More

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೆ ಹಕ್ಕಿಜ್ವರದ ಆತಂಕ ; ಕಾದಲವೇಣಿ ಕೆರೆಯಲ್ಲಿ 40 ಪಕ್ಷಿಗಳ ಸಾವು!

    ಗೌರಿಬಿದನೂರು: ಚಿಕ್ಕಬಳ್ಳಾಪುರ ತಾಲೂಕು ಅಣಕನೂರು ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಪಕ್ಷಿಗಳು ಅನುಮಾಸ್ಪದವಾಗಿ ಮೃತಪಟ್ಟು ಹಕ್ಕಿ ಜ್ವರದ ಆತಂಕ ಸೃಷ್ಟಿಸಿದ್ದ ಪ್ರಕರಣ ಮಾಸುವ ಮುನ್ನವೇ ಗೌರಿಬಿದನೂರು ತಾಲೂಕಿನ ಕಾದಲವೇಣಿಯ ಕೆರೆಯಲ್ಲಿ ವಿವಿಧ ಜಾತಿಯ ವಲಸೆ ಹಕ್ಕಿಗಳು ಸೇರಿ 40 ರಿಂದ 50 ಕೊಕ್ಕರೆಗಳು ಒಮ್ಮೆಲೆ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

    ಹಕ್ಕಿಗಳು ಮೃತಪಟ್ಟಿರುವ ಕುರಿತು ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ, ಪಶು ಸಂಗೋಪನಾ, ಅರಣ್ಯ ಇಲಾಖೆ ಅಧಿಕಾರಿಗಳು, ತಿಪ್ಪಗಾನಹಳ್ಳಿ ಕೆರೆಯಿಂದ ತೆಪ್ಪ ತರಿಸಿಕೊಂಡು ಮೃತಪಟ್ಟ ಹಾಗೂ ನಿತ್ರಾಣಗೊಂಡ ಪಕ್ಷಿಗಳನ್ನು ಸಂಗ್ರಹಿಸಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಕೆರೆಗೆ ಯಾವುದೇ ರೀತಿಯ ಕಲುಷಿತ ನೀರು ಹರಿದಿಲ್ಲ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ತಾಲೂಕಿಗೆ ಆ ಭಾಗದಿಂದ ವಲಸೆ ಬಂದಿರುವ ಪಕ್ಷಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂಬ ಅನುಮಾನ ಕಾಡುತ್ತಿದೆ.

    ಯಾವುದೇ ಆತಂಕ ಬೇಡ: ಕೊಕ್ಕರೆಗಳ ಸಾವಿಗೆ ಹಕ್ಕಿಜ್ವರ ಕಾರಣವೋ ? ಇಲ್ಲವೋ? ಎನ್ನುವುದು ದೃಢಪಟ್ಟಿಲ್ಲ. ಮೃತಪಟ್ಟ ಹಕ್ಕಿಗಳನ್ನು ಆಳವಾದ ಗುಂಡಿಯಲ್ಲಿ ಮಣ್ಣಿನೊಂದಿಗೆ ಉಪ್ಪು ಮತ್ತು ಸುಣ್ಣ ಮಿಶ್ರಣ ಮಾಡಿ ಹೂಳಲಾಗುತ್ತದೆ. ಈಗಾಗಲೇ ಕೆರೆಯ ಸುತ್ತ ಸಮರ್ಪಕ ಪರಿಶೀಲನೆಯ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆತಂಕಪಡುವ ಅಗತ್ಯ ಇಲ್ಲ ಎಂದು ತಾಲೂಕು ಆಡಳಿತ ತಿಳಿಸಿದೆ.

    ಈಗಾಗಲೇ 3 ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 24 ಗಂಟೆಯೊಳಗೆ ವರದಿ ಬರಲಿದೆ. ಇದರಿಂದ ಸಾವಿಗೆ ನಿಖರ ಕಾರಣ ತಿಳಿಯುತ್ತದೆ.
    ಡಾ.ರಾಘವೇಂದ್ರ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ, ಗೌರಿಬಿದನೂರು

    ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೃತಪಟ್ಟ ಎಲ್ಲ ಕೊಕ್ಕರೆಗಳನ್ನು ಆಳವಾದ ಗುಂಡಿಯಲ್ಲಿ ಹೂಳಲಾಗುತ್ತದೆ.
    ಕರಿಯಪ್ಪ, ಪಿಡಿಒ, ಕಾದಲವೇಣಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts