More

    ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಹಳೆಯ ಸಂಪ್ರದಾಯ ಮತ್ತೆ ಮುಂದುವರಿಯಲಿದೆಯೇ?

    ವಿನಾಶ್ ಜೈನಹಳ್ಳಿ ಮೈಸೂರು
    ಈ ಬಾರಿಯಾದರೂ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಭಾಗ್ಯ ದೊರೆಯಲಿದೆಯೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಈಗಲಾದರೂ ಚಾಮರಾಜ ಕ್ಷೇತ್ರದಲ್ಲಿ ಗೆದ್ದ ಶಾಸಕರೊಬ್ಬರಿಗೆ ಮತ್ರಿ ಭಾಗ್ಯ ದೊರೆಯಲಿದೆಯೇ? ಅಥವಾ ಹಳೆಯ ಸಂಪ್ರದಾಯ ಮತ್ತೆ ಮುಂದುವರಿಯಲಿದೆಯೇ?

    ಮೈಸೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ, ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿರುವ ‘ಚಾಮರಾಜ’ ಕ್ಷೇತ್ರಕ್ಕೆ ಇಲ್ಲಿಯವರೆಗೂ ಸಚಿವ ಸ್ಥಾನ ಒಲಿದು ಬಂದಿಲ್ಲ. ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರ ಪೈಕಿ ಈವರೆಗೆ ಯಾರೊಬ್ಬರಿಗೂ ಮಂತ್ರಿಯಾಗುವ ‘ಯೋಗ’ ಒದಗಿ ಬರಲಿಲ್ಲ. ಈ ಬಾರಿಯಾದರೂ ಕ್ಷೇತ್ರದ ಶಾಪ ವಿಮೋಚನೆಯಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
    ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಹುಣಸೂರು ಮತ್ತು ವರುಣ ಕ್ಷೇತ್ರಗಳಿಗೆ ಮುಖ್ಯಮಂತ್ರಿ ‘ಯೋಗ’ ಒದಗಿದೆ. ಚಾಮುಂಡೇಶ್ವರಿ ಕ್ಷೇತ್ರಕ್ಕೂ ಎರಡು ಬಾರಿ ‘ಉಪ ಮುಖ್ಯಮಂತ್ರಿ’ ಯೋಗ ಒಲಿದಿದೆ. ಉಳಿದ ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ನಂಜನಗೂಡು, ತಿ. ನರಸೀಪುರ, ನರಸಿಂಹರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಶಾಸಕರೂ ಸಚಿವರಾಗಿದ್ದಾರೆ. ಆದರೆ ಚಾಮರಾಜ ಕ್ಷೇತ್ರ ಮಾತ್ರ ಸಚಿವ ಸ್ಥಾನಮಾನದಿಂದ ವಂಚಿತವಾಗಿದೆ.

    ಈ ಕ್ಷೇತ್ರದಲ್ಲಿ 1978ರಿಂದ ಇಲ್ಲಿಯವರೆಗೆ ಎರಡು ಉಪ ಚುನಾವಣೆ ಸೇರಿದಂತೆ ಒಟ್ಟು 13 ಚುನಾವಣೆಗಳು ನಡೆದಿದ್ದು, ಒಟ್ಟು 10 ಶಾಸಕರನ್ನು ಕಂಡಿದೆ. ಈ ಪೈಕಿ ಎಚ್.ಎಸ್.ಶಂಕರಲಿಂಗೇಗೌಡ ಸತತ 4 ಬಾರಿ ಇಲ್ಲಿಂದ ಆಯ್ಕೆಯಾಗಿದ್ದರು. ಆದರೆ ಶಾಸನ ಸಭೆಯಲ್ಲಿ ಕ್ಷೇತ್ರ ಪ್ರತಿನಿಧಿಸುವವರು ಒಂದು ಪಕ್ಷಕ್ಕೆ ಸೇರಿದವರಾದರೆ, ಸರ್ಕಾರವನ್ನು ನಡೆಸುವವರು ಮತ್ತೊಂದು ಪಕ್ಷದವರಾಗಿರುತ್ತಿದ್ದರು. ಕೆಲವು ಬಾರಿ ಅಧಿಕಾರ ಹಿಡಿದ ಪಕ್ಷದ ಪ್ರತಿನಿಧಿಗಳು ಮೊದಲ ಬಾರಿಗೆ ಈ ಕ್ಷೇತ್ರದಿಂದ ಶಾಸಕರಾಗಿರುತ್ತಿದ್ದುದು ಮಂತ್ರಿಸ್ಥಾನ ದೊರಕದಿರುವುದಕ್ಕೆ ಕಾರಣಗಳಾಗಿವೆ. ವಿಪರ್ಯಾಸವೆಂದರೆ, ಎಚ್.ಎಸ್.ಶಂಕರಲಿಂಗೇಗೌಡರ ವಿಷಯದಲ್ಲಿ ಮೇಲಿನ ಎರಡೂ ಕಾರಣಗಳು ಅನ್ವಯಿಸುವುದಿಲ್ಲ. ಹಿರಿತನ, ಅನುಭವ, ಶಾಸಕರು ಪ್ರತಿನಿಧಿಸುತ್ತಿದ್ದ ಪಕ್ಷವೇ ಅಧಿಕಾರ ನಡೆಸಿರುವುದು ಸೇರಿದಂತೆ ಎಲ್ಲ ಅವಕಾಶಗಳಿದ್ದರೂ ಅವರಿಗೆ ಮಂತ್ರಿಸ್ಥಾನ ಸಿಗಲಿಲ್ಲ.

    ಹರೀಶ್‌ಗೌಡರಿಗೆ ಸಿಗಲಿದೆಯಾ ಮಂತ್ರಿ ಸ್ಥಾನ?


    ಈ ಬಾರಿ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾದ ಕೆ. ಹರೀಶ್‌ಗೌಡ ಅವರು ಗೆದ್ದಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ಪೀಕರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನಡೆಯಬೇಕಿದೆ. ಈ ಬಾರಿಯಾದರೂ ‘ಚಾಮರಾಜ’ ಭವಿಷ್ಯದ ಸಂಪುಟದಲ್ಲಿ ಸ್ಥಾನ ಪಡೆಯುವರೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಹರೀಶ್‌ಗೌಡ ಇದೇ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಹಾಗಾಗಿ ಅವರಿಗೆ ಮಂತ್ರಿ ಭಾಗ್ಯ ದೊರೆಯಲಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನ ಈ ಐದು ವರ್ಷದ ಅವಧಿಯಲ್ಲಾದರೂ ಕ್ಷೇತ್ರದ ಶಾಸಕರಿಗೆ ಮಂತ್ರಿ ಸ್ಥಾನ ದೊರೆತು ಶಾಪ ವಿಮೋಚನೆ ಆಗಲಿದೆಯೇ? ಅಥವಾ ಕ್ಷೇತ್ರದ ಶಾಸಕರಿಗೆ ಮಂತ್ರಿ ಭಾಗ್ಯದ ಯೋಗ ದೊರೆಯುವುದಿಲ್ಲ ಎನ್ನುವ ಹಳೆಯ ಸಂಪ್ರದಾಯ ಮುಂದುವರಿಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

    ಶಂಕರಲಿಂಗೇಗೌಡರಿಗೂ ಸಿಗದ ಭಾಗ್ಯ

    1994, 1999, 2004 ಮತ್ತು 2008ರ ಚುನಾವಣೆಗಳಲ್ಲಿ ಎಚ್.ಎಸ್.ಶಂಕರಲಿಂಗೇಗೌಡ ಬಿಜೆಪಿಯಿಂದ ಸ್ಪರ್ಧಿಸಿ ಸತತ ಶಾಸಕರಾಗಿ ಆಯ್ಕೆಯಾದರು. ಈ ಪೈಕಿ 1994ರಲ್ಲಿ ಜನತಾದಳ ಮತ್ತು 1999ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದವು. ಆದರೆ 2004ರ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕದ ಕಾರಣ ಒಂದು ಅವಧಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಇನ್ನೊಂದು ಅವಧಿಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿದವು. 2008ರ ಚುನಾವಣೆಯಲ್ಲಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದು ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಕ್ರಮವಾಗಿ ಮುಖ್ಯಮಂತ್ರಿಗಳಾದರು. ಆದರೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಾಗಲಿ ಅಥವಾ ನಂತರದ ಬಿಜೆಪಿ ಸರ್ಕಾರದಲ್ಲಾಗಲಿ ಶಂಕರಲಿಂಗೇಗೌಡರಿಗೆ ಅವಕಾಶ ಇದ್ದರೂ ಸಚಿವ ಸ್ಥಾನ ನೀಡಲಿಲ್ಲ.

    ವಾಸು, ನಾಗೇಂದ್ರಗೂ ಇಲ್ಲ ಅದೃಷ್ಟ!

    ಈ ಹಿಂದಿನ ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ವಾಸು ಅವರು 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಆಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪ್ರಥಮ ಬಾರಿಗೆ ಗೆದ್ದ ಕಾರಣ ವಾಸು ಅವರು ಸಚಿವರಾಗಲು ಸಾಧ್ಯವಾಗಲಿಲ್ಲ. 2018ರ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಎಲ್. ನಾಗೇಂದ್ರ ಪ್ರಥಮ ಬಾರಿಗೆ ಜಯ ಗಳಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಅವರಿಗೆ ಸಚಿವರಾಗುವ ಅವಕಾಶ ದೊರೆಯಲಿಲ್ಲ.

    ಮಂತ್ರಿಪಟ್ಟ ದೊರೆಯದ ಕ್ಷೇತ್ರವಿದು

    1978ರಲ್ಲಿ ಚಾಮರಾಜ ಕ್ಷೇತ್ರ ರಚನೆಯಾದಾಗ ಮೊದಲ ಬಾರಿಗೆ ಜನತಾ ಪಕ್ಷದ ಕೆ.ಪುಟ್ಟಸ್ವಾಮಿ ಶಾಸಕರಾಗಿ ಆರಿಸಿ ಬಂದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಕ್ಷೇತ್ರದ ಪ್ರತಿನಿಧಿ ಜನತಾ ಪಕ್ಷದವರಾಗಿದ್ದುದರಿಂದ ಪುಟ್ಟಸ್ವಾಮಿ ಮಂತ್ರಿ ಆಗಲಿಲ್ಲ. ಆದರೆ ಅವರು ಅದಕ್ಕೂ ಮುನ್ನ ಒಂದು ಬಾರಿ ಶ್ರೀರಂಗಪಟ್ಟಣ ಹಾಗೂ ನಾಲ್ಕು ಬಾರಿ ಮೈಸೂರು ತಾಲೂಕು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸುವ ಮುನ್ನವೇ ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಚಾಮರಾಜದಿಂದ ಗೆದ್ದಾಗ ಅವರು ಸಚಿವರಾಗಲಿಲ್ಲ ಎನ್ನುವುದು ವಿಶೇಷ. ಕೆ.ಪುಟಸ್ವಾಮಿ ಅವರು ಕೆಲವೇ ದಿನಗಳಲ್ಲಿ ನಿಧನರಾದ್ದರಿಂದ ಅದೇ ವರ್ಷ ಉಪ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಿ.ಎನ್.ಕೆಂಗೇಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರೂ ಸಚಿವರಾಗಲಿಲ್ಲ.

    1983ರ ಚುನಾವಣೆಯಲ್ಲಿ ಜನತಾ ಪಕ್ಷದ ಎಚ್.ಕೆಂಪೇಗೌಡ ಆರಿಸಿ ಬಂದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಪಕ್ಷ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ನಂತರ 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಕೆ.ಕೆಂಪೀರೇಗೌಡ ಆಯ್ಕೆಯಾದರು. ಕೆ.ಕೆಂಪೀರೇಗೌಡರ ನಿಧನದಿಂದ 1986ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾ ಪಕ್ಷದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಆಯ್ಕೆಯಾದರು. ಅದೇ ಪಕ್ಷದ ರಾಮಕೃಷ್ಣ ಹೆಗಡೆ ಅವರೇ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. 1988ರಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರಿಂದ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆದರೆ ತಮ್ಮದೇ ಪಕ್ಷದ ಸರ್ಕಾರವಿದ್ದರೂ ಮೊದಲ ಬಾರಿಗೆ ಆಯ್ಕೆಯಾಗಿದ್ದ ಕೆಂಪೇಗೌಡ, ಕೆಂಪೀರೇಗೌಡ ಮತ್ತು ಚಿಕ್ಕಬೋರಯ್ಯ ಸಚಿವರಾಗಲು ಸಾಧ್ಯವಾಗಲಿಲ್ಲ. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಹರ್ಷಕುಮಾರ್‌ಗೌಡ ಶಾಸಕರಾಗಿ ಆಯ್ಕೆಯಾದರು. ಆ ವೇಳೆ ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿತು. ಮೊದಲ ಬಾರಿಗೆ ಆಯ್ಕೆಯಾಗಿದ್ದರಿಂದ ಅವರಿಗೂ ಮಂತ್ರಿ ಸ್ಥಾನ ದೊರೆಯಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts