More

    ಚರ್ಮಗಂಟು ರೋಗಕ್ಕೆ ತುತ್ತಾದ ಜಾನುವಾರುಗಳ ಶುಶ್ರೂಷೆಗೆ ನಗರಸಭೆಯಿಂದ ವಿಶೇಷ ಗೋಶಾಲೆ

    ಸಾಗರ: ಚರ್ಮಗಂಟು ರೋಗಕ್ಕೆ ತುತ್ತಾಗುತ್ತಿರುವ ಜಾನುವಾರುಗಳ ಶುಶ್ರೂಷೆಗಾಗಿ ನಗರಸಭೆಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.
    ವೆಂಕಟರಮಣ ದೇವಾಲಯದ ಸಮೀಪ ನಗರಸಭೆ ನಿರ್ವಹಣೆ ಮಾಡುತ್ತಿರುವ ದನದ ದೊಡ್ಡಿಯಲ್ಲಿ ಈ ವಿಶೇಷ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಶೀಘ್ರ ಮತ್ತೊಂದು ಕೇಂದ್ರ ತೆರೆಯಲಾಗುವುದು ಎಂದು ಬುಧವಾರ ತಿಳಿಸಿದರು.
    ಸಾಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಬಿಡಾಡಿ ದನಗಳಿಗೆ ಚರ್ಮಗಂಟಿನ ರೋಗ ಕಾಣಿಸಿಕೊಂಡಿದೆ. ನಗರಸಭೆಯ ಕೇಂದ್ರದಲ್ಲಿ ಈಗಾಗಲೇ 8 ಜಾನುವಾರುಗಳಿಗೆ ನೀರು ಮತ್ತು ಮೇವಿನ ಜತೆಯಲ್ಲಿ ಶುಶ್ರೂಷೆ ನೀಡಲಾಗುತ್ತಿದೆ. ಇದು ಅಂಟುರೋಗ ಆಗಿರುವುದರಿಂದ ಜಾನುವಾರುಗಳನ್ನು ಪ್ರತ್ಯೇಕವಾಗಿ ಇಟ್ಟು ಶುಶ್ರೂಷೆ ಮಾಡಬೇಕಾಗಿದೆ. ಹಾಗಾಗಿ ಈಗ ಇರುವ ಜಾಗ ಸಾಕಾಗುವುದಿಲ್ಲ. ಶಿವಪ್ಪನಾಯಕ ನಗರದಲ್ಲಿ ಗೋ ಶಾಲೆ ಆರಂಭಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
    ಪ್ರತಿದಿನ ಜಾನುವಾರುಗಳಿಗೆ ಪಶು ವೈದ್ಯಕೀಯ ಇಲಾಖೆಯಿಂದ ತಪಾಸಣೆ, ಚುಚ್ಚುಮದ್ದು ನೀಡುವುದಲ್ಲದೇ ಬೇವಿನ ಎಣ್ಣೆಯನ್ನು ಮೈಗೆ ಹಚ್ಚಲಾಗುತ್ತಿದೆ. ಚಳಿಗಾಲದ ಈ ಸಂದರ್ಭದಲ್ಲಿ ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಇದನ್ನು ತುರ್ತು ತಡೆಗಟ್ಟಬೇಕಾಗಿದೆ. ಈ ರೋಗ ತಗುಲಿದ ಯಾವುದಾದರೂ ಜಾನುವಾರುಗಳು ಸಾಗರದ ಜನತೆಗೆ ಕಂಡುಬಂದಲ್ಲಿ ತಕ್ಷಣ ನಗರಸಭೆಯ ಗಮನಕ್ಕೆ ತರಲು ಕೋರುತ್ತೇವೆ. ಗೋ ಸೇವಕರಾಗಿ ಸುದರ್ಶನ್ ಚಿಪ್ಪಳಿ ಮತ್ತು ಸ್ನೇಹಿತರು ಸಹಕಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಕೂಡ ಗೋವುಗಳಿಗೆ ಮೇವು, ತರಕಾರಿ ಇತರ ಅಗತ್ಯವಸ್ತುಗಳನ್ನು ನೀಡಿ ಸಹಕರಿಸಿ ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts