More

    ಗ್ರಾಪಂ ಮುಖಾಂತರ ಮರಳು ವಿಲೇವಾರಿಗೆ ಕ್ರಮ

    ಕಲಬುರಗಿ: ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊಸ ಮರಳು ನೀತಿ ಜಾರಿಗೆ ತಂದಿದ್ದು, ಹಳ್ಳ, ಕೆರೆ, ಅಣೆಕಟ್ಟು, ಬ್ಯಾರೇಜ್ ಮುಂತಾದ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮುಖಾಂತರ ವಿಲೇವಾರಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಶರತ್. ಬಿ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಹೊಸ ಮರಳು ನೀತಿ-2020ರ ಕುರಿತು ಜಿಲ್ಲಾಮಟ್ಟದ ಮರಳು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಹೊಸ ಮರಳು ನೀತಿ ಅನ್ವಯ 1, 2 ಮತ್ತು 3ನೇ ಶ್ರೇಣಿಯ ಹಳ್ಳ, ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಆಯಾ ಗ್ರಾಪಂಗಳ ಮೂಲಕ ವಿಲೇವಾರಿಗೆ ಅವಕಾಶ ನೀಡಲಾಗಿದೆ. 4, 5 ಹಾಗೂ 6ನೇ ಕ್ರಮಾಂಕದ ಹೊಳೆ, ನದಿಗಳು, ಅಣೆಕಟ್ಟು ಹಾಗೂ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರದಲ್ಲಿನ ಮರಳನ್ನು ಸರಕಾರಿ ಸ್ವಾಮ್ಯದ ನಿಗಮ ಮಂಡಳಿಗಳ ಮೂಲಕ ವಿಲೇವಾರಿ ಮಾಡಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.
    1, 2 ಮತ್ತು 3ನೇ ಶ್ರೇಣಿಯ ಹಳ್ಳ, ತೊರೆ ಹಾಗೂ ಕೆರೆಗಳಲ್ಲಿನ ಮರಳನ್ನು ತಹಸೀಲ್ದಾರ್ ನೇತೃತ್ವದಲ್ಲಿ, ಲೋಕೋಪಯೋಗಿ ಇಲಾಖೆ, ಅಂತರ್ಜಲ ಇಲಾಖೆ, ಅರಣ್ಯ ಇಲಾಖೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ತಂಡದಿಂದ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಜಂಟಿ ಪರಿಶೀಲನಾ ವರದಿ ಜಿಲ್ಲಾ ಮರಳು ಸಮಿತಿಗೆ ಸಲ್ಲಿಸಬೇಕು. ನಂತರ ಜಿಲ್ಲಾ ಮರಳು ಸಮಿತಿ ಸಂಬಂಧಪಟ್ಟ ಗ್ರಾಪಂಗಳಿಗೆ ಮರಳು ತೆಗೆಯುವ ಪ್ರದೇಶಗಳನ್ನು ಮೀಸಲಿರಿಸಿ ಅಧಿಸೂಚನೆ ಹೊರಡಿಸುತ್ತದೆ. ಗ್ರಾಹಕರು ಸರ್ಕಾರ ನಿಗದಿಪಡಿಸಿದ ದರವನ್ನು ಪಂಚಾಯಿತಿಯಲ್ಲಿ ಪಾವತಿಸಿ ಮರಳು ಪಡೆಯಬೇಕು ಎಂದು ಅವರು ಹೇಳಿದರು.
    4,5 ಹಾಗೂ 6ನೇ ಕ್ರಮಾಂಕದ ಹೊಳೆ, ನದಿಗಳು, ಅಣೆಕಟ್ಟು ಹಾಗೂ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರದಲ್ಲಿನ ಮರಳು ನಿಕ್ಷೇಪಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಗುರುತಿಸುವುದು ಮತ್ತು ಮರಳು ನಿಕ್ಷೇಪಗಳು ಅರಣ್ಯ ವ್ಯಾಪ್ತಿಯಲ್ಲಿದ್ದಲ್ಲಿ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಿ, ಸದರಿ ಪ್ರದೇಶದಲ್ಲಿ ಸಂಗ್ರಹವಾಗಿರುವ ಮರಳಿನ ಪ್ರಮಾಣ ಅಂದಾಜಿಸಿ, ಜಿ.ಪಿ.ಎಸ್. ಕೋ- ಆರ್ಡಿನೇಟ್ಸ್ ಗಳೊಂದಿಗೆ ನಕಾಶೆ ತಯಾರಿಸಿ ವರದಿಯನ್ನು ಜಿಲ್ಲಾ ಮಟ್ಟದ ಮರಳು ಸಮಿತಿಗೆ ಸಲ್ಲಿಸಿ, ನಿಯಮಾನುಸಾರ ಅನುಮೋದನೆ ಪಡೆಯಬೇಕು. ನಂತರ ಸಕರ್ಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಲಿಮಿಟೆಡ್ ಇವರಿಗೆ ಹೂಳು ತೆಗೆಯುವ ಮುಖಾಂತರ ದೊರೆತ ಮರಳನ್ನು ತೆಗೆಯುವ ಬಗ್ಗೆ ಅನುಮತಿಸಲಾಗುತ್ತದೆ ಎಂದರು.
    ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎಮ್.ವಾನತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರೇಣುಕಾದೇವಿ, ಸಹಾಯಕ ಆಯುಕ್ತ ರಾಮಚಂದ್ರ ಗಢಾದೆ, ರಮೇಶ್ ಕೊಲ್ಹಾರ, ಎಲ್ಲ ತಾಲೂಕುಗಳ ತಹಸೀಲ್ದಾರ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts