More

    ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭಿಸಲು ಚಾರುಕೀರ್ತಿಶ್ರೀ ಪ್ರೇರಣೆ

    ಚನ್ನರಾಯಪಟ್ಟಣ (ಶ್ರವಣಬೆಳಗೊಳ): ಜನ ಕಲ್ಯಾಣ ಟ್ರಸ್ಟ್ ಕಾರ್ಯಕ್ರಮದ ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ಯೋಜನೆ ಆರಂಭಿಸಲು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀಗಳು ನಮಗೆ ಪ್ರೇರಣೆಯಾಗಿದ್ದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.


    ಶ್ರವಣಬೆಳಗೊಳ ಜೈನ ಮಠದಲ್ಲಿ ಶನಿವಾರ ಆಯೋಜಿಸಿದ್ದ, ಇತ್ತೀಚೆಗೆ ಕೀರ್ತಿಶೇಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ವಿನಯಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀಗಳು ಧರ್ಮಸ್ಥಳ ಶ್ರೀಕ್ಷೇತ್ರದ ಮೇಲೆ ವಿಶೇಷವಾದ ಆಶಯ ಹಾಗೂ ಅನುಗ್ರಹವನ್ನು ಇಟ್ಟಿದ್ದರು. ಪೂಜ್ಯರ ವ್ಯಕ್ತಿತ್ವ, ಅವರ ತತ್ವ, ಆದರ್ಶಗಳು ಗೌರವಪೂರ್ವಕವಾಗಿದ್ದು, ಸಮಾಜಕ್ಕೆ ಮಾದರಿಯಾಗಿವೆ. ಚಾರಿತ್ರೃ ಮತ್ತು ದರ್ಶನದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಆಚಾರ-ವಿಚಾರಗಳಿಂದ ಗೌರವ ಪ್ರಾಪ್ತಿಯಾಗುತ್ತದೆ. ನಾವು ಇಷ್ಟು ವರ್ಷಗಳ ಕಾಲ ಶ್ರವಣಬೆಳಗೊಳ ಮಠದ ಪೀಠಕ್ಕೆ ನೀಡುತ್ತಿದ್ದ ಗೌರವವನ್ನು ಮುಂದೆಯೂ ಹೀಗೆ ಮುಂದುವರಿಸುತ್ತಾ, ನೂತನ ಶ್ರೀಗಳೊಂದಿಗೆ ಸದಾ ನಿಲ್ಲುತ್ತೇವೆ ಎಂದು ಹೇಳಿದರು.


    ಹಿರಿಯ ವಿದ್ವಾಂಸರಾದ ಹಂಪನಾ ಮಾತನಾಡಿ, ಉತ್ತರ ಮತ್ತು ದಕ್ಷಿಣ ಭಾರತವನ್ನು ಸೇರಿಸುವ ಸುವರ್ಣ ಸೇತುವೆಯಾಗಿದ್ದ ಶ್ರೀಗಳು ಶ್ರವಣಬೆಳಗೊಳದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಿದರು. ಆಗಮಿಕ ಮತ್ತು ಲೌಕಿಕ ಜೀವನವನ್ನು ಮೇಳೈಸಿಕೊಂಡು ಬದುಕಿದ ಮಹಾನ್ ಚೇತನದ ಅಗಲಿಕೆ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟ ಎಂದರು.


    ಸ್ವಾಮೀಜಿ ಅವರು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಸಾಮಾಜಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸುವುದರ ಜತೆಗೆ ಪ್ರಾಕೃತ ಭಾಷೆಯ ಪುನರುತ್ಥಾನಕ್ಕೆ ಅವಿರತ ಶ್ರಮಿಸಿದ ಮಹಾನ್ ವಿದ್ವಾಂಸರಾಗಿದ್ದರು. ದೇವಾಲಯಗಳ ಜೀರ್ಣೋದ್ಧಾರ, ಆಧ್ಯಾತ್ಮಿಕ ಶಿಕ್ಷಣ ತರಬೇತಿ ನೀಡುವುದರೊಂದಿಗೆ ನಶಿಸುತ್ತಿದ್ದ ಭಟ್ಟಾರಕ ಪರಂಪರೆಯನ್ನು ಉಳಿಸಿದ ಕೀರ್ತಿ ಚಾರುಶ್ರೀಗಳಿಗೆ ಸಲ್ಲುತ್ತದೆ ಎಂದರು.


    ಶ್ರೀಗಳ ಬಹು ವರ್ಷಗಳ ಕನಸಿನ ಯೋಜನೆಯಾದ ಪ್ರಾಕೃತ ವಿಶ್ವವಿದ್ಯಾನಿಲಯ ಯೋಜನೆಯ ವಿಷಯವನ್ನು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಮನವಿ ಮಾಡಿದರು.


    ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಸ್ವಸ್ತಿಶ್ರೀಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕಾರ್ಕಳ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿ ಮಠದ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದ್ರೆ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನ ಮಠದ ಡಾ.ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಮೇಲ್‌ಚಿತ್ತಾಪುರ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರ ಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಡಿ.ಸುರೇಂದ್ರ ಹೆಗ್ಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts