More

    ಚನ್ನಮ್ಮಳಿಗೆ ಹೋಲಿಕೆ ಬೇಡ – ಶಾಸಕ ರಮೇಶ ಜಾರಕಿಹೊಳಿ

    ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕರನ್ನು ವೀರರಾಣಿ ಚನ್ನಮ್ಮಳಿಗೆ ಹೋಲಿಸುವುದು ಎಂತಹ ದುರ್ದೈವ. ಈ ಮೂಲಕ ಚನ್ನಮ್ಮಳಿಗೆ ಅಪಮಾನ ಮಾಡುವುದು ಸಹಿಸುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದವರು ಗುರುವಾರ ಹಮ್ಮಿಕೊಂಡಿದ್ದ ಅಭಿಮಾನದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆದಾಗಬೇಕಾದರೆ ಬೆಳಗಾವಿ ಗ್ರಾಮೀಣ ಶಾಸಕಿ ಈ ಬಾರಿ ಸೋಲಲೇಬೇಕಾಗಿದೆ. ಉಚಗಾವಿಯಲ್ಲಿ ಮತ್ತೊಂದು ಸಮಾವೇಶ ನಡೆಸುತ್ತೇವೆ. ನಂತರ ಬಿಜೆಪಿಯಿಂದ ಸಮಾವೇಶ ಮಾಡುತ್ತೇವೆ. ಪಕ್ಷ ಸೂಚಿಸಿದ ಉತ್ತಮ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸೋಣ ಎಂದರು.

    ಕಾಂಗ್ರೆಸ್ ಪಕ್ಷ ಇಂದು ತೀರಾ ಕೆಳಮಟ್ಟಕ್ಕೆ ಇಳಿದಿದೆ. ನಾನು ಬಹಳ ಕಳಪೆ ಮಟ್ಟದ ಭಾಷಣಕ್ಕೆ ಹೋಗುವುದಿಲ್ಲ. ಆದರೆ, ಅವರಿಗೆ ಉತ್ತರ ಕೊಡಲೇಬೇಕಾಗಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರ ಬಗ್ಗೆ ವೈಯಕ್ತಿಕವಾಗಿ ನಾನು ಮಾತನಾಡಲಾರೆ. ರಸ್ತೆ ಅಭಿವೃದ್ಧಿ ಮಾತ್ರ ಕ್ಷೇತ್ರದ ಅಭಿವೃದ್ಧಿ ಕೆಲಸವಲ್ಲ. ಪ್ರತಿ ವರ್ಷ ಶಾಸಕರ ಅನುದಾನ ಬರುತ್ತದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾವುದೇ ಶಾಸಕರು ಇರಲಿ. ಸರ್ಕಾರ ಅನುದಾನ ಬಿಡುಗಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಸಹ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಅಭಿವೃದ್ಧಿಪರ ಕೆಲಸಗಳಿಗೆ ನಾನು ಎಂದಿಗೂ ಅಡ್ಡಿ ಮಾಡಿಲ್ಲ ಎಂದರು.

    ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಗೆಲ್ಲಲೇಬೇಕಾಗಿದೆ. ಬಿಜೆಪಿ ವರಿಷ್ಠರು ಬೆಳಗಾವಿ ಗ್ರಾಮೀಣಕ್ಕೆ ಅತ್ಯುತ್ತಮ ಅಭ್ಯರ್ಥಿಯನ್ನು ನೀಡಬೇಕು. ನಾವು ಇಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪಣತೊಡೋಣ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಬಿಜೆಪಿ ಸಂಘಟನೆ ಕುಂಠಿತವಾಗಿತ್ತು. ಮೂರ್ನಾಲ್ಕು ತಿಂಗಳಿನಿಂದ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ನಾವು ಅತ್ಯಂತ ಸಮರ್ಥವಾಗಿ ಕೆಲಸ ಮಾಡೋಣ. ರಾಜ್ಯದಲ್ಲಿ ಮಾದರಿಯಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸೋಣ ಎಂದರು.

    ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೊಳಕರ, ಶಂಕರಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಸುಳೇಭಾವಿ ಲಕ್ಷ್ಮೀ, ಪಾರ್ವತಿ, ನಾಗರಾಜ ಪಾಟೀಲ, ರಾಮಚಂದ್ರ ಮನ್ನೋಳಕರ, ಮಹಾಂತೇಶ ಅಲಾಬದಿ, ರಮೇಶ ಸರವದೆ, ಉಳವಪ್ಪ ನಂದಿ, ಪ್ರಶಾಂತ ದೇಸಾಯಿ ಇತರರಿದ್ದರು.

    ಈ ಬಾರಿ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು. ಇಲ್ಲವಾದರೆ ನಿಮ್ಮ ಜಮೀನುಗಳೆಲ್ಲ ಹೋಗುತ್ತದೆ. ಬೆಂಗಳೂರು ಸುತ್ತಮುತ್ತ ಅವರ ಬಾಸ್ ಇದ್ದಾರಲ್ಲ. ಹೇಗೆ ಅತಿಕ್ರಮಣ ಮಾಡಿಕೊಂಡಿದ್ದರೋ ಶಾಸಕರ ಸಂಬಂಧಿಗಳು ಸಹ ಬಂದರೂ ನಿಮ್ಮ ಹೊಲವನ್ನು ಬಿಡಬೇಕಾಗುತ್ತದೆ. ನೀವು ಯಾವುದೇ ಆಮಿಷಕ್ಕೂ ಬಲಿಯಾಗಬೇಡಿ.
    | ರಮೇಶ ಜಾರಕಿಹೊಳಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts