More

    ಚಿಗುರೊಡೆದಿದೆ ಉತ್ತಮ ಇಳುವರಿಯ ನಿರೀಕ್ಷೆ

    ಲಕ್ಷ್ಮೇಶ್ವರ: ಈ ಬಾರಿ ಮಾವು ಬೆಳೆಗೆ ಪೂರಕ ವಾತಾವರಣವಿದೆ. ಮಾವಿನ ಮರಗಳು ಮೈತುಂಬ ಹೂವು ಮುಡಿದುಕೊಂಡು ಬೀಗುತ್ತಿವೆ. ತಾಲೂಕಿನಲ್ಲಿ ಬಹುತೇಕ ರೈತರು ಬೋರ್​ವೆಲ್ ನೀರನ್ನೇ ನಂಬಿ ಮಾವು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಿಂದಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು.

    ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಗದಗ ಜಿಲ್ಲೆಯಲ್ಲಿ 12000 ಹೆಕ್ಟೇರ್​ಗಿಂತ ಹೆಚ್ಚು ಮತ್ತು ತಾಲೂಕಿನಲ್ಲಿ 180 (450 ಎಕರೆ) ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ತಾಲೂಕಿನ ಲಕ್ಷ್ಮೇಶ್ವರ, ಬಾಲೇಹೊಸೂರು, ದೊಡ್ಡೂರು, ಉಂಡೇನಹಳ್ಳಿ, ಶ್ಯಾಬಳಾ, ರಾಮಗೇರಿ, ಸೂರಣಗಿ ಮೊದಲಾದವು ಮಾವು ಬೆಳೆಯುವ ಪ್ರದೇಶಗಳು. ಜನವರಿ ಕೊನೇ ವಾರ ಎರಡು ಬಾರಿ ಇಬ್ಬನಿ ಬಿದ್ದು ಹಾಗೂ ಜಿಗಿಹುಳು, ಬೂದುರೋಗದಿಂದ ಮಾವಿನ ಹೂವುಗಳು ಉದುರುತ್ತಿರುವುದು ಕೆಲವು ರೈತರಲ್ಲಿ ಆತಂಕ ಮೂಡಿಸಿದೆ.

    ತಾಲೂಕಿನಲ್ಲಿ ಮಾವು ಬೆಳೆಗೆ ಮುಂಜಾಗ್ರತೆ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್, 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾರ್ಬನ್ ಡೈಜಿಮ್ ಬೆರೆಸಿ ಸಿಂಪಡಿಸುವುದರಿಂದ ಜಿಗಿ ಮತ್ತು ಬೂದು ರೋಗ ತಡೆಗಟ್ಟಬಹುದು. ಮಾವಿನ ಕಾಯಿಗಳ ಮೇಲೆ ಕಂದು ಅಥವಾ ಕಪ್ಪು ಚುಕ್ಕೆ ಕಂಡುಬಂದರೆ 10 ಲೀಟರ್ ನೀರಿಗೆ 2 ಗ್ರಾಂ ಸ್ಟೆವೋಮೈಸಿನ್ ಸಲ್ಪೇಟ್ 200 ಪಿಪಿಎ ಅನ್ನು ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಗುಣಮಟ್ಟದ ಹಣ್ಣನ್ನು ಪಡೆಯಲು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಮಾವು ಸ್ಪೇಷಲ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಒಂದು ವೇಳೆ ಗಿಡದಲ್ಲಿ ಅತಿಯಾಗಿ ರೋಗ ಆವರಿಸಿದ್ದ ಟೊಂಗೆ ಗುರುತಿಸಿ ಅದನ್ನು ಕತ್ತರಿಸಿ ಹೂಳಬೇಕು ಇಲ್ಲವೇ ನಾಶಪಡಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ತೋಟಗಾರಿಕೆ ಇಲಾಖೆಯನ್ನು ಸಂರ್ಪಸಿ.
    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ನಾವು 6 ಎಕರೆ ಜಮೀನಿನಲ್ಲಿ ಮಾವು ಬೆಳೆದಿದ್ದು, ಗಿಡಗಳು ಇನ್ನೂ ಚಿಕ್ಕದಾಗಿದ್ದರೂ ಹೆಚ್ಚು ಹೂವು ಬಿಟ್ಟಿವೆ. ಈ ವರ್ಷ ಉತ್ತಮ ಫಸಲು ನಿರೀಕ್ಷಿಸಿದ್ದೇವೆ. ಮಾವು ಬೆಳೆ ಕೈಗೆ ಬಂದಾಗ ಉತ್ತಮ ಬೆಲೆ ಮತ್ತು ಸಂಗ್ರಹಿಸಿಡುವ ಹವಾನಿಯಂತ್ರಿತ ವ್ಯವಸ್ಥೆಯಾದರೆ ಅನಕೂಲವಾಗುತ್ತದೆ.
    | ದೊಡ್ಡೂರಿನ ತೇಜಸ್ ಕುಲಕರ್ಣಿ, ಲಕ್ಷ್ಮೇಶ್ವರದ ಮೋಹನ ಕುರ್ಡೆಕರ, ಮಾವು ಬೆಳೆಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts