More

    ಚರ್ಮಗಂಟು ಬಾಧೆಗೆ ಜಾನುವಾರು ತತ್ತರ

    ಬೆಳಗಾವಿ: ರೈತರ ಜೀವನದೊಂದಿಗೆ ಇತ್ತ ಮಾನ್ಸೂನ್ ಚೆಲ್ಲಾಟವಾಡುತ್ತಿದ್ದರೆ ಅತ್ತ ಕೃಷಿಕರ ಜೀವಬಂಧು ಎಂದೇ ಪರಿಗಣಿಸಲ್ಪಟ್ಟಿರುವ ದನಕರುಗಳಿಗೆ ಚರ್ಮಗಂಟು ರೋಗ ಗಂಟು ಬಿದ್ದಿರುವುದು ರೈತಾಪಿ ವರ್ಗವನ್ನು ಕಂಗೆಡಿಸಿದೆ. ಈಗಾಗಲೇ ನೆರೆ, ಅತಿವೃಷ್ಟಿ, ಔಷಧ, ರಸಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರು ಜಾನುವಾರುಗಳಿಗೆ ತಗುಲುತ್ತಿರುವ ರೋಗದಿಂದ ಚಿಂತಾಕ್ರಾಂತರಾಗಿದ್ದಾರೆ.

    ಹಸುಗಳಲ್ಲೇ ರೋಗ ಪ್ರಮಾಣ ಹೆಚ್ಚು: ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡು ತಿಂಗಳು ಕಳೆದರೂ ನಿವಾರಣೆಗೆ ಸೂಕ್ತ ಔಷಧ ಸಿಗುತ್ತಿಲ್ಲ. ವೈರಸ್‌ನಿಂದ ಹರಡುತ್ತಿರುವ ಈ ರೋಗ ನಿಯಂತ್ರಣಕ್ಕೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆ್ಯಂಟಿಬಯೋಟೆಕ್ ಚುಚ್ಚುಮದ್ದು ನೀಡಿ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ಸುಮಾರು 20.56 ಲಕ್ಷ ಜಾನುವಾರುಗಳಿವೆ. ಅದರಲ್ಲಿ 220 ಹಸು, 43 ಎತ್ತುಗಳಲ್ಲಿ ರೋಗ ಬಾಧೆ ತೀವ್ರತೆ ಹೆಚ್ಚಾಗಿದೆ. ಆದರೆ, ರೋಗ ಹತೋಟಿಗೆ ಬರುತ್ತಿಲ್ಲ. ಅಷ್ಟೇ ಅಲ್ಲದೆ, ಹಸುಗಳು ವಿಪರೀತ ಜ್ವರದಿಂದಾಗಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿವೆ.

    ಹೈನುಗಾರಿಕೆಗೂ ಹೊಡೆತ: ಕೃಷಿಯೊಂದಿಗೆ ರೈತರು ಹೈನುಗಾರಿಕೆಯನ್ನೂ ನೆಚ್ಚಿಕೊಂಡಿದ್ದಾರೆ. ಕೃಷಿಕರ ಆರ್ಥಿಕ ಬೆನ್ನೆಲುಬಾಗಿರುವ ಹೈನುಗಾರಿಕೆ ಮೇಲೂ ಈ ಚರ್ಮಗಂಟು ರೋಗ ಅಡ್ಡ ಪರಿಣಾಮ ಬೀರುತ್ತಿದೆ. ಇದರಿಂದ ರೈತಾಪಿ ವರ್ಗದ ಆದಾಯದ ಮೇಲೆ ಹೊಡೆತ ಬಿದ್ದಂತಾಗಿದೆ. ಚರ್ಮಗಂಟು ರೋಗ ಹೆಚ್ಚಾಗಿ ಹಸುಗಳಲ್ಲಿ ಕಂಡುಬರುತ್ತಿರುವುದರಿಂದ ರೋಗ ತಗುಲಿದ ಹಸುವಿನ ಹಾಲು ಬಳಕೆಗೆ ಜನರು ಮನಸ್ಸು ಮಾಡುತ್ತಿಲ್ಲ. ಹೈನುಗಾರರು, ರೈತರು ರೋಗ ಭಯದಿಂದಾಗಿ ಕರೆದ ಹಾಲನ್ನು ಡೇರಿಗಳಿಗೆ ನೀಡುವ ಬದಲು ತಿಪ್ಪೆಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ಹಾಲಿನ ಉತ್ಪಾದನೆ ಶೇ.10 ಕುಸಿತ ಕಂಡಿದೆ.

    ದನದ ಸಂತೆಗಳು ಬಂದ್: ನಾಲ್ಕೈದು ವಾರಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎತ್ತು, ಹಸು, ಎಮ್ಮೆಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತ ಎರಡು ವಾರಗಳಿಂದ ದನದ ಮಾರುಕಟ್ಟೆ, ಜಾನುವಾರು ಸಂತೆ, ಜಾತ್ರೆಗಳನ್ನು ಸಂಪೂರ್ಣ ಬಂದ್ ಮಾಡಿದೆ. ಪರಿಣಾಮ ಜಾನುವಾರು ಮಾರಾಟ ಮಾಡುವವರು ಮತ್ತು ಖರೀದಿಸುವವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ದಿನ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ವಾರದ ಸಂತೆ ಹಾಗೂ ದನದ ಮಾರುಕಟ್ಟೆಗಳಲ್ಲಿ 6,800 ರಿಂದ 10 ಸಾವಿರ ಜಾನುವಾರು ಮಾರಾಟವಾಗುತ್ತದೆ. ಇದರಿಂದ ಸುಮಾರು 85 ಲಕ್ಷ ರೂ. ದಿಂದ 1 ಕೋಟಿ ರೂ. ವರೆಗೆ ವಹಿವಾಟು ನಡೆಯುತ್ತಿತ್ತು. ಇದೀಗ ವಹಿವಾಟು ಬಂದ್ ಆಗಿದ್ದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಜಾನುವಾರು ಸಗಣಿ, ಗಂಜಲವನ್ನು ಆಗಾಗ ಗಮನಿಸುವ ಅಭ್ಯಾಸ ರೂಡಿಸಿಕೊಂಡಾಗ ಮಾತ್ರ ಅನಾರೋಗ್ಯದ ಲಕ್ಷಣಗಳನ್ನು ಬೇಗ ಗುರುತಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ವೈರಸ್‌ನಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ರೋಗ ಕಾಣಿಸಿಕೊಂಡ ದನಗಳನ್ನು ಕೊಟ್ಟಿಗೆಯಲ್ಲಿ ಪ್ರತ್ಯೇಕಿಸಿ ಕಟ್ಟಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಗರ್ಭಧರಿಸಿದ ಹಸುಗಳಿಗೆ ಅಪಾಯ

    ವೈರಸ್‌ನಿಂದ ಹರಡುವ ಚರ್ಮಗಂಟು ರೋಗದಿಂದ ಜಾವಾರಗಳು ವಿಪರೀತ ಜ್ವರದಿಂದ ಬಳಲುತ್ತವೆ. ಅದರಲ್ಲೂ ಗರ್ಭ ಧರಿಸಿದ ಹಸುಗಳಿಗೆ ಚರ್ಮಗಂಟು ರೋಗ ಬಹಳ ಅಪಾಯಕಾರಿ. ರೋಗ ಕಾಣಿಸಿಕೊಂಡಾಗ ಅಗತ್ಯ ಪೋಷಣೆ ಮಾಡದೆ ನಿರ್ಲಕ್ಷೃ ಮಾಡಿದರೆ ಹಸುವಿನ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಿದೆ. ಹಸುವಿಗೆ ವಯಸ್ಸಾಗಿದ್ದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯನ್ನೂ ಅಲ್ಲೆಗಳೆಯುವಂತಿಲ್ಲ. ಗರ್ಭ ಧರಿಸಿದ ಹಸುಗಳಿದ್ದರೆ ಪೌಷ್ಟಿಕಾಂಶವಿರುವ ಆಹಾರ ನೀಡುವ ಮೂಲಕ ಪೋಷಣೆ ಮಾಡಬೇಕು. ಅಲ್ಲದೆ, ದನದ ಕೊಟ್ಟಿಗೆಗಳಿಗೆ ಜನರ ಸಂಪರ್ಕ ಕಡಿಮೆ ಮಾಡುವುದು ಸೂಕ್ತ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಹಸು, ಎತ್ತು ಸೇರಿ ಒಟ್ಟು 263 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆ. ಔಷಧ, ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತರಲಾಗುತ್ತಿದೆ. 6 ಸಾವಿರ ಜಾನುವಾರುಗಳಿಗೆ ಗೋಟ್ ಪಾಕ್ಸ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಜಾನುವಾರು ಈ ರೋಗದಿಂದ ಮೃತಪಟ್ಟಿಲ್ಲ.
    | ರಾಜೀವ್ ಕುಲೇರ ಉಪನಿರ್ದೇಶಕ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts