More

    ಚಿಕಿತ್ಸೆಗೆ ನಿರಾಕರಿಸಿದರೆ ಕಠಿಣ ಕ್ರಮ

    ಹಾವೇರಿ: ಜಿಲ್ಲಾ ಹಾಗೂ ತಾಲೂಕು ಕೋವಿಡ್ ಆಸ್ಪತ್ರೆಗಳಲ್ಲಿ ಪಾಸಿಟಿವ್ ವ್ಯಕ್ತಿಗಳ ದಾಖಲಾತಿ, ಚಿಕಿತ್ಸೆ, ವೈದ್ಯರ ಹಾಜರಾತಿ ಸೇರಿ ಸಮಗ್ರ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಗೆ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

    ಕೋವಿಡ್ ನಿರ್ವಹಣೆ ಹಾಗೂ ಮಳೆ ಹಾನಿ, ನೆರೆ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಭವನದಲ್ಲಿ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಬೆಡ್​ಗಳು ಇಲ್ಲ ಎಂದು ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ಇರುವ ಕುರಿತು ದೂರುಗಳು ಬಂದಿವೆ. ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ವ್ಯಕ್ತಿಗಳನ್ನು ಬೆಡ್ ಇಲ್ಲ ಎಂದು ಚಿಕಿತ್ಸೆಗೆ ನಿರಾಕರಿಸಿ ವಾಪಸ್ ಕಳುಹಿಸಿದರೆ, ಡಿಎಚ್​ಒ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೇಲೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಬ್ಯಾಡಗಿಯಲ್ಲಿ ತ್ವರಿತವಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕು. ಸವಣೂರ, ಹಾನಗಲ್ಲ, ರಾಣೆಬೆನ್ನೂರ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆಗಳ ಹೆಚ್ಚಳ ಮಾಡಬೇಕು. ಬಂಕಾಪುರದಲ್ಲಿ 30 ಹಾಸಿಗೆಗಳ ಆಕ್ಸಿಜನ್ ಪೂರೈಕೆ ವ್ಯವಸ್ಥೆಯನ್ನು ವಾರದಲ್ಲಿ ಸಿದ್ಧಪಡಿಸಬೇಕು. ಅಗತ್ಯ ಔಷಧ ಖರೀದಿ, ಆಕ್ಸಿಜನ್ ಟ್ಯಾಂಕ್​ಗಳ ಖರೀದಿಗೆ ತುರ್ತು ಕ್ರಮವಹಿಸಬೇಕು. ಕೋವಿಡ್ ಸೋಂಕಿನಿಂದ ಮರಣಹೊಂದುವುದನ್ನು ತಪ್ಪಿಸಬೇಕು ಎಂದು ತಾಕೀತು ಮಾಡಿದರು.

    ಮನೆ ಹಾನಿ ಸರ್ವೆ: ಬೆಳೆ ಹಾಗೂ ಮನೆ ಹಾನಿ ಸರ್ವೆಯಲ್ಲಿ ಕಳೆದ ನೆರೆಯ ಸಂದರ್ಭದಲ್ಲಿ ನಡೆದ ತಪ್ಪುಗಳು ಮರುಕಳಿಸಬಾರದು. ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರದ ದೂರುಗಳು ಬಂದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಮಳೆಯಿಂದಾಗಿ ಜಿಲ್ಲೆಯಲ್ಲಿ 988 ಮನೆಗಳು ಭಾಗಶಃ ಹಾಗೂ ನಾಲ್ಕು ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

    ಎಸ್ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts