More

    ಘಟಿಕೋತ್ಸವ ಪ್ರಮಾಣಪತ್ರಕ್ಕೆ ಪರದಾಟ

    ಶಿವಾನಂದ ಕಲ್ಲೂರ ಬೆಳಗಾವಿ: ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ನೇಮಕಾತಿಯಲ್ಲಿ ಆಯ್ಕೆಯಾಗಿರುವ ಬಹುಪಾಲು ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಘಟಿಕೋತ್ಸವ (ಕಾನ್ವಕೇಶನ್) ಪ್ರಮಾಣಪತ್ರ ಇಲ್ಲದೆ ಪರದಾಡುವಂತಾಗಿದೆ. ಮೂಲ ದಾಖಲೆ ಹಾಗೂ ಡಿಜಿ ಲಾಕರ್‌ನ ದಾಖಲೆಗಳಲ್ಲೂ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತಿದ್ದು, ಅಧಿಕಾರಿಗಳಿಗೆ ತಲೆ ಬಿಸಿ ತಂದಿದೆ.

    ಪದವಿ ಮುಗಿಸಿ ಮೂರ್ನಾಲ್ಕು ವರ್ಷ ಕಳೆದರೂ ಇನ್ನೂ ಘಟಿಕೋತ್ಸವ ಪ್ರಮಾಣಪತ್ರ ಕೈ ಸೇರದ್ದರಿಂದಾಗಿ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಅಭ್ಯರ್ಥಿಗಳಿಗೆ ಕಾಲಾವಕಾಶ ನೀಡುವಂತೆ ಕ್ಷೇತ್ರದ ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಅಭ್ಯರ್ಥಿಗಳಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಪರಿಶೀಲನೆ ಕಾರ್ಯ ಮುಂದುವರಿಸಲಾಗಿದೆ.

    ರಾಜ್ಯದ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದ ನೇಮಕಾತಿ ಪರೀಕ್ಷೆ ಬಳಿಕ ಸೆ.28ರಂದು 1:2ರ ಅನುಪಾತದಡಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಅ.6ರಿಂದ 15ರವರೆಗೆ ಆಯಾ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಕೇಂದ್ರೀಕೃತ ದಾಖಲಾತಿ ಘಟಕ ಆದೇಶಿಸಿತ್ತು. ಪರಿಶೀಲನಾ ವೇಳಾಪಟ್ಟಿಯಂತೆ ಇಂಗ್ಲಿಷ್, ಸಮಾಜ ವಿಜ್ಞಾನದ ವಿಷಯ ಶಿಕ್ಷಕ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿದ್ದು, ಬಹುತೇಕ ಅಭ್ಯರ್ಥಿಗಳ ಬಳಿ ಕಾನ್ವಕೇಶನ್ ಪ್ರಮಾಣಪತ್ರ ಇಲ್ಲದಿರುವುದು ಬೆಳಕಿಗೆ ಬಂದಿದೆ. 2019-20, 2020-21ರ ಶೈಕ್ಷಣಿಕ ವರ್ಷದ ಪದವಿ ಪಡೆದವರೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರಿಂದ ಈ ಸಮಸ್ಯೆ ಎದರಾಗಿದೆ. ಕಾನ್ವಕೇಶನ್ ಪ್ರಮಾಣಪತ್ರಕ್ಕಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸಿದ್ದು, ಈ ವರ್ಷದ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಕೈ ಸೇರಲಿದೆ ಎಂದು ಪರಿಶೀಲನೆ ವೇಳೆ ಅಭ್ಯರ್ಥಿಗಳು ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಿದ್ದಾರೆ. ಅಂಥವರಿಂದ ‘ಮುಂದಿನ 6 ತಿಂಗಳೊಳಗಾಗಿ ಹಾಜರು ಪಡಿಸುತ್ತೇವೆ, ಇಲ್ಲವಾದರೆ, ಸರ್ಕಾರದ ಮುಂದಿನ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ’ ಎಂದು ಬಾಂಡ್ ಪೇಪರ್ ಮೇಲೆ ಮುಚ್ಚಳಿಕೆ ಬರೆಯಿಸಿಕೊಂಡು ಅಧಿಕಾರಿಗಳು ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಂದುವರಿಸಿದ್ದಾರೆ.

    ಈ ಬಗ್ಗೆ ಆಂಗ್ಲ ಭಾಷಾ ಶಿಕ್ಷಕ ಅಭ್ಯರ್ಥಿಯೊಬ್ಬರು ಪ್ರತಿಕ್ರಿಯಿಸಿ, ಕರೋನಾ ಕಾರಣಕ್ಕೆ ಹಿಂದಿನ ಎರಡ್ಮೂರು ವರ್ಷದಲ್ಲಿ ಘಟಿಕೋತ್ಸವ ನಡೆದಿರಲಿಲ್ಲ. ಗೌನ್ ತೊಟ್ಟುಕೊಂಡೇ ಗಣ್ಯರಿಂದ ಪ್ರಮಾಣಪತ್ರ ಪಡೆಯಬೇಕು ಎಂಬ ಅಭಿಲಾಷೆಯಿಂದ ಕೆಲವರು ಅರ್ಜಿ ಸಲ್ಲಿಸಿರಲಿಲ್ಲ. ಈ ವರ್ಷ ಹಾಕಿದ್ದಾರೆ. ನಾನು ಕಳೆದ ವರ್ಷವಷ್ಟೇ ಪದವಿ ಪಡೆದಿದ್ದು, ಈಗಾಗಲೇ ಅರ್ಜಿ ಹಾಕಿದ್ದೇನೆ. ಘಟಿಕೋತ್ಸವ ನಡೆಯುವವರೆಗೆ ಕಾಲಾವಕಾಶ ಕೋರಿದ್ದೇನೆ. ನನ್ನಂತೆ ಇನ್ನೂ ಹಲವರು ಈ ಇಕ್ಕಟ್ಟಿನಲ್ಲಿದ್ದಾರೆ. ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಿಗೆ ಆದೇಶಿಸಿ, ಶೀಘ್ರವೇ ಹಳೆ ವಿದ್ಯಾರ್ಥಿಗಳ ಕಾನ್ವಕೇಶನ್ ಪ್ರಮಾಣ ಪತ್ರ ವಿತರಣೆ ಮಾಡುವಂತೆ ನಿರ್ದೇಶಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts