More

    ಗ್ರಾಚ್ಯುಟಿ ಸೌಲಭ್ಯ ಕಲ್ಪಿಸುವಂತೆ ಆಗ್ರಹ

    ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    1972ರ ಗ್ರಾಚ್ಯುಟಿ ಕಾಯ್ದೆ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಏಪ್ರಿಲ್ 25ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ಪ್ರಕಾರ ರಾಜ್ಯಾದ್ಯಂತ ಸಾವಿರಾರು ನಿವೃತ್ತಿ ನೌಕರರು, ಸಿಡಿಪಿಒ, ಡಿ.ಡಿ. ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸ್ವತಃ ಹಾಗೂ ಅಂಚೆ ಮೂಲಕ ಸಲ್ಲಿಸಿದ್ದಾರೆ. ಆದರೆ, ಕೆಲಕಡೆ ಅರ್ಜಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಆದೇಶಿಸಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಿಸಬೇಕು. ಐಸಿಡಿಸಿ ಮಾರ್ಗಸೂಚಿಗಳ ಪ್ರಕಾರ ಇರುವ 6 ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಬೇಕು. ಉಚಿತ ಕೆಲಸ ಮಾಡಿಸಿಕೊಳ್ಳುವುದನ್ನು ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ಹಾಸನ, ಬೆಳಗಾವಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ಸಹಾಯಕಿ, ಮಿನಿ ಕಾರ್ಯಕರ್ತೆ ವರ್ಗಾವಣೆಗಳಿಗೆ ಅರ್ಹತೆಯಿದ್ದರೂ ಜನಪ್ರತಿನಿಧಿಗಳ ಆಜ್ಞೆಯಂತೆ ನಡೆಯುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಬೇಕು. ಹೊಸದಾಗಿ 4,500 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಅವುಗಳ ಜತೆ ಈಗಾಗಲೇ ಇರುವ ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ರಾಜ್ಯಮಟ್ಟದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ಜಿ.ಎಂ. ಜೈನೆಖಾನ್, ದೊಡ್ಡವ್ವ ಪೂಜಾರಿ, ಗೋದಾವರಿ ರಾಜಾಪುರೆ, ಚನ್ನಮ್ಮ ಗಡ್ಕರಿ, ಪಾರ್ವತಿ ಸಾಲಿಮಠ, ವಿಜಯಾ ಕಲಾದಗಿ, ಮುನಿರಾ ಮುಲ್ಲಾ, ಸಿ.ಎಸ್. ಮಗದುಮ್, ಭಾರತಿ ಸನದಿ, ಗುರವ್ವ ಮಡಿವಾಳ, ಮಂದಾ ನೇವಗಿ, ಸುವರ್ಣಾ ಕಮತಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts