More

    ಗ್ರಾಪಂಗೆ ಸವಾಲುಗಳ ಸರಮಾಲೆ, ಗ್ರಾಮದ ಸ್ವಚ್ಛತೆ, ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಪರದಾಟ

    ಸುಗ್ಗರಾಜು ಜಿ.ಕೆ. ನೆಲಮಂಗಲ
    ತಾಲೂಕಿನಾದ್ಯಂತ ಅಧಿಕಾರವಹಿಸಿಕೊಂಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿವೃದ್ಧಿ ಕಾರ್ಯಗಳ ಜತೆಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ.

    ಹತ್ತು ಹಲವು ನಿರೀಕ್ಷೆ ಇರಿಸಿಕೊಂಡಿದ್ದ ಜನ ಚುನಾವಣೆಯಲ್ಲಿ ಮೆಚ್ಚುಗೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಹಾಗೂ ಚುನಾವಣೆ ನಿಗದಿ ಆಗುತ್ತಿದ್ದಂತೆ ಹಣಬಲ, ಜನಬಲ ಇದ್ದ ಕೆಲವರು ಅನೇಕ ಕಸರತ್ತು ನಡೆಸಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೀಗ ಎಲ್ಲ ಸದಸ್ಯರ ಸಹಭಾಗಿತ್ವದಲ್ಲಿ ಮುಂದುವರಿಯುವುದು ಒಂದು ಸವಾಲಾಗಿದ್ದರೆ, ಬೇಸಿಗೆ ಆರಂಭವಾಗಿದ್ದು ಸಮರ್ಪಕ ಕುಡಿಯುವ ನೀರಿನ ಪೂರೈಕೆ, ತ್ಯಾಜ್ಯ ವಿಲೇವಾರಿ ಸೇರಿ ಸ್ವಚ್ಛತೆಯಂಥ ಸವಾಲು ಎದುರಿಸಬೇಕಾಗಿದೆ.

    ಅನುದಾನದ ಕೊರತೆ: ನಿಯಮಾನುಸಾರ ವಾರ್ಡ್ ಮತ್ತು ಗ್ರಾಮಸಭೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಕಾರ್ಯ, ಮೂಲಸೌಕರ್ಯ ಕಲ್ಪಿಸಬೇಕಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮಗಳಲ್ಲಿದ್ದ ಕೆಲ ಕೊಳವೆಬಾವಿಗಳು ಬತ್ತಿದ್ದು, ಪರ್ಯಾಯವಾಗಿ ಕೊಳವೆಬಾವಿ ಕೊರೆಸಿ, ಪೈಪ್‌ಲೈನ್ ಅಳವಡಿಕೆಗೆ ಅನುದಾನದ ಕೊರತೆಯಿಂದ ಧನಬಲ ಇಲ್ಲವಾಗಿದೆ.

    ನೀರಿಗಾಗಿ ಪ್ರತಿನಿತ್ಯ ಜಗಳ: ತಾಲೂಕಿನ ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಸಮಸ್ಯೆ ಉದ್ಭವಿಸಿದ್ದು ಸಾರ್ವಜನಿಕರ ನಡುವೆ ಗಲಾಟೆ, ಜಗಳಗಳು ಸಾಮಾನ್ಯವಾಗುತ್ತಿವೆ. ಇದನ್ನು ತಡೆಯುವುದು ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

    ನಿಯಮಗಳ ಅಡ್ಡಿ: ಈ ಮೊದಲು ನೀರಿನ ಸಮಸ್ಯೆ ಇದ್ದ ಗ್ರಾಮಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಬಹುದಾಗಿತ್ತು. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹಣ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಈಗ ಹೊಸದಾಗಿ ತಂದಿರುವ ಟೆಂಡರ್ ಪ್ರಕ್ರಿಯೆ ನಿಯಮ ಸಮರ್ಪಕ ನೀರು ಪೂರೈಕೆ ಕಾರ್ಯಕ್ಕೆ ಅಡ್ಡಿಯಾಗಿದೆ.

    ಹೊಸಬರ ಕುತೂಹಲ: ತಾಲೂಕಿನ ಕೆಲ ಗ್ರಾಪಂಗಳಲ್ಲಿ ಕೆಲ ಅಭ್ಯರ್ಥಿಗಳು ನಾಲ್ಕೈದು ಬಾರಿ ಆಯ್ಕೆಯಾಗಿರುವ ಅನುಭವ ಹೊಂದಿದ್ದರೆ, ಕೆಲ ಗ್ರಾಪಂಗಳಿಗೆ ಆಯ್ಕೆಯಾಗಿರುವ ಹೊಸ ಅಭ್ಯರ್ಥಿಗಳು ಹೊಸ ಹುರುಪಿನ ಜತೆ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಜತೆಗೆ ಆಡಳಿತದ ಓಂ ನಾಮ ಕಲಿಯುವ ಉತ್ಸಾಹ ತೋರುತ್ತಿದ್ದಾರೆ. ಇಂಥವರು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಜತೆಗೆ ಅದನ್ನು ಪರಿಹರಿಸುವ ಕ್ಷಮತೆ ತೋರಬೇಕಿದೆ.

    ಸತತ 4ನೇ ಬಾರಿಗೆ ಆಯ್ಕೆಯಾಗಿದ್ದೇನೆ. ಈಗ ಎಲ್ಲ ಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದೇನೆ. ಸದಸ್ಯರು ಹಾಗೂ ಅಧಿಕಾರಿಗಳ ವಿಶ್ವಾಸ ಗಳಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಮೂಲಸೌಕರ್ಯ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ.
    ಮುನಿರಾಜು, ಬೂದಿಹಾಲ್ ಗ್ರಾಪಂ ಅಧ್ಯಕ್ಷ

    ಬೇಸಿಗೆಯಲ್ಲಿ ಕುಡಿವನೀರು ಮತ್ತು ಸ್ವಚ್ಚತೆಗೆ ಆದ್ಯತೆ ನೀಡುವ ಜತೆಗೆ ಸಮಸ್ಯೆ ಇರುವ ಕ್ಷೇತ್ರಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಉಲ್ಬಣಿಸದಂತೆ ಎಚ್ಚರಿಕೆವಹಿಸಲಾಗಿದೆ.
    ಲಕ್ಷ್ಮಮ್ಮ, ಯಂಟಗಾನಹಳ್ಳಿ ಗ್ರಾಪಂ ಅಧ್ಯಕ್ಷೆ

    ತಾಲೂಕಿನಾದ್ಯಂತ ನೀರಿನ ಸಮಸ್ಯೆ ಉದ್ಭವಿಸಬಹುದಾದ 135 ಗ್ರಾಮಗಳನ್ನು ಗುರುತಿಸಲಾಗಿದೆ. ಅಗತ್ಯವಿದ್ದಲ್ಲಿ ರೈತರ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುವುದು. ಜತೆಗೆ ಕೊಳವೆಬಾವಿ, ಪೈಪ್‌ಲೈನ್ ಅಳವಡಿಕೆ ಕಾರ್ಯಗಳಿಗೆ ಅಗತ್ಯವಿರುವ 6.5 ಕೋಟಿ ರೂ. ಅನುದಾನ ಬಿಡುಗಡೆಗಾಗಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಮೋಹನ್‌ಕುಮಾರ್, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts