More

    ಗೊಜನೂರ ಶಾಲೆಯಲ್ಲಿ 22 ಮಂದಿ ಕ್ವಾರಂಟೈನ್

    ಲಕ್ಷೆ್ಮೕಶ್ವರ: ಪಟ್ಟಣಕ್ಕೆ ಮಂಗಳವಾರ ರಾತ್ರಿ ರಾಜಸ್ಥಾನದ ಅಜ್ಮೀರದಿಂದ 17 ಮತ್ತು ಮಹಾರಾಷ್ಟ್ರದಿಂದ 5 ಜನರು ಬಂದಿದ್ದಾರೆ. ಇವರೆಲ್ಲರನ್ನು ಬುಧವಾರ ಗೊಜನೂರ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಮೂಲತಃ ಲಕ್ಷೆ್ಮೕಶ್ವರದವರಾದ 17 ಜನರು ಪರಸ್ಪರ ಸಂಬಂಧಿಕರಾಗಿದ್ದು, ಗೌಂಡಿ ಕೆಲಸ ಮಾಡುವವರಾಗಿದ್ದಾರೆ. ಇವರಲ್ಲಿ ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಐವರು ಪುರುಷ, ಏಳು ಜನ ಮಹಿಳೆಯರು ಸೇರಿದ್ದಾರೆ. ಇವರೆಲ್ಲ ಲಾಕ್​ಡೌನ್​ಗೂ ಮುಂಚೆಯೇ ಧಾರ್ವಿುಕ ಪ್ರವಾಸಕ್ಕಾಗಿ ಅಜ್ಮೇರ್​ಗೆ ತೆರಳಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಮರಳಿ ಬರಲಾಗದೇ ಅಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾಗಿದ್ದರಿಂದ ಖಾಸಗಿ ವಾಹನ ಬಾಡಿಗೆಗೆ ತೆಗೆದುಕೊಂಡು ಮಂಗಳವಾರ ರಾತ್ರಿ ಲಕ್ಷೆ್ಮೕಶ್ವರಕ್ಕೆ ಬರುತ್ತಿದ್ದಾಗ ರಾಮಗೇರಿ ಚೆಕ್​ಪೋಸ್ಟ್ ಬಳಿ ವಿಚಾರಿಸಿದ ಸಿಬ್ಬಂದಿ ಅವರ ಮಾಹಿತಿ ಪಡೆದು ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ.

    ಒಂದೇ ಬೈಕ್​ನಲ್ಲಿ ಬಂದ ಮೂವರು: ಇನ್ನು ಮಹಾರಾಷ್ಟ್ರದ ಪುಣೆ ಬಳಿಯ ಹಳ್ಳಿಯಲ್ಲಿ ಎಲ್​ಇಡಿ ಬಲ್ಬ್ ಕಂಪನಿಯಲ್ಲಿ ಕೆಲಸಕ್ಕೆಂದು ಒಂದೂವರೆ ವರ್ಷದ ಹಿಂದೆ ಹೋಗಿದ್ದ ಮೂಲತಃ ಲಕ್ಷೆ್ಮೕಶ್ವರದ ಮೂವರು ಬುಧವಾರ ಪಟ್ಟಣಕ್ಕೆ ಆಗಮಿಸಿದ್ದಾರೆ. ವಿಶೇಷವೆಂದರೆ ಈ ಮೂವರೂ ಅಲ್ಲಿಂದ ಇಲ್ಲಿಯವರೆಗೆ ಒಂದೇ ಬೈಕ್​ನಲ್ಲಿ ಬಂದಿದ್ದಾರೆ. ಇವರನ್ನೂ ಗೊಜನೂರ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಟ್ರಕ್​ನಲ್ಲಿ ಬಂದ ಇಬ್ಬರು: ಮೂಲತಃ ಲಕ್ಷೆ್ಮೕಶ್ವರ ಬಳಿಯ ಮಂಜಲಾಪುರದ ಇಬ್ಬರು ಮಹಾರಾಷ್ಟ್ರದಿಂದ ಟ್ರಕ್ ಮೂಲಕ ಹುಬ್ಬಳ್ಳಿಗೆ ಬಂದು ಅಲ್ಲಿಂದ ಬಸ್​ನಲ್ಲಿ ಲಕ್ಷೆ್ಮೕಶ್ವರಕ್ಕೆ ಬಂದಿದ್ದಾರೆ. ಅವರನ್ನೂ ಗೊಜನೂರ ವಸತಿ ಶಾಲೆಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

    22 ಜನರ ಗಂಟಲ ದ್ರವ ಪರೀಕ್ಷೆಗೆ: ಈ ಎಲ್ಲ 22 ಜನರ ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಊಟ, ನೀರು, ಚಿಕಿತ್ಸೆ ಕೊಡಲಾಗಿದೆ. ಮಾಸ್ಕ್ ಧರಿಸುವಂತೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ತಿಳಿವಳಿಕೆ ನೀಡಲಾಗಿದೆ.

    ಈಗಾಗಲೇ ಲಕ್ಷೆ್ಮೕಶ್ವರ ಮುರಾರ್ಜಿ ವಸತಿಯಲ್ಲಿರುವ 44 ಜನರ ಪೈಕಿ 43 ಜನರ ಗಂಟಲ ದ್ರವ ಮಾದರಿ ಪರೀಕ್ಷೆ ಕೈಗೊಳ್ಳಲಾಗಿದೆ. ಇದರಲ್ಲಿ ಒಬ್ಬ ಮಹಿಳೆಗೆ ಮಾತ್ರ ಪಾಸಿಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಓರ್ವನ ವರದಿ ಬರಬೇಕಿದೆ ಎಂದು ಲಕ್ಷೆ್ಮೕಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಗಿರೀಶ ಮರಡ್ಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸ್ಥಳೀಯರಲ್ಲಿ ತಳಮಳ: ಲಾಕ್​ಡೌನ್ ಸಡಿಲಿಕೆಯಿಂದ ವ್ಯಾಪಾರ- ವಹಿವಾಟು ಮುಕ್ತವಾಗಿ ನಡೆಯುತ್ತಿದೆ. ಆದರೆ, ಬೇರೆಡೆಯಿಂದ ಬರುವವರಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಸಾರಿಗೆ ಸಂಚಾರ ಮುಕ್ತಗೊಳಿಸಿದ್ದರಿಂದ ಅಂತರ್ ರಾಜ್ಯ, ಜಿಲ್ಲೆಗಳಿಂದ ಅದರಲ್ಲೂ ಮುಖ್ಯವಾಗಿ ರೆಡ್​ಜೋನ್ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದು ಸ್ಥಳೀಯರಲ್ಲಿ ತಳಮಳವನ್ನುಂಟು ಮಾಡಿದೆ. ಮಂಗಳವಾರ ಲಕ್ಷೆ್ಮೕಶ್ವರ ಮುರಾರ್ಜಿ ಶಾಲೆಯ ಕ್ವಾರಂಟೈನ್​ನಲ್ಲಿದ್ದ ಮಹಾರಾಷ್ಟ್ರದಿಂದ ಬಂದ 44 ಜನರಲ್ಲಿ ಮಹಿಳೆಯೊಬ್ಬರಲ್ಲಿ ಸೋಂಕು ದೃಡಪಟ್ಟಿರುವುದು ಸ್ಥಳೀಯರನ್ನು ಆತಂಕಕ್ಕೆ ದೂಡಿತ್ತು. ಇದರ ಬೆನ್ನಲ್ಲೇ ಬುಧವಾರ ಅಜ್ಮೇರ್​ದಿಂದ 17 ಮತ್ತು ಮಹಾರಾಷ್ಟ್ರದಿಂದ 5 ಜನರು ಬಂದು ಗೊಜನೂರ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಇದು ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಮತ್ತೆ ಯಾರ ವರದಿಯೂ ಪಾಸಿಟಿವ್ ಬಾರದಿರಲಿ ಎಂದು ಸ್ಥಳೀಯರು ಹಾರೈಸುತ್ತಿದ್ದಾರೆ.

    ಕೇರಳದಿಂದ ಬಂದ ನಾಲ್ಕು ಬಸ್:

    ಗದಗ: ಕೇರಳದಿಂದ ನಾಲ್ಕು ಬಸ್​ಗಳಲ್ಲಿ 145 ಹಾಗೂ ಮುಂಬೈನಿಂದ 19 ಜನರು ಬುಧವಾರ ನಗರಕ್ಕೆ ಆಗಮಿಸಿದ್ದಾರೆ. ಕೇರಳದಿಂದ ಬಂದ ಎರಡು ಬಸ್​ನಲ್ಲಿನ 75 ಜನರನ್ನು ಮುಂಡರಗಿ ಹಾಗೂ ಇನ್ನೆರಡು ಬಸ್​ನಲ್ಲಿನ 70 ಜನರನ್ನು ಲಕ್ಷೆ್ಮೕಶ್ವರದಲ್ಲಿ ಹಾಸ್ಟೆಲ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಈ ಎಲ್ಲರನ್ನೂ ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದೆ. ಮುಂಬೈನಿಂದ ಆಗಮಿಸಿದ 19 ಜನರನ್ನು ಗದಗ ನಗರದಲ್ಲಿ ಹಾಸ್ಟೆಲ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts