More

    ಗ್ರಾಪಂ ಸಭೆಯಲ್ಲಿ ಸಮಸ್ಯೆಗಳು ಅನಾವರಣ : ಪರವಾನಗಿ ಪಡೆಯದೆ ಮಾಂಸ ಮಾರಾಟ

    ಕೊಡಗು : ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರಿನಲ್ಲಿ ಪರವಾನಗಿ ಪಡೆಯದೆ ಮಾಂಸ ಮಾರುತ್ತಿದ್ದು, ಕೂಡಲೇ ಮಳಿಗೆ ಮುಚ್ಚಿಸುವಂತೆ ಇತ್ತೀಚೆಗೆ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.


    ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಬಿ.ಶಂಶುದ್ಧೀನ್, ಟೆಂಡರ್ ಕರೆದು ನಾಲ್ಕು ತಿಂಗಳು ಕಳೆದಿದ್ದರೂ, ಪರವಾನಗಿ ಪಡೆಯದೇ ಮಾಂಸ ವ್ಯಾಪಾರ ನಡೆಸುತ್ತಿದ್ದಾರೆ.

    ಆದರೂ ಪಿಡಿಒ, ಅಧ್ಯಕ್ಷರಾಗಲಿ ಗಮನ ಹರಿಸದಿರುವುದು ಅನಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಡವರಿಗೆ ಒಂದು ನ್ಯಾಯ ಪ್ರಭಾವಿಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.


    ಇದಕ್ಕೆ ಸದಸ್ಯರಾದ ಚೈತ್ರಾ, ಕುಮಾರ್ ಹಾಗೂ ಇತರರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಸಂತೋಷ್, ಜಾಗದ ದಾಖಲಾತಿಗಳಲ್ಲಿ ತೊಂದರೆ ಇರುವುದರಿಂದ ಲೈಸೆನ್ಸ್ ನೀಡಲು ಸಾಧ್ಯವಾಗಲಿಲ್ಲ ಎಂದರು.


    ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತಮಾಡಿ, ಲೈಸೆನ್ಸ್ ಪಡೆಯದಿದ್ದಲ್ಲಿ ಮಳಿಗೆ ತೆರೆಯಲು ಅವಕಾಶ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಸದಸ್ಯೆ ಚೈತ್ರಾ ಮಾತನಾಡಿ, ಇಲ್ಲಿವರೆಗೆ ಹಣ ಕಟ್ಟಿಸಿಕೊಳ್ಳಲು ಸಮಯಾವಕಾಶ ನೀಡಲು ಕಾರಣವೇನು? ಕಾನೂನು ಎಂದ ಮೇಲೆ ಎಲ್ಲರಿಗೂ ಒಂದೇ ಇರಬೇಕು ಎಂದು ಹೇಳಿದರು. ಬಳಿಕ ಮಳಿಗೆಯನ್ನು ಮುಚ್ಚಿಸಿ, ಪರವಾನಗಿ ಪಡೆದು ವ್ಯಾಪಾರ ನಡೆಸಲು ನೋಟಿಸ್ ನೀಡಲು ತೀರ್ಮಾನಿಸಲಾಯಿತು.


    ಸಾವಿನ ದಿನವೇ ಹಣ ನೀಡಿ:
    ಅಂತ್ಯಸಂಸ್ಕಾರಕ್ಕೆಂದು ನೀಡುವ ಹಣ ಸಾವು ಸಂಭವಿಸಿದ ಹತ್ತು, ಹದಿನೈದು ದಿನಗಳ ನಂತರ ನೀಡಿದರೆ ಏನು ಪ್ರಯೋಜನ. ಅಂತ್ಯಸಂಸ್ಕಾರದ ಹಣ ಸಾವು ಸಂಭವಿಸಿದ ದಿನವೇ ಅವರ ಕುಟುಂಬಕ್ಕೆ ನೀಡಬೇಕು ಎಂದು ಸದಸ್ಯ ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಸಾಧ್ಯವಾದಷ್ಟು ಸಾವಿನ ದಿನವೇ ಹಣ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.


    ಸದಸ್ಯೆ ಚೈತ್ರಾ ಮಾತನಾಡಿ, ಪಂಚಾಯಿತಿಯಲ್ಲಿ ಸದಸ್ಯರ ಅಧಿಕಾರ ಕಸಿಯುವ ಕೆಲಸವಾಗುತ್ತಿದೆ. ಸಭೆಯಲ್ಲಿ ಒಮ್ಮತದಿಂದ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ಅಧ್ಯಕ್ಷರು ಬಿಡುತ್ತಿಲ್ಲ. ಈ ರೀತಿಯ ಸರ್ವಾಧಿಕಾರಿ ಧೋರಣೆ ಒಳ್ಳೆಯದಲ್ಲ್ಲ ಎಂದರು. ಇದಕ್ಕೆ ಸದಸ್ಯೆ ಫಿಲೋಮಿನಾ, ಕೆ.ಬಿ.ಶಂಶುದ್ಧೀನ್ ಹಾಗೂ ಉಪಾಧ್ಯಕ್ಷ ಬಾಸ್ಕರ್ ನಾಯಕ್ ಧ್ವನಿಗೂಡಿಸಿದರು.


    ಇಂಗು ಗುಂಡಿಯ ಹಣ ಬಾರದೇ ಜನರು ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯೆ ಫಿಲೋಮಿನಾ ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚಿನ ಜನರಿಗೆ ಎರಡನೇ ಹಂತದ ಹಣ ಬಂದಿಲ್ಲ. ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಶಂಶುದ್ಧೀನ್ ದೂರಿದರು.


    ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ, ಶೀಘ್ರವೇ ಹಣ ಬಿಡುಗಡೆಯಾಗಲಿದೆ. ಶೌಚಗೃಹ ಇಲ್ಲದವರ ಪಟ್ಟಿಯನ್ನು ಹೊಸದಾಗಿ ತಯಾರಿಸಲಾಗುತ್ತಿದೆ. ಸರ್ಕಾರ ಎರಡು ಶೌಚ ಗುಂಡಿ ತೆರೆಯುವಂತೆ ಆದೇಶಿಸಿದೆ. ಆದ್ದರಿಂದ ಇದರ ಸರ್ವೇ ಕಾರ್ಯ ನಡೆಸಲಾಗುವುದು ಎಂದು ಪಿಡಿಒ ಸಂತೋಷ್ ಮನವಿ ಮಾಡಿದರು. ಹಾಗೆಯೇ ದುರಸ್ತಿ ಮಾಡಬೇಕಾದ ಶೌಚಗೃಹಗಳ ಸರ್ವೇ ಕಾರ್ಯ ಮಾಡಲಾಗುವುದು ಎಂದರು.


    ವಾರ್ಡ್‌ನಲ್ಲಿ ಗಿಡಗಂಟಿಗಳು ಬೆಳೆದು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಪೌರ ಕಾರ್ಮಿಕರನ್ನು ಚರಂಡಿ ಸ್ವಚ್ಛತೆಗೆ ಸೀಮಿತವಾಗಿಟ್ಟು, ಗಿಡಗಂಟಿಗಳನ್ನು ತೆರವುಗೊಳಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಇದಕ್ಕೆ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಪ್ರತಿಕ್ರಿಯಿಸಿ, ಮಹಿಳೆಯರನ್ನು ನೇಮಿಸುವುದು ಸೂಕ್ತ ಎಂದರು.


    ಸುಂದರನಗರದ ಲೇಔಟ್ ಮಾಲೀಕರು, ಸರ್ಕಾರ ಅನುದಾನ ಹಾಕಿದ ರಸ್ತೆಯನ್ನು ತನ್ನದೆಂದು ಹೇಳಿ ಜನರ ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸದಸ್ಯೆ ಆಶಾ ವೆಂಕಟೇಶ್ ಹೇಳಿದರು. ಸರ್ಕಾರದ ಅನುದಾನವನ್ನು ಹಾಕಿದ ನಂತರ ಅದು ಸರ್ಕಾರದ ರಸ್ತೆಯಾಗುತ್ತದೆ. ಲೇಔಟ್ ಪ್ಲಾೃನ್ ಬದಲಿಸಲು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿ ಎಂದು ಕೆ.ಬಿ.ಶಂಶುದ್ಧೀನ್ ಸಲಹೆ ನೀಡಿದರು.
    ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts