More

    ಚಳ್ಳಕೆರೆ, ಮೊಳಕಾಲ್ಮುರಿಗೆ ನ್ಯಾಯ ಒದಗಿಸಿ

    ಚಿತ್ರದುರ್ಗ: ಶತಮಾನಗಳಿಂದ ವಂಚಿತವಾಗಿರುವ ಚಳ್ಳಕೆರೆ, ಮೊಳಕಾಲ್ಮುರು ತಾಲೂಕುಗಳಿಗೆ ನ್ಯಾಯ ಒದಗಿಸಿ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಲಾಭ ಈ ಭಾಗಗಳ ಜನರು ಪಡೆಯುವಂತೆ ಮಾಡಿ ಎಂದು ಗುರುವಾರ ನಡೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದರು.

    ಯೋಜನೆ ಘೋಷಣೆಯಾಗಿ 20 ವರ್ಷವಾಗಿದೆ. ಈ ನಡುವೆ ಮೇಲ್ಭಾಗದ ಪ್ರದೇಶಗಳನ್ನು ಇದರ ವ್ಯಾಪ್ತಿಗೆ ಸೇರಿಸಿ, ಕೆರೆಗಳಿಗೆ ನೀರುಣಿಸಲು ವಿಸ್ತರಣೆಯಾಗುತ್ತಿದೆ. ಇದರಿಂದಾಗಿ ಕಡೆಯ ಭಾಗದ ತಾಲೂಕುಗಳಿಗೆ ಅನ್ಯಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಜಲಸಂಪನ್ಮೂಲ ಸಚಿವರು ಇದಕ್ಕೆ ಮಿತಿ ನಿಗದಿಗೊಳಿಸಿ. ಆರಂಭದಲ್ಲಿ 2.5 ಸಾವಿರ ಕೋಟಿ ರೂ. ಇದ್ದ ಯೋಜನಾ ವೆಚ್ಚವಿಂದು 21ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಈವರೆಗೂ 7.5 ಸಾವಿರ ಕೋಟಿ ರೂ. ಖರ್ಚಾಗಿದೆ. ಆದರೂ ಚಳ್ಳಕೆರೆ, ಮೊಳಕಾಲ್ಮೂರು ಭಾಗಕ್ಕೆ ಲಾಭವಾಗಿಲ್ಲ. ಹೀಗಾಗಿ ಆದ್ಯತೆ ನೀಡಬೇಕು. 2,25,151 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶಿತ ಯೋಜನೆಯಿಂದ ಕ್ಷೇತ್ರದ 367 ಕೆರೆಗಳಿಗೆ ನೀರು ಹರಿಯಲಿದೆ ಎಂದು ಮನವರಿಕೆ ಮಾಡಿದರು.

    ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈ ಯೋಜನೆಗೆ 5,300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಅನುದಾನ ದೊರೆತಲ್ಲಿ ಕಾಮಗಾರಿ ವೇಗ ಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.

    ವಿಶೇಷ ಅನುದಾನಕ್ಕೆ ಬೇಡಿಕೆ: 2019-20ರ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಚಳ್ಳಕೆರೆ, ಮೊಳಕಾಲ್ಮುರು, ಶಿರಾ, ಪಾವಗಡ ಹಾಗೂ ಮಧುಗಿರಿ ತಾಲೂಕುಗಳ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಅನುದಾನ ನೀಡಿತ್ತು. ಆದರೆ, ಆನಂತರ ಆಡಳಿತ ನಡೆಸಿದ ಸರ್ಕಾರ ತಡೆ ಹಿಡಿದಿದೆ. ಕೂಡಲೇ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

    ಶೇಂಗಾಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಚಳ್ಳಕೆರೆ ತಾಲೂಕಿನಲ್ಲಿ ಈ ಬಾರಿ ಸಂಪೂರ್ಣ ಬರ ಆವರಿಸಿದ್ದು, ಒಟ್ಟು 85,680 ಹೆಕ್ಟೇರ್ ಪೈಕಿ 72,650 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶೇಂಗಾ ಸಂಪೂರ್ಣ ಹಾಳಾಗಿದೆ. ಹೀಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದರು. ಇದೇ ವೇಳೆ ಪರುಶುರಾಂಪುರವನ್ನು ತಾಲೂಕು ಕೇಂದ್ರವಾಗಿ ಮಾಡಬೇಕು. ಚಳ್ಳಕೆರೆ ನಗರದಲ್ಲಿ ಯುಜಿಡಿ ನಿರ್ಮಾಣಕ್ಕೆ ಅನುದಾನ ನೀಡಬೇಕು. ಪ್ರತಿ ಹೋಬಳಿಯಲ್ಲೂ ಗೋಶಾಲೆ ತೆರೆಯಲು ಮುಂದಾಗಬೇಕು. ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಸೌಲಭ್ಯ ಮಂಜೂರು ಮಾಡಬೇಕು ಎಂದು ಕೋರಿದರು.

    ಬರಗಾಲದ ಪರಿಹಾರ ಮೊತ್ತ ಸ್ವಯಂಚಾಲಿತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಕಂದಾಯ ಸಚಿವ ಕೃಷ್ಣಬೈರೇಗೌಡ ಚಳ್ಳಕೆರೆ ತಾಲೂಕು ಆಯ್ಕೆ ಮಾಡಿಕೊಂಡಿದ್ದಕ್ಕೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts