More

    ಗೋಕರ್ಣದಲ್ಲಿ ಕಸ ವಿಲೇವಾರಿ ಕಗ್ಗಂಟು

    ವಿಜಯವಾಣಿ ಸುದ್ದಿಜಾಲ ಗೋಕರ್ಣ: ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗಳು ಭೇಟಿ ನೀಡುವ ಗೋಕರ್ಣದಲ್ಲೀಗ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಗೋಕರ್ಣ ಗ್ರಾಮ ಪಂಚಾಯಿತಿಯು 9 ಕಿಮೀಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ತನ್ನ ಆಡಳಿತ ಹೊಂದಿದೆ. ಆದರೆ, ಇದಕ್ಕೆ ಬೇಕಾಗುವಷ್ಟು ಸಿಬ್ಬಂದಿ ಇಲ್ಲ. ಆದ್ದರಿಂದ ಸ್ಥಳೀಯ ಆಡಳಿತ ನಡೆಸುತ್ತಿರುವ ಯಾವ ಯೋಜನೆಗಳೂ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡುತ್ತಿಲ್ಲ.

    ಒಣಕಸ ಬೇರ್ಪಡಿಸುವುದೇ ಸವಾಲು: ಜಿಲ್ಲೆಯ ಮೊಟ್ಟ ಮೊದಲ ಕಸ ಸಂಸ್ಕರಣೆ ಘಟಕ ಇಲ್ಲಿದೆ. ಸಂಸ್ಕರಣೆ ಘಟಕಕ್ಕೆ ಬೇಕಾಗುವಷ್ಟು ಒಣ ಕಸ ಇಲ್ಲಿ ಲಭ್ಯವಿದೆ. ಆದರೆ, ಈ ಕಸವನ್ನು ಮಣ್ಣು, ಬೂದಿ ಇತ್ಯಾದಿಗಳಿಂದ ಬೇರ್ಪಡಿಸಿ ನೀಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇವಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾತ್ರ ಈಗ ಸಂಸ್ಕರಿಸಲಾಗುತ್ತಿದೆ. ಇದೇ ಕಾರಣದಿಂದ ಕಳೆದ ಐದಾರು ದಿನಗಳಿಂದ ಮುಖ್ಯ ಸ್ಥಳಗಳಲ್ಲಿ ನಿತ್ಯ ಕೈಗೊಳ್ಳಲಾಗುತ್ತಿದ್ದ ಕಸ ಗುಡಿಸಿ ಸಂಗ್ರಹಿಸುವುದನ್ನು ಕೈಬಿಟ್ಟು ಕೇವಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾತ್ರ ಒಟ್ಟು ಮಾಡಲಾಯಿದೆ. ಇದರಿಂದ ಮುಖ್ಯ ರಸ್ತೆ, ಮಂದಿರ ಪ್ರದೇಶ, ಮಾರ್ಕೆಟ್ ಮುಂತಾದೆಡೆಗಳಲ್ಲಿ ಸಣ್ಣ ಕಸಗಳು ಚೆಲ್ಲಾಪಿಲ್ಲಿಯಾಗಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಹಸಿಕಸ ಕೊರತೆ ನೀಗಿಸಲು ಪ್ರಯತ್ನ: ಕೋವಿಡ್​ನಿಂದಾಗಿ ಮಾರ್ಚ್​ನಲ್ಲಿ ಬಂದ್​ಆಗಿದ್ದ ಹಸಿ ಕಸ ಸಂಸ್ಕರಣೆ ಘಟಕ ಮರು ಆರಂಭಿಸಲು ಯೋಚಿಸಲಾಗುತ್ತಿದೆ. ಆದರೆ, ಇದಕ್ಕೆ ಪ್ರತಿನಿತ್ಯ ಎರಡು ಬ್ಯಾರಲ್(100 ರಿಂದ 180ಕೆಜಿ) ಹಸಿ ಕಸ ಅಗತ್ಯವಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕಸ ದೊರೆಯದಿರುವುದು ಸಮಸ್ಯೆಯಾಗಿದೆ ಇದಕ್ಕಾಗಿ ಇಲ್ಲಿನ ಮಹಾಬಲೇಶ್ವರ ಮಂದಿರ ಮತ್ತು ಬ್ರಾಹ್ಮಣ ಪರಿಷತ್ ಭೋಜನಾಲಯ, ಕಲ್ಯಾಣ ಮಂಟಪ ಮತ್ತು ಕ್ಷೇತ್ರ ಪುರೋಹಿತರ ಮನೆಗಳಿಂದ ಹಸಿಕಸ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ ಎಂದು ಪಂಚಾಯತಿ ಪಿಡಿಒ ತಿಳಿಸಿದ್ದಾರೆ.

    ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ: ಜಿಲ್ಲೆಯ ಮೊದಲ ಕಸ ಸಂಸ್ಕರಣೆ ಘಟಕ ಎಂಬ ಹೆಮ್ಮೆಗೆ ಪಾತ್ರವಾಗಿರುವ ಗೋಕರ್ಣ ಘಟಕ ಈತನಕ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಆದಷ್ಟು ಬೇಗ ಎಲ್ಲ ತೊಡಕುಗಳು ನಿವಾರಣೆಯಾಗಿ ಘಟಕ ಉದ್ಘಾಟನೆಯಾಗಲಿ ಎಂಬುದು ಸ್ಥಳೀಯರ ಆಶಯ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts