುಕೂಲಕ್ಕಾಗಿ ಗಿಡ್ಡೇನಹಳ್ಳಿಯಲ್ಲಿ ಚಿತಾಗಾರ ನಿರ್ಮಿಸುತ್ತಿದ್ದು, ಶೀಘ್ರ ಬಳಕೆ ಮಾಡಿಕೊಳ್ಳಬಹುದಾಗಿದೆ. ಕೂಡಲೇ ತಾಲೂಕು ಆಡಳಿತದಿಂದ ಶವಸಂಸ್ಕಾರಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದು, ಏ.28 ರಿಂದ ಚಿತಾಗಾರ ಕಾರ್ಯಾರಂಭ ಮಾಡುವುದಾಗಿ ಆರ್.ಅಶೋಕ್ ತಿಳಿಸಿದರು.

    ತಲೆನೋವಾದ ಸೋಂಕಿತರ ನಾಪತ್ತೆ: ಸೋಂಕು ದೃಢಪಡುತ್ತಿದ್ದಂತೆ ರೋಗಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕಕ್ಕೆ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ. ಪರಿಸ್ಥಿತಿ ಕೈಮೀರಿದಾಗ ಆಸ್ಪತ್ರೆಗೆ ಆಗಮಿಸುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಸಾವು ಸಂಭವಿಸುತ್ತಿದೆ. ಮನೆಯಲ್ಲಿಯೇ ಇದ್ದುಕೊಂಡು ಕುಟುಂಬದವರಿಗೂ ಸೋಂಕು ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಅಪಾಯ ತಪ್ಪಲಿದೆ ಎಂದು ಸಚಿವರು ತಿಳಿಸಿದರು.
    ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಕಿತ್ತನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗಿಡ್ಡೇನಹಳ್ಳಿ ಗ್ರಾಮದ ಸರ್ವೇ ನಂ. 80ರಲ್ಲಿ ಸುಮಾರು 92 ಎಕರೆ ಸರ್ಕಾರಿ ಗೋಮಾಳ ಜಾಗದ ಪೈಕಿ 5 ಎಕರೆ ಜಾಗದಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಚಿತಾಗಾರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಹಸೀಲ್ದಾರ್ ಬಾಲಕೃಷ್ಣ ಮಾಹಿತಿ ನೀಡಿದರು.

    ಡಿವೈಎಸ್‌ಪಿ ಜಗದೀಶ್, ಮಾದನಾಯಕಹಳ್ಳಿ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ್, ಸಂಚಾರಿ ಠಾಣೆೆ ವೃತ್ತ ನಿರೀಕ್ಷಕ ಅರುಣ್, ಬಿಬಿಎಂಪಿ ಇಂಜಿನಿಯರ್ ಎಸ್.ಪಿ.ರಂಗನಾಥ್, ದೇವೇಂದ್ರಸಿಂಗ್, ರಾಜಸ್ವ ನಿರೀಕ್ಷ ಅನಂತಪದ್ಮನಾಭ್, ಗ್ರಾಮಲೆಕ್ಕಾಧಿಕಾರಿ ಜಗದೀಶ್, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts