More

    ಗ್ರಾಪಂ ಮೀಸಲಿನಲ್ಲಿ ಬಿಜೆಪಿ ನೇರ ಹಸ್ತಕ್ಷೇಪ

    ಶಿವಮೊಗ್ಗ: ಗ್ರಾಪಂ ವಾರ್ಡ್ ಮೀಸಲಾತಿಯಲ್ಲಿ ಬಿಜೆಪಿ ನೇರ ಹಸ್ತಕ್ಷೇಪ ಮಾಡಿದ್ದು ಎಲ್ಲ ಜಾತಿಗಳಿಗೂ ಅನ್ಯಾಯವಾಗಿದೆ. ಈಗ ಪ್ರಕಟಿಸಿರುವ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

    ರೋಸ್ಟರ್ ಪದ್ಧತಿ ಅನುಸರಿಸಿಲ್ಲ. ಎಲ್ಲಿ ಯಾವ ಜಾತಿಯ ಹೆಚ್ಚು ಮತದಾರರಿದ್ದರೋ ಅವರಿಗೆ ಮೀಸಲಾತಿ ಸಿಗದಂತೆ ನೋಡಿಕೊಳ್ಳಲಾಗಿದೆ. ಇಡೀ ಪ್ರಕ್ರಿಯೆಯಲ್ಲಿ ಎಲ್ಲ ಮಾನದಂಡಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಗ್ರಾಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯವಾದ ಬಳಿಕ ಪಕ್ಷದ ಕಾರ್ಯಕರ್ತರನ್ನೇ ನಾಮನಿರ್ದೇಶನ ಮಾಡಲು ಬಿಜೆಪಿ ಮುಂದಾಗಿತ್ತು. ಆಗ ಕಾಂಗ್ರೆಸ್ ನಡೆಸಿದ ಹೋರಾಟದಿಂದ ಅನಿವಾರ್ಯವಾಗಿ ಸರ್ಕಾರ ಆಡಳಿತಾಧಿಕಾರಿಗಳ ನೇಮಕ ಮಾಡಿತ್ತು. ಈಗ ಮೀಸಲಾತಿಯಲ್ಲಿ ಸ್ಪಷ್ಟವಾಗಿ ಬಿಜೆಪಿ ಸ್ವಹಿತಾಸಕ್ತಿ ಮೆರೆದಿದೆ ಎಂದು ದೂರಿದರು.

    ಕಾಂಗ್ರೆಸ್ ಸರ್ಕಾರ 10 ವರ್ಷಕ್ಕೆ ನಿಗದಿಪಡಿಸಿದ್ದ ಮೀಸಲಾತಿಯನ್ನು ಸರ್ಕಾರ 5 ವರ್ಷಕ್ಕೆ ಸೀಮಿತಗೊಳಿಸಿದೆ. ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತಂದ ಕಾಂಗ್ರೆಸ್​ನ ಉದ್ದೇಶವೇ ಈಗ ವಿಫಲವಾಗುವಂತೆ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.

    ಕಳೆದ ಬಾರಿ ಮಹಿಳೆಯರಿಗೆ ಮೀಸಲಾಗಿದ್ದ ವಾರ್ಡ್​ನ್ನು ಈ ಬಾರಿಯೂ ಮಹಿಳೆಯರಿಗೇ ಮೀಸಲಿರಿಸಲಾಗಿದೆ. ಮೀಸಲಾತಿ ಲೋಪದಿಂದ ನಿಜವಾಗಿಯೂ ತುಳಿತಕ್ಕೊಳಗಾದ ಸಮಾಜದವರು ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ. ಮೀಸಲಾತಿ ಪ್ರಶ್ನಿಸಿ ಈಗಾಗಲೇ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ಉಪಾಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಡಾ. ಎಸ್.ಕೆ.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts