More

    ಚಾಳಕಾಪುರ ಮಾದರಿ ಧಾರ್ಮಿಕ ಕೇಂದ್ರಕ್ಕೆ ಪ್ರಯತ್ನ

    ಭಾಲ್ಕಿ: ಪವಾಡ ಪುರುಷ, ಮಹಾ ಸಂತ ಶ್ರೀ ಸಿದ್ಧಾರೂಢರ ಜನ್ಮಸ್ಥಳವಾದ ಸುಕ್ಷೇತ್ರ ಚಾಳಕಾಪುರವನ್ನು ರಾಜ್ಯದ ಮಾದರಿ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದರು.

    ಚಾಳಕಾಪುರದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದ ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ಧಾರೂಢರ 186ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಗ್ರಾಮದಿಂದ ಮುಖ್ಯ ರಸ್ತೆ ಅಭಿವೃದ್ಧಿಗೆ 1.70 ಕೋಟಿ ರೂ. ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬರುವ ದಿನಗಳಲ್ಲಿ ಯಾತ್ರಿ ನಿವಾಸ ಸೇರಿ ಇತರ ಪ್ರಗತಿಪರ ಕೆಲಸ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

    ಶ್ರೀ ಸಿದ್ಧಾರೂಢರು ಎಂದ ಕೂಡಲೇ ನೆನಪಿಗೆ ಬರೋದು ಹುಬ್ಬಳ್ಳಿ ಮಾತ್ರ. ಆದರೆ ಬಹುತೇಕರಿಗೆ ಶ್ರೀಗಳ ಜನ್ಮಸ್ಥಳ ಚಾಳಕಾಪುರ ಎಂಬುದೇ ಗೊತ್ತಿರಲಿಲ್ಲ. ಶ್ರೀ ಶಿವಕುಮಾರ ಸ್ವಾಮೀಜಿ ದೂರದೃಷ್ಟಿತ್ವದಿಂದ ಶ್ರೀಗಳ ಜನ್ಮ ಸ್ಥಳಕ್ಕೆ ಹೊಸ ಮೆರುಗು ಬಂದಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಚಾಳಕಾಪುರದತ್ತ ಬರುವಂತೆ ಮಾಡಲಾಗುವುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಬೀದರ್ ಚಿದಂಬರಾಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, 1972ರಲ್ಲಿ ಕನಸಿನಲ್ಲಿ ಸಿದ್ಧಾರೂಢರು ಬಂದು ಆಜ್ಞಾಪಿಸಿದ ಬಳಿಕ ಅವರ ಜನ್ಮಸ್ಥಳದಲ್ಲಿ ಬೃಹತ್ ಮತ್ತು ಸುಂದರವಾದ ಮಂದಿರ ನಿರ್ಮಿಸಿರುವೆ. ಈ ಕಾರ್ಯಕ್ಕೆ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಕೊಡುಗೆ ಅಪಾರ. ವಿಶೇಷವಾಗಿ ನಮ್ಮ ಮಠದ ಬಗ್ಗೆ ಖಂಡ್ರೆ ಪರಿವಾರ ಅಪಾರ ಭಕ್ತಿ, ಶ್ರದ್ಧೆ ಹೊಂದಿದೆ ಎಂದು ಹೇಳಿದರು.

    ಶ್ರೀ ಪ್ರಣಾವನಂದ ಸ್ವಾಮೀಜಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ, ಶ್ರೀ ಸದ್ರೂಪಾನಂದ ಸ್ವಾಮೀಜಿ, ಮಾತೋಶ್ರೀ ವಿದ್ಯಾವತಿ, ಶ್ರೀ ಶಿವಶಂಕರ ಸ್ವಾಮೀಜಿ, ಮಾತೋಶ್ರೀ ಲಕ್ಷ್ಮೀದೇವಿ, ಶ್ರೀ ಜಡಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಪೂರ್ಣಾನಂದ ಸ್ವಾಮೀಜಿ, ಮಾತೋಶ್ರೀ ಆನಂದಮಯಿ, ಶ್ರೀ ವೀರೇಶಾನಂದ ಸ್ವಾಮೀಜಿ, ಶ್ರೀ ಸತೀಶ ಸ್ವಾಮೀಜಿ, ಚಿದಂಬರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚನ್ನಬಸಪ್ಪ ಹಾಲಹಳ್ಳಿ, ಪ್ರಮುಖರಾದ ಬಸವರಾಜ ಜಾಬಶೆಟ್ಟೆ, ಮಡಿವಾಳಪ್ಪ ಮಂಗಲಗಿ, ಬಿ.ಜಿ. ಶೆಟಕಾರ, ಗ್ರಾಪಂ ಅಧ್ಯಕ್ಷೆ ಸುಧಾರಾಣಿ ಬಾಯಪ್ಪನೋರ್, ತಾಪಂ ಮಾಜಿ ಸದಸ್ಯ ಕಿಶೋರ ಕುಲಕರ್ಣಿ ಇತರರಿದ್ದರು. ಗಣಪತಿ ಮಹಾರಾಜ ನಿರೂಪಣೆ ಮಾಡಿದರು.

    ಭವ್ಯ ರಥೋತ್ಸವ 10ರಂದು: ಚಾಳಕಾಪುರದಲ್ಲಿ ಒಂದು ವಾರ ನಡೆಯುವ ಸಿದ್ಧಾರೂಢರ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಿದ್ದು, 10ರವರೆಗೆ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪ್ರವಚನ, ಸಿದ್ಧಾರೂಢರ ಜೀವನ ಚರಿತ್ರೆ ಪಾರಾಯಣ, ಅಭಿಷೇಕ ಇತರ ನಡೆಯಲಿದ್ದು, 10ರಂದು ಸಂಜೆ 5ಕ್ಕೆ ಭವ್ಯ ರಥೋತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts