More

    ಚವ್ಹಾಣ್ ಜಾತಿ ಮೂಲ ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ

    ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಖೊಟ್ಟಿ ದಾಖಲೆ ಸೃಷ್ಟಿಸಿ ಎಸ್ಸಿ(ಲಂಬಾಣಿ) ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಕುರಿತು ಸಚಿವರ ವಿರುದ್ಧ ಜಿಲ್ಲಾಧಿಕಾರಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿರುವುದಾಗಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ಕೌಡಾಳ್ ಹೇಳಿದ್ದಾರೆ.
    ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ(ಉದ್ಯೋಗ ಮೀಸಲಾತಿ) ತಿದ್ದುಪಡಿ ಕಾಯ್ದೆ ಕಲಂ 4(ಎಫ್) ಅಡಿ ಕಳೆದ 26ರಂದು ಜಿಲ್ಲಾಧಿಕಾರಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಇದರ ಅನ್ವಯ ಡಿಸಿ ಅವರು ಸಚಿವ ಪ್ರಭು ಚವ್ಹಾಣ್ ಅವರಿಗೆ ಜೂ. 3ರಂದು ನೋಟಿಸ್ ಜಾರಿಗೊಳಿಸಿ, 15 ದಿನದಲ್ಲಿ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಚವ್ಹಾಣ್ ಅವರು ಮಹಾರಾಷ್ಟ್ರ ಮೂಲದವರಿದ್ದಾರೆ. ಮಹಾರಾಷ್ಟ್ರದ ಉದಗೀರ ತಾಲೂಕಿನ ತೊಂಡಚೀರ ಗ್ರಾಮದಲ್ಲಿ ಜನಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಲಂಬಾಣಿ ಜಾತಿ ಎಸ್ಸಿಗೆ ಬರುವುದಿಲ್ಲ. ಆದರೆ 2008 ರಲ್ಲಿ ಔರಾದ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಇಲ್ಲಿಗೆ ಆಗಮಿಸಿ ಬೋಂತಿ ತಾಂಡಾ ವಾಸಿ ಎಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಲಂಬಾಣಿ-ಎಸ್ಸಿ ಪ್ರಮಾಣಪತ್ರ ಪಡೆದಿದ್ದಾರೆ. ಹಿಂದೆಯೂ ಈ ಕುರಿತು ಅವರ ವಿರುದ್ಧ ದೂರು ದಾಖಲಾಗಿದ್ದವು. ಆದರೆ ತಮ್ಮ ಪ್ರಭಾವ ಬಳಸಿ ಕ್ರಮಗಳಿಂದ ಪಾರಾಗಿದ್ದಾರೆ. ಇದರ ಬಗ್ಗೆ ಮತ್ತೆ ಸಮರ ನಡೆಸಲು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವೆ. ನ್ಯಾಯ ಸಿಗುವವರೆಗೆ ಹೋರಾಡುವೆ ಎಂದರು.
    ಜಿಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ, ನಕಲಿ ಜಾತಿ ಪತ್ರ ಮೇಲೆ ಚವ್ಹಾಣ್ ಅವರು ಅಧಿಕಾರದ ರುಚಿಯನ್ನು ಅನುಭವಿಸುತ್ತಿದ್ದಾರೆ. ಈಗ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದರು. ಸಚಿವರಿಗೆ ಡಿಸಿ ಹೊರಡಿಸಿದ ನೋಟಿಸ್ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts