More

    ಗೊರನಾಳ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ

    ತಾಂಬಾ: ರೈತರ ಅಭಿವೃದ್ಧಿಯೇ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲ ಧ್ಯೇಯವಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ರೈತರ ಅನುಕೂಲಕ್ಕಾಗಿ ಸಾಕಷ್ಟು ಸಾಲ ಸೌಲಭ್ಯ ದೊರೆಯುವುದನ್ನು ಸದುಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಕೃಷಿ, ಮಾರುಕಟ್ಟೆ, ಜವಳಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಸಮೀಪದ ಗೊರನಾಳ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ವಿವಿದ್ಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ದೇಶದ ಪ್ರತಿಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದಾಗಿದೆ. ರೈತರು ಹಾಗೂ ವ್ಯಾಪಾರಸ್ಥರ ಹಿತ ಕಾಪಾಡುವುದೇ ಸಹಕಾರಿ ಸಂಘದ ಉದ್ದೇಶವಾಗಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಹಕಾರ ಅತ್ಯಗತ್ಯವಾಗಿದೆ. ಸಹಕಾರಿ ಸಂಘಗಳಲ್ಲಿ ಮಹಿಳೆಯರು ಸೀ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ವ್ಯವಹಾರ ಮಾಡಿ ಹೈನುಗಾರಿಕೆ, ವ್ಯಾಪಾರ, ಗೃಹ ಉದ್ಯೋಗ ಮುಂತಾದ ಕೌಶಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಅರ್ಥಿಕ ಸ್ವಾವಲಂಬನೆ ಹೊಂದಿದ್ದಾರೆ. ಎಲ್ಲರೂ ಸಹಕಾರ ಮನೋಭಾವ ಹೊಂದಿ ಜೀವನವನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು ಎಂದರು.

    ಸಹಕಾರಿ ಸಂಘದ ಅಧಕ್ಷ ವೆಂಕಟರಾಯ ಪಾಟೀಲ ಮಾತನಾಡಿ, 1974-75ರಲ್ಲಿ ಪ್ರಾರಂಭವಾದ ಈ ಸಂಘಕ್ಕೆ ಗಿರಿಮಲ್ಲಪ್ಪ ತೆನ್ನಿಹಳ್ಳಿ ಅವರು ಮೊಟ್ಟ ಮೊದಲ ಅಧ್ಯಕ್ಷರಾಗಿದ್ದರು. ಬಾಬುರಾವ ದೇಶಪಾಂಡೆ ಕಾರ್ಯದರ್ಶಿಯಾಗಿದ್ದರು. 75 ಸದಸ್ಯರಿಂದ ಪ್ರಾರಂಭವಾದ ಈ ಸಂಘ ಮೊದಲಿಗೆ ಕೇವಲ 19 ಸಾವಿರ ರೂ. ಸಾಲ ವಿತರಿಸಿತ್ತು. ಸದ್ಯ ಬೃಹದಾಕಾರವಾಗಿ ಬೆಳೆದು 1,100 ಸದಸ್ಯರಿದ್ದು, 823.62 ಲಕ್ಷ ರೂ. ಸಾಲ ವಿತರಿಸಲಾಗಿದೆ ಎಂದರು.

    1,022.33ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದೆ. 102.79 ಲಕ್ಷ ರೂ.ಷೇರು ಬಂಡವಾಳ ಹೊಂದಿದೆ. 166.60 ಲಕ್ಷ ರೂ. ಠೇವು ಹೊಂದಿದೆ. ಕಳೆದ ಹಲವಾರು ವರ್ಷಗಳಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಮನ್ನಾ ಸಹಿತ ಆಗಿದ್ದು ಉತ್ತಮವಾಗಿದೆ. ಸಂಘ ಪ್ರಾರಂಭವಾಗಿ 50ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನೂತನ ಕಟ್ಟಡದ ಉದ್ಘಾಟನೆಯಾಗುತ್ತಿರುವುದು ಗೊರನಾಳ, ತೆನ್ನಿಹಳ್ಳಿ, ಬನ್ನೆಟ್ಟಿ, ಮಸಳಿ ಬಿಕೆ, ಮಸಳಿ ಕೆಡಿ ಗ್ರಾಮದ ರೈತರಿಗೆ ಸಂತಸ ತಂದಿದೆ ಎಂದರು.

    ಗೊರನಾಳ ಹಿರೇಮಠದ ವಿರೂಪಾಕ್ಷ ದೇವರು, ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿ.ಡಿ.ಸಿ.ಸಿ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿದರು.

    ಅರವಿಂದ ಪೂಜಾರಿ, ಕಲ್ಲನಗೌಡ ಬಿರಾದಾರ, ಮಲ್ಲಿಕಾರ್ಜುನ ಕಲ್ಲೂರ, ಯಲ್ಲಪ್ಪ ಪೂಜಾರಿ, ಅಪ್ಪಣ್ಣ ಕಲ್ಲೂರ, ಸಿದ್ದಪ್ಪ ನಾಟೀಕಾರ, ಸುರೇಶ ಹಾವಿನಾಳ, ಪ್ರೇಮನಗೌಡ ಬಿರಾದಾರ, ಎನ್.ಬಿ.ದೇಶಪಾಂಡೆ, ಭೀರಪ್ಪ ವಗ್ಗಿ, ಬಸವರಾಜ ಬಬಲಾದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts