More

    ಗೋವಾದಲ್ಲಿ ಸಿಕ್ಕಿಕೊಂಡ ತಾಂಡಾ ಜನ!

    ಲಕ್ಷ್ಮೇಶ್ವರ: ಹೊಟ್ಟೆಪಾಡಿಗಾಗಿ ಗೋವಾಕ್ಕೆ ದುಡಿಯಲು ಹೋಗಿದ್ದ ಲಕ್ಷೆ್ಮೕಶ್ವರ ತಾಲೂಕಿನ ಹರದಗಟ್ಟಿ ತಾಂಡಾದ 15 ಕುಟುಂಬಗಳು ಅಲ್ಲಿರಲಾಗದೆ, ಇಲ್ಲಿಗೆ ಬರಲಾಗದೆ ಅತಂತ್ರ ಸ್ಥಿತಿಯಲ್ಲಿದ್ದು ಬದುಕಲು ಹೋರಾಟ ನಡೆಸುತ್ತಿವೆ.

    ಹರದಗಟ್ಟಿ ತಾಂಡಾದ 15 ಕುಟುಂಬಗಳ 30 ಜನರ ತಂಡ ಅನೇಕ ವರ್ಷಗಳಿಂದ ಗೋವಾದ ಪಣಜಿ ಬಳಿಯ ಮಾಪ್ಸಾ ಎಂಬ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಇದೀಗ ಕರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಇಡೀ ದೇಶವನ್ನೇ ಲಾಕ್​ಡೌನ್ ಮಾಡಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ದುಡಿಯಲು ಹೋದ ಇಂತಹ ಜನರ ಪರಿಸ್ಥಿತಿ ಅರಣ್ಯರೋದನವಾಗಿದೆ. ಸ್ವಗ್ರಾಮಕ್ಕೆ ಬರಲು ಅಲ್ಲಿನ ಪೊಲೀಸರು ಚೆಕ್​ಪೋಸ್ಟ್​ನಲ್ಲಿ ಅವಕಾಶ ನೀಡುತ್ತಿಲ್ಲ. ಸ್ಥಳೀಯ ಸರ್ಕಾರ ಇವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇದರಿಂದ ಮೂರ್ನಾಲ್ಕು ದಿನಗಳಿಂದ ಉಪಾಹಾರ, ಊಟ, ನೀರು ಇಲ್ಲದೇ ದಿಕ್ಕು ತೋಚದಂತಾಗಿದ್ದು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

    ತಾಂಡಾದ ಜನರು ಹರದಗಟ್ಟಿ ಗ್ರಾಪಂ ಅಧ್ಯಕ್ಷ ಗಣೇಶ ನಾಯಕ ಅವರಿಗೆ ಪೋನ್ ಮಾಡಿ ನಾವಿಲ್ಲಿ ಅನ್ನ, ನೀರು, ನೆಲೆಯಿಲ್ಲದೆ ಸಾಯುವ ಸ್ಥಿತಿಯಲ್ಲಿದ್ದೇವೆ. ನಮ್ಮನ್ನು ಹೇಗಾದರೂ ಇಲ್ಲಿಂದ ಪಾರು ಮಾಡಿ ಊರಿಗೆ ಕರೆಯಿಸಿಕೊಂಡು ಪುಣ್ಯಕಟ್ಟಿಕೊಳ್ಳಿ ಎಂದು ಅಂಗಲಾಚುತ್ತಿದ್ದಾರೆ.

    ಕನ್ನಡಿಗರನ್ನು ರಕ್ಷಿಸಿ

    ಸಂಕಷ್ಟದಲ್ಲಿ ಸಿಲುಕಿರುವ ತಾಂಡಾದ ಜನರು ಸ್ವಗ್ರಾಮಕ್ಕೆ ಬರುವ ನಿಟ್ಟಿನಲ್ಲಿ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು. ಗೋವಾ ಸೇರಿ ಇತರೇ ರಾಜ್ಯಗಳಿಗೆ ದುಡಿಯಲು ಹೋಗಿ ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ಆಯಾ ರಾಜ್ಯದ ಸರ್ಕಾರದೊಂದಿಗೆ ಮಾತನಾಡಿ, ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ವಿನಂತಿಸಿದ್ದಾರೆ.

    ಇಡೀ ದೇಶ ಲಾಕ್​ಡೌನ್ ಘೊಷಣೆಯಲ್ಲಿದ್ದು, ಅಂತಾರಾಜ್ಯ ಸಂಪರ್ಕ ಕಡಿತಗೊಳಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿಯೇ ಅಧಿಕಾರಿಗಳನ್ನು ಭೇಟಿ ಮಾಡಿ ವ್ಯವಸ್ಥೆ ಕಲ್ಪಿಸಿಕೊಂಡು ಅಲ್ಲಿಯೇ ಇರುವುದು ಸೂಕ್ತ. ಆದಾಗ್ಯೂ ಗೋವಾದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ.

    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts