More

    ಗ್ರಾಪಂಗಳಲ್ಲಿ ಶಾಂತಿಯುತ ಮತದಾನ

    ಕೋಲಾರ: ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕಿನ 85 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ಮಾಲೂರಿನ ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಂಬಿಪುರ ಕ್ಷೇತ್ರದಲ್ಲಿ ಗ್ರಾಮಸ್ಥರು ಮೂಲಸೌಕರ್ಯಕ್ಕೆ ಪಟ್ಟು ಹಿಡಿದು ಅಧಿಕಾರಿಗಳ ಸಂಧಾನಕ್ಕೂ ಬಗ್ಗದೆ ಮತದಾನ ಬಹಿಷ್ಕರಿಸುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಮೊದಲ ಹಂತದಲ್ಲಿ 85 ಗ್ರಾಪಂಗಳಿಂದ 1520 ಸ್ಥಾನಗಳಿಗೆ ನಡೆಯಬೇಕಾದ ಚುನಾವಣೆಯಲ್ಲಿ 118 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 1402 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಖಾಡದಲ್ಲಿರುವ 3555 ಅಭ್ಯರ್ಥಿಗಳ ಭವಿಷ್ಯವನ್ನು 793 ಬೂತ್‌ಗಳಲ್ಲಿ ಮತದಾರರು ತಮಗೆ ಅರ್ಹರೆನಿಸಿದವರಿಗೆ ಮತಪತ್ರದಲ್ಲಿ ಮುದ್ರೆ ಒತ್ತಿ ಮತಪೆಟ್ಟಿಗೆಗೆ ಹಾಕಿದ್ದಾರೆ. ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ಒಟ್ಟು 2,25, 612 ಪುರುಷ, 2,23,776 ಮಹಿಳೆಯರು, 20 ಇತರ ಸೇರಿ ಒಟ್ಟು 4,49,408 ಮತದಾರರಿದ್ದರು.

    ಚುರುಕಿನ ಮತದಾನ: ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಚಳಿಯಲ್ಲೂ ಕೆಲ ಮತದಾರರು ಬೂತ್‌ನಲ್ಲಿ ಮೊದಲ ವೋಟ್ ಮಾಡುವ ಹಂಬಲದಿಂದ ದೌಡಾಯಿಸಿದರೆ ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಸ್ವಲ್ಪ ಚುರುಕುಗೊಂಡಿತು. ಬೆಳಗ್ಗೆ 9 ಗಂಟೆಗೆ ಶೇ.10. 86 ಮತದಾನವಾದರೆ 11 ಗಂಟೆ ವೇಳೆಗೆ ಶೇ. 28.02 ದಾಖಲಾಗಿತ್ತು. 1 ಗಂಟೆಯ ವೇಳೆಗೆ ಶೇ.52.12 ಮತದಾನವಾದರೆ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.70.54 ಮತದಾನವಾಗಿದೆ.

    ಅಭ್ಯರ್ಥಿಗಳು, ಬೆಂಬಲಿಗರು ಮತದಾರರಲ್ಲಿ ಕಡೇ ಕ್ಷಣದ ಮತಯಾಚಿಸಿದರೆ ಕೆಲವೆಡೆ ಸಂಪ್ರದಾಯದಂತೆ ಮತದಾರರಿಗೆ ಎಲೆ ಅಡಕೆ ನೀಡಿ ಬೂತ್‌ಗೆ ಕಳುಹಿಸುತ್ತಿದ್ದರು. ಕೆಲ ಅಭ್ಯರ್ಥಿಗಳು ಮತದಾರರಿಗೆ ವಾಹನ ಕಳುಹಿಸಿ ಮತಗಟ್ಟೆಗೆ ಕರೆಸಿಕೊಂಡು ವೋಟು ಹಾಕಿಸಿಕೊಳ್ಳುವ ಕಸರತ್ತು ಮಾಡಿದರು.

    ಹಣದ ಹೊಳೆ: ಪಂಚಾಯಿತಿ ಚುನಾವಣೆಯಲ್ಲೂ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ವೋಟಿಗೆ ಇಂತಿಷ್ಟು ಹಣ, ಬೆಳ್ಳಿ ದೀಪ, ರೇಷ್ಮೆ ಸೀರೆ ಸೇರಿ ಇನ್ನಿತರ ಉಡುಗೊರೆ ಹಂಚಿರುವ ಬಗ್ಗೆ ಮತಚಾವಡಿಯಲ್ಲಿ ಮಾತು ಕೇಳಿಬಂದರೆ, ಎದುರಾಳಿ ಅಭ್ಯರ್ಥಿ ನೀಡಿದ ಹಣ, ಗಿಫ್ಟ್ ಲೆಕ್ಕಾಚಾರದಲ್ಲಿ ತಮ್ಮ ಸೋಲು ಖಚಿತ ಎಂದು ಸ್ವತಃ ಅಭ್ಯರ್ಥಿಗಳೇ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

    ಮತದಾನ ಬಹಿಷ್ಕಾರ: ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಪಂನ ಕಂಬೀಪುರದಲ್ಲಿ ರಸ್ತೆ ಸೇರಿ ಅಗತ್ಯ ಸೌಕರ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. 300 ಮತದಾರರಿದ್ದು, ಮತದಾನ ಪ್ರಕ್ರಿಯೆ ಆರಂಭಕ್ಕೆ ಮುಂಚೆಯೇ ಗ್ರಾಮಸ್ಥರು ಮತದಾನ ಬಹಿಷ್ಕರಿಸುತ್ತಿರುವುದಾಗಿ ಬ್ಯಾನರ್ ಹಿಡಿದು ಪ್ರತಿಭಟಿಸಿದರು. ಕೋಲಾರ ಎಸಿ ಸೋಮಶೇಖರ್ ಮತ್ತು ಮಾಲೂರು ತಹಸೀಲ್ದಾರ್ ಮಂಜುನಾಥ್ ಮನವೊಲಿಸಲು ಪ್ರಯತ್ನಿಸಿದರಾದರೂ ಲಿಖಿತ ಭರವಸೆ ನೀಡಲು ಪಟ್ಟು ಹಿಡಿದರು. ಅಧಿಕಾರಿಗಳು ಅಸಹಾಯಕರಾಗಿ ನಿರ್ಗಮಿಸಿದರು.

    ಮತಗಟ್ಟೆ ಬಳಿ ಗಲಾಟೆ: ಕೋಲಾರ ತಾಲೂಕು ಕೊಂಡರಾಜನಹಳ್ಳಿ ಬ್ಲಾಕ್-2ರ ಮತಗಟ್ಟೆ ಬಳಿ ಅಭ್ಯರ್ಥಿ ಅ್ಸರ್ ಎಂಬುವವರು ಪ್ರಚಾರ ನಡೆಸುತ್ತಿದ್ದುದನ್ನು ಎದುರಾಳಿ ಅಭ್ಯರ್ಥಿ ಮಂಜುನಾಥ್ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಕಸಬಾ ಹೋಬಳಿಯ ಚುನಾವಣಾಧಿಕಾರಿ ಕೆ.ಎನ್.ಮಂಜುನಾಥ್, ಎಂಸಿಸಿ ತಂಡದ ಸದಸ್ಯ ರಾಜೇಂದ್ರ ಪ್ರಸಾದ್ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ನೂರು ಮೀಟರ್ ದೂರ ಹೋಗಿ ಎಂದು ಸೂಚಿಸಿದರು. ಅಪ್ಸರ್ ಪಾಷಾ ನಿರಾಕರಿಸಿದಾಗ ಪೊಲೀಸರು ಅಭ್ಯರ್ಥಿ ಹಾಗೂ ಬೆಂಬಲಿಗರನ್ನು ಮತಗಟ್ಟೆಯಿಂದ ಆಚೆ ಕಳುಹಿಸಿದರು. ಈ ವೇಳೆ ಎಸ್‌ಡಿಪಿಐ ಬೆಂಬಲಿಗನೆಂದು ಹೇಳಲಾದ ಒಬ್ಬ ಪೊಲೀಸರಿಗೆ ಧಮ್ಕಿ ಹಾಕಿದಾಗ ಮತ್ತೊಂದು ಮತಗಟ್ಟೆ ಬಳಿ ಇದ್ದ ಪೊಲೀಸರು ವ್ಯಕ್ತಿಯನ್ನು ಆಚೆ ಕಳುಹಿಸಿದರು.

    ಶಾಸಕದ್ವಯರಿಂದ ಮತದಾನ: ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರು ಪತ್ನಿ ವಿಜಯಮ್ಮ ಹಾಗೂ ಪುತ್ರ ಹರ್ಷ ಅವರೊಂದಿಗೆ ಸ್ವಗ್ರಾಮ ಅಡ್ಡಗಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಪತ್ನಿಯೊಂದಿಗೆ ಕೊಮ್ಮನಹಳ್ಳಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

    ಯುವಕರಲ್ಲಿ ಉತ್ಸಾಹ: ತಮ್ಮವರನ್ನು ಗೆಲ್ಲಿಸಿಕೊಳ್ಳಲು ಯುವಕರಲ್ಲಿ ಅತಿಯಾದ ಉತ್ಸಾಹ ಕಂಡು ಬಂತು. ಕೋಲಾರ ತಾಲೂಕಿನ ಅರಾಭಿಕೊತ್ತನೂರು, ನಾಗಲಾಪುರ, ಕೊಂಡರಾಜಹಳ್ಳಿ, ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು, ನೆಲವಂಕಿ, ದಳಸನೂರು, ಮುಳಬಾಗಿಲಿನ ಮಾಸ್ತಿ, ಚಿಕ್ಕತಿರುಪತಿ, ಮಡಿವಾಳ, ಟೇಕಲ್ ಇನ್ನಿತರ ಕಡೆ ಮತಗಟ್ಟೆ ಬಳಿ ಯುವಕರ ಪಡೆ ಕಂಡು ಬಂತು.

    ಮತಗಟ್ಟೆ ಬಳಿ ಮಾರಾಮಾರಿ: ಕೋಲಾರ ತಾಲೂಕಿನ ಕ್ಯಾಲನೂರಿನ ಮತಗಟ್ಟೆ ಬಳಿ ಇಬ್ಬರು ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಉಂಟಾಗಿದ್ದರಿಂದ ಮತ ಚಲಾಯಿಸಲು ಬಂದಿದ್ದ ಜನ ಭಯದಿಂದ ಓಡಿದರು. ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಮನೆ ಸೇರಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

    ಅಧಿಕಾರಿಗಳ ಎಡವಟ್ಟು: ಕೋಲಾರ ತಾಲೂಕಿನ ಉರಿಗಿಲಿ ಗ್ರಾಪಂ ವ್ಯಾಪ್ತಿಯ ನಾಗನಾಳ ಮತಗಟ್ಟೆಯಲ್ಲಿ ಎರಡು ಗಂಟೆ ಮತದಾನ ಸ್ಥಗಿತಗೊಂಡಿತ್ತು. ಮತಗಟ್ಟೆ ಸಿಬ್ಬಂದಿ ಮತದಾರರಿಗೆ ಮತಚೀಟಿ ಮಡುಚಿಕೊಡುವಲ್ಲಿ ಆದ ಪ್ರಮಾದದಿಂದ ಪ್ರಾರಂಭದಲ್ಲಿ ಚಲಾವಣೆಗೊಂಡಿದ್ದ 57 ಮತ ತಿರಸ್ಕೃತವಾಗುವ ಶಂಕೆಯಿಂದ ಮತದಾರರೊಬ್ಬರು ವಿರೋಧ ವ್ಯಕ್ತಪಡಿಸಿದರು. 2 ಗಂಟೆ ಮತದಾನ ಸ್ಥಗಿತಗೊಂಡಿತು. ಮತಗಟ್ಟೆ ಅಧಿಕಾರಿ ಶ್ರೀನಿವಾಸ್ ಮತದಾರರ ಮನವೊಲಿಸಿ ಡಿಸಿ ಗಮನಕ್ಕೆ ತಂದು ಪ್ರಕ್ರಿಯೆ ಮುಂದುವರಿಸಿದರು.

    ಕ್ರಮ ಸಂಖ್ಯೆ ಬದಲು: ಮಾಲೂರಿನ ರಾಜೇನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಕಲ್ಲಹಳ್ಳಿ ಕ್ಷೇತ್ರದ ಮತಪತ್ರದಲ್ಲಿ ಕ್ರಮಸಂಖ್ಯೆ ಬದಲಾಗಿದೆ ಎಂದು ಅಭ್ಯರ್ಥಿ ಸೌಭಾಗ್ಯಮ್ಮ ಆಕ್ಷೇಪಿಸಿದರು. ಇದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ಸೌಭಾಗ್ಯಮ್ಮ ಸರಿಯಾಗಿ ವಿಚಾರ ತಿಳಿದುಕೊಳ್ಳದೆ ಚುನಾವಣಾ ಪ್ರಚಾರಕ್ಕಾಗಿ ಮಾದರಿ ಮತದಾನ ಪತ್ರದಲ್ಲಿ ಕ್ರಮ ಸಂಖ್ಯೆ 9ರಲ್ಲಿ ಆಟೋ ಚಿಹ್ನೆ ಮುದ್ರಿಸಿ ಮತಯಾಚಿಸಿದ್ದರು. ಆದರೆ ಜಿಲ್ಲಾಡಳಿತ ನೀಡಿದ ಅಧಿಕೃತ ಮತಪತ್ರದಲ್ಲಿ 8ನೇ ಕ್ರಮ ಸಂಖ್ಯೆಯಲ್ಲಿ ಆಟೋ ಚಿಹ್ನೆ ನಮೂದಾಗಿತ್ತು. ಇದರಿಂದ ಆತಂಕಕ್ಕೀಡಾದ ಅಭ್ಯರ್ಥಿ ಕ್ರಮ ಸಂಖ್ಯೆ ಬದಲಿಸುವಂತೆ ಪಟ್ಟು ಹಿಡಿದಿದ್ದರು. ತಹಸೀಲ್ದಾರ್ ಮಂಜುನಾಥ್ ಅಭ್ಯರ್ಥಿಗೆ ವಾಸ್ತವಾಂಶ ಮನವರಿಕೆ ಮಾಡಿಕೊಟ್ಟ ನಂತರ ಮತದಾನ ಮತ್ತೆ ಶುರುವಾಯಿತು.

    ಕಂಬೀಪುರದಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ್ದು, ಜಿಪಂ ಸಿಇಒ, ನಾನು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಚರ್ಚಿಸಿದ್ದೇವೆ. ಕ್ರಮದ ಭರವಸೆ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದೆವು. ಆದರೂ ಯಾರೊಬ್ಬರೂ ಮತದಾನ ಮಾಡಿಲ್ಲ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಸೋಮಶೇಖರ್, ಉಪ ವಿಭಾಗಾಧಿಕಾರಿ ಕೋಲಾರ

    ಇದೇ ಮೊದಲ ಬಾರಿಗೆ ಸ್ಥಳೀಯ ಸರ್ಕಾರಕ್ಕೆ ಪ್ರತಿನಿಧಿ ಆಯ್ಕೆಗೆ ಹಕ್ಕು ಚಲಾಯಿಸಿದೆ. ಮತದಾನ ನನ್ನ ಹಕ್ಕು, ಖುಷಿಯಿಂದ ಮತದಾನ ಮಾಡಿದ್ದೇನೆ, ಯಾರೇ ಗೆದ್ದರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು.
    ಶಶಾಂಕ್, ದ್ವಿತೀಯ ಬಿಕಾಂ ವಿದ್ಯಾರ್ಥಿ, ಅರಾಭಿಕೊತ್ತನೂರು

    ಮೊದಲ ಬಾರಿಗೆ ನನ್ನ ಹಕ್ಕು ಚಲಾಯಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಅದೂ ಗ್ರಾಪಂ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭ ಎಂಬುದು ಮತ್ತಷ್ಟು ಖುಷಿ ನೀಡಿದೆ.
    ಸುಷ್ಮಾ, ನಾಗಲಾಪುರ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts