More

    ಗೋಮಾಳ ಜಮೀನು ಮಂಜೂರಾತಿಗೆ ವಿರೋಧ

    ಬ್ಯಾಡಗಿ: ಪಟ್ಟಣದ ಬೆಟ್ಟದ ಮಲ್ಲೇಶ್ವರ ಪ್ರದೇಶದ ಗೋಮಾಳ ಜಮೀನನ್ನು ನಿವೇಶನಕ್ಕಾಗಿ ಮಂಜೂರಾತಿ ನೀಡುತ್ತಿರುವ ಕಂದಾಯ ಇಲಾಖೆ ಹಾಗೂ ಶಾಸಕರ ಕ್ರಮ ಖಂಡಿಸಿ ಆ. 15ರಂದು ಕಪ್ಪುಬಟ್ಟೆ ಧರಿಸಿ ಜಾನುವಾರು ಸಮೇತ ಸರ್ಕಾರಿ ಕ್ರೀಡಾಂಗಣದ ಬಳಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು.
    ಪ್ರವಾಸಿ ಮಂದಿರಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಸ.ನಂ. 171 ರಲ್ಲಿ ನಿವೇಶನಕ್ಕೆ ಮಂಜೂರು ಮಾಡಲು ಯತ್ನಿಸಿದಾಗ ರೈತರು ತೀವ್ರವಾಗಿ ವಿರೋಧಿಸಿದ್ದರು. ಬಳಿಕ ತೆರೇದಹಳ್ಳಿ ಬಳಿ 10 ಎಕರೆ ಖಾಸಗಿ ಜಾಗವನ್ನು ಖರೀದಿಸಿದ್ದಾರೆ. ಸ್ಥಳೀಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಪಟ್ಟಣದ ಜಾನುವಾರುಗಳ ಸಂಖ್ಯೆ 5 ಸಾವಿರ ದಾಟಿದ್ದು, ಕಾಯ್ದೆಯಂತೆ 100 ಜಾನುವಾರುಗಳಿಗೆ 30 ಎಕರೆಯಂತೆ ಗೋಮಾಳ ಮೀಸಲಿಡಬೇಕಿದೆ ಎಂದು ತಿಳಿಸಿದ್ದೇವೆ. ಆದರೆ, ಶಾಸಕರು 9 ಎಕರೆ 31 ಗುಂಟೆ ಗೋಮಾಳವನ್ನು ಜಿಲ್ಲಾಧಿಕಾರಿಗೆ ಮಂಜೂರಾತಿಗಾಗಿ ಪ್ರಸ್ತಾವನೆ ಕಳುಹಿಸಿರುವುದು ರೈತವಿರೋಧಿ ನೀತಿಯಾಗಿದೆ. ನಮೂನೆ 27 ರಲ್ಲಿ ಸಾರ್ವಜನಿಕರ ಆಕ್ಷೇಪಣೆಗೆ ನೋಟಿಸ್ ಜಾರಿಯಾಗಿದ್ದು, ತಕರಾರು ಸಲ್ಲಿಸಲಾಗಿದೆ. 121 ಎಕರೆ 9 ಗುಂಟೆ ಗೋಮಾಳ ಬಿಡುವ ಪ್ರಶ್ನೆಯಿಲ್ಲ, ನಮ್ಮ ಬೇಡಿಕೆ ವಿರೋಧಿಸಿ ಅಧಿಕಾರಿಗಳು ಕಾರ್ಯೋನ್ಮುಖರಾದರೆ, ಹೋರಾಟ ತೀವ್ರಗೊಳಿಸಲಾಗುವುದು. ಅ. 15ರಂದು ರೈತರು ಕಪ್ಪು ಬಟ್ಟೆ ಪ್ರದರ್ಶನ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
    ರೈತ ಸಂಘ ನಿರಾಶ್ರಿತರ ವಿರೋಧಿಯಲ್ಲ: ರೈತ ಸಂಘ ಬಡವರಿಗೆ ನಿವೇಶನ ನೀಡುವುದನ್ನು ವಿರೋಧಿಸುತ್ತಿಲ್ಲ, ಗೋಮಾಳ ಜಮೀನು ಮಂಜೂರಾತಿ ಕೈಬಿಡಲು ಆಗ್ರಹಿಸಿದ್ದೇವೆ. ಬೇಕಾದರೆ ಖಾಸಗಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲಿ. ನಾವು ಬಡವರ ಪರವಾಗಿದ್ದು, ಆಶ್ರಯ ಬಡಾವಣೆಯಲ್ಲಿ 150ಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಅವುಗಳನ್ನು ಬಡವರಿಗೆ ವಿತರಿಸಲಿ ಎಂದು ಆಗ್ರಹಿಸಿದರು.
    ಆ. 8ರಂದು ತಹಸೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ: ಪಟ್ಟಣದ 171 ಸ.ನಂ.ಗೋಮಾಳವನ್ನು ನಿವೇಶನಕ್ಕಾಗಿ ಮಂಜೂರಾತಿ ನೀಡಬಾರದು. ಬೆಳೆ ಹಾನಿ ಪರಿಹಾರ ತಕ್ಷಣ ಬಿಡುಗಡೆ, ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಂಡ ರೈತರಿಗೆ ಎಕರೆ 30 ಸಾ.ರೂ. ಬಿಡುಗಡೆ, ಆಕಸ್ಮಿಕ ಮೃತ ಜಾನುವಾರುಗಳಿಗೆ ಪರಿಹಾರ ಘೊಷಣೆ, ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅ. 8ರಂದು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು. ಆವರಣದಲ್ಲಿ ನೂರಾರು ಜಾನುವಾರುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ತಾಲೂಕಿನ ವಿವಿಧ ಗ್ರಾಮಗಳ ರೈತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
    ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ಹಿಂದಿನ ವರ್ಷ ಅರ್ಜಿ ಸಲ್ಲಿಸಿದ ಸಾವಿರಾರು ರೈತರಿಗೆ ಪರಿಹಾರ ಹಣ ವಿತರಿಸುವಲ್ಲಿ ತಾರತಮ್ಯ ಎಸಗಲಾಗಿದೆ. ಪ್ರಸಕ್ತ ವರ್ಷ ಸಾವಿರಾರು ಅರ್ಜಿ ಸಲ್ಲಿಕೆಯಾಗಿದ್ದು, ಸರ್ಕಾರ ಈವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ, ಸರ್ಕಾರ ಸಕಾಲದಲ್ಲಿ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
    ಪುರಸಭೆ ಮಾಜಿ ಅಧ್ಯಕ್ಷ ಶಂಭಣ್ಣ ಬಿದರಿ, ಸದಸ್ಯ ಬಸವರಾಜ ಸಂಕಣ್ಣನವರ, ರೈತ ಮುಖಂಡರಾದ ಅಶೋಕ ಮಾಳೇನಹಳ್ಳಿ, ನಿಂಗಪ್ಪ ಮಾಸಣಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts