More

    ಗ್ರಾಮಗಳ ಅಭಿವೃದ್ಧಿಗೆ ಬ್ಯಾಂಕ್‌ಗಳು ಅಗತ್ಯ: ಅನ್ನದಾನೇಶ್ವರನಾಥ ಸ್ವಾಮೀಜಿ

    ಮಾಗಡಿ : ಗ್ರಾಮಗಳ ಅಭಿವೃದ್ಧಿಗೆ ಬ್ಯಾಂಕ್‌ಗಳು ಅವಶ್ಯಕ ಎಂದು ಆದಿಚುಂಚನಗಿರಿ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
    ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಶನಿವಾರ ಯೂನಿಯನ್ ಬ್ಯಾಂಕ್‌ನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸದೃಢತೆಗೆ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರಿಶ್ರಮ ಪಟ್ಟು ದುಡಿದ ಹಣವನ್ನು ಉಳಿಸಿ ಭವಿಷ್ಯದ ಬದುಕಿಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ತಿಳಿಸುತ್ತವೆ. ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ರೈತರು ಆರ್ಥಿಕವಾಗಿ ಬೆಳೆಯಲು ಸಹಕಾರ ನೀಡಬೇಕು ಎಂದು ಅನ್ನದಾನೇಶ್ವರನಾಥ ಸ್ವಾಮೀಜಿ ಮನವಿ ಮಾಡಿದರು.
    ಇದೇ ವೇಳೆ ಹೊಸಪಾಳ್ಯ ಗ್ರಾಮದ ವ್ಯಾಪ್ತಿಯಲ್ಲಿ ದಾನಿಗಳು 2 ಎಕರೆ ಜಾಗ ನೀಡಿದರೆ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಅನುಮತಿ ಪಡೆದು ಮುಂದಿನ ವರ್ಷದಿಂದಲೇ ಪಿಯು ಕಾಲೇಜು ಆರಂಭಿಸಲಾಗುವುದು ಎಂದರು.
    ಶಾಸಕ ಎ.ಮಂಜುನಾಥ್ ಮಾತನಾಡಿ, ಕಾರ್ಖಾನೆ, ಉದ್ದಿಮೆ ಹಾಗೂ ಓರ್ವ ವ್ಯಕ್ತಿ ಆರ್ಥಿಕವಾಗಿ ಸದೃಢವಾಗಲು ಅವರ ಹಿಂದೆ ಒಂದು ಬ್ಯಾಂಕ್ ಇರುತ್ತದೆ. ಯಾವುದೇ ಉದ್ದಿಮೆ ಪ್ರಾರಂಭಿಸಲು, ಶಿಕ್ಷಣ ಪಡೆಯಲು ಸಾಲ ನೀಡುತ್ತವೆ. ಬ್ಯಾಂಕಿನಿಂದ ಸಾರ್ವಜನಿಕರಿಗೆ ಹಲವಾರು ಸೌಲಭ್ಯಗಳು ಸಿಗುತ್ತವೆ. ಬ್ಯಾಂಕ್‌ಗಳಿಂದ ರೈತರಿಗೆ ಸರಿಯಾದ ನೆರವು ಸಿಗಬೇಕು. ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಹೆಚ್ಚಿನ ಬಡ್ಡಿ ಆಸೆಗಾಗಿ ಬ್ಲೇಡ್ ಕಂಪನಿಗಳಲ್ಲಿ ಇಡದೆ, ಕಡಿಮೆ ಬಡ್ಡಿಯಾದರೂ ಸರಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೇ ಹಣವನ್ನು ಇಡುವಂತೆ ಮನವಿ ಮಾಡಿದರು.
    ಯೂನಿಯನ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಕಿರಣ್ ರೈ ಮಾತನಾಡಿ, ಗ್ರಾಮೀಣ ಜನತೆ ಶ್ರಮಪಟ್ಟು ದುಡಿದು ಉಳಿಸಿದ ಹಣವನ್ನು ಬ್ಯಾಂಕ್‌ಗಳು ಭದ್ರವಾಗಿರಿಸುತ್ತವೆ. ರೈತರಿಗೆ ಜಮೀನು, ದುಡಿಯುವ ಶಕ್ತಿ ಇದ್ದರೂ ಬಂಡವಾಳ ಇರುವುದಿಲ್ಲ. ಅಂತಹ ಬಂಡವಾಳವನ್ನು ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ. ಸರ್ಕಾರದ ಯೋಜನೆಗಳನ್ನು ಬ್ಯಾಂಕ್‌ಗಳು ಅನುಷ್ಠಾನಗೊಳಿಸುತ್ತಿದ್ದು, ಸ್ಥಳೀಯ ಶಾಖೆ ವ್ಯವಸ್ಥಾಪಕರು ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.
    ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಕೆ. ನಾರಾಯಣಗೌಡ ಮಾತನಾಡಿ, ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳಿಗೆ ಹೊಸಪಾಳ್ಯ ಕೇಂದ್ರ ಸ್ಥಾನವಾಗಿದೆ, ಇಲ್ಲಿ ಬ್ಯಾಂಕ್ ಇಲ್ಲದಿದ್ದರಿಂದ ವೃದ್ಧಾಪ್ಯ ವೇತನ, ಹೈನುಗಾರರು ಹಾಲಿನ ಹಣ ಪಡೆಯಲು ಮಾಗಡಿಗೆ ಹೋಗಬೇಕಾಗಿತ್ತು. ಅಧಿಕಾರಿಗಳ ಮನವೊಲಿಸಿದ ಪರಿಣಾಮ ಹೊಸಪಾಳ್ಯದಲ್ಲೇ ಬ್ಯಾಂಕ್ ಶಾಖೆ ಕಾರ್ಯ ಆರಂಭಿಸಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
    ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಟಿ. ನಂಜುಂಡಪ್ಪ, ಸುಹಾಸ್, ಶ್ರೀನಿವಾಸರಾವ್, ಎಚ್.ಎಸ್.ಶಿವಣ್ಣ, ಕೃಷ್ಣಪ್ಪ, ಗಂಗಾಧರಯ್ಯ, ಸವಿತಾ ಮತ್ತಿತರರು ಭಾಗವಹಿಸಿದ್ದರು.
    ಶೀಘ್ರ ಆರೋಗ್ಯ ಕೇಂದ್ರ ಆರಂಭ
    ಹೊಸಪಾಳ್ಯ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು 2 ಎಕರೆ ಜಾಗ ಗುರುತಿಸಲಾಗಿದೆ. ಹಾಗೂ ಜನರಿಂದ 1.5 ಲಕ್ಷ ರೂ. ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಲಾಗಿದೆ. ಶೀಘ್ರವಾಗಿ ಆರೋಗ್ಯ ಕೇಂದ್ರ ಆರಂಭಿಸಲಾಗುವುದು ಎಂದು ಮಂಜುನಾಥ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts