More

    ಗ್ಯಾರಂಟಿ ಯೋಜನೆಗೆ ಕೆಲವರ ವಿರೋಧ  – ಮಲ್ಲಿಕಾರ್ಜುನ್ ಅಸಮಾಧಾನ -ಅರಸು ಜನ್ಮ ದಿನಾಚರಣೆ 

    ದಾವಣಗೆರೆ: ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಭೂ ಸುಧಾರಣೆ ಕಾಯ್ದೆಗೆ ವಿರೋಧ ಎದುರಾಗಿತ್ತು. ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೂ ಪುರೋಹಿತಶಾಹಿಗಳು ಟೀಕಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು.
    ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಸು ಹಾದಿಯಲ್ಲೇ ಸಿದ್ದರಾಮಯ್ಯ ಸಾಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೂ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದರು.
    ಭೂ ಸುಧಾರಣೆ, ಜೀತ ವಿಮೋಚನೆ ಕಾಯ್ದೆ, ಪದವೀಧರರಿಗೆ ಭತ್ಯೆ, ಋಣ ಪರಿಹಾರ ಸೇರಿ ಹಲವು ಜನಪರ ಕಾರ್ಯಕ್ರಮಗಳನ್ನು ಅರಸು ಅವರು ಜಾರಿಗೆ ತಂದಿದ್ದರು. ಜನರಿಗೆ ಸ್ಪಂದಿಸುವ ಸಮಯಪ್ರಜ್ಞೆ ಅವರಲ್ಲಿತ್ತು ಎಂದು ಹೇಳಿದರು.
    ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ದೇವರಾಜ ಅರಸು ಅವರು ಉಳುವವನನ್ನೇ ಒಡೆಯನನ್ನಾಗಿ ಮಾಡಿದರೆ, ಸಿದ್ದರಾಮಯ್ಯ ಅವರು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದಲಿತರ ಬಳಿ ಜಮೀನು ಉಳಿಯುವಂತೆ ಮಾಡಿದ್ದಾರೆ. ಇಬ್ಬರೂ ನಾಣ್ಯದ ಎರಡು ಮುಖ ಎಂದು ಬಣ್ಣಿಸಿದರು.
    ದೇವರಾಜ ಅರಸು ಅವರ ಆಡಳಿತ ವೈಖರಿ, ದಮನಿತರು ಹಾಗೂ ಬಡವರನ್ನು ಉತ್ತಮ ಹಂತಕ್ಕೆ ತಂದಿದೆ. ತಲೆ ಎತ್ತಿ ನಡೆಯುವಂತೆ ಮಾಡಿದೆ ಎಂದರು.
    ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾತನಾಡಿ, ದೇವರಾಜ ಅರಸು ಜಾರಿಗೆ ತಂದ ಭೂ ಸುಧಾರಣೆಯಿಂದ 15 ಲಕ್ಷ ಕುಟುಂಬಗಳಿಗೆ ನೆರವಾಯಿತು. ಪಶ್ಚಿಮ ಬಂಗಾಳದಲ್ಲಿ ಮೊದಲು ಭೂ ಸುಧಾರಣೆ ಜಾರಿಗೆ ಬಂದಿತ್ತು. ಆದರೆ, ಅರಸು ಕಾರಣದಿಂದ ಕರ್ನಾಟಕದಲ್ಲಿ ಅದು ಹೆಚ್ಚು ಪ್ರಭಾವಿಯಾಗಿ ಜಾರಿಗೆ ಬಂದಿತು ಎಂದು ಹೇಳಿದರು.
    ಉಪನ್ಯಾಸ ನೀಡಿದ ಉಪನ್ಯಾಸಕ ದಾದಾಪೀರ್ ನವಿಲೇಹಾಳ್, ಅರಸು ಆಡಳಿತಕ್ಕೂ ಮುನ್ನ ರಾಜಕೀಯದ ಶೇ.90ರಷ್ಟು ಸ್ಥಾನಗಳು ಉಳ್ಳವರ ಪಾಲಾಗಿದ್ದವು. ಅರಸು ಅವರಿಂದಾಗಿ 1972ರ ಚುನಾವಣೆಯಲ್ಲಿ ಶೇ.70ರಷ್ಟು ರಾಜಕೀಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ದೊರೆತವು. ಹಾವನೂರು ಆಯೋಗದ ವರದಿ ಮೂಲಕ ಹಿಂದುಳಿದವರಿಗೆ ಮೀಸಲು ಕಲ್ಪಿಸಿದರು ಎಂದು ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಾಗಿತ್ತು.
    ಎಸ್ಪಿ ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಪಾಲಿಕೆ ಸದಸ್ಯ ಚಮನ್‌ಸಾಬ್, ತಹಸೀಲ್ದಾರ್ ಎಂ.ಬಿ. ಅಶ್ವತ್ಥ, ಮುಖಂಡರಾದ ಕರಿಬಸಪ್ಪ, ಪರಶುರಾಮ್, ಬೂದಾಳ್ ಬಾಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts