More

    ಗೊಜನೂರ ಗ್ರಾಮದ ಯೋಧ ಆತ್ಮಹತ್ಯೆ

    ಲಕ್ಷ್ಮೇಶ್ವರ: ಛತ್ತೀಸ್​ಗಢ ರಾಜ್ಯದ ಕರ್ಕಪಲ್​ನ ಬಿಎಸ್​ಎಫ್ ಕ್ಯಾಂಪ್​ನಲ್ಲಿ ತಾಲೂಕಿನ ಗೊಜನೂರ ಗ್ರಾಮದ ಯೋಧ ಲಕ್ಷ್ಮಣ ನಿಂಗಪ್ಪ ಗೌರಣ್ಣವರ (31) ಗುಂಡಿಕ್ಕಿಕೊಂಡು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಅನಾರೋಗ್ಯದ ಕಾರಣದಿಂದ ಒಂದು ತಿಂಗಳು ಗ್ರಾಮದಲ್ಲಿದ್ದ ಲಕ್ಷ್ಮಣ ಅವರು ಜು. 8ರಂದು ಮರಳಿ ಸೇವೆಗೆ ಹಾಜರಾಗಿದ್ದರು.
    ಲಕ್ಷ್ಮಣ ಗೌರಣ್ಣವರ ಕಳೆದ 12 ವರ್ಷಗಳಿಂದ ಬಿಎಸ್​ಎಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಇಬ್ಬರು ಸಹೋದರರಿದ್ದಾರೆ. ರಜಾ ಕಾಲದಲ್ಲಿ ಕುಟುಂಬ ಮತ್ತು ಗೆಳೆಯರೊಂದಿಗೆ ಸಂತೋಷದಿಂದ ಕಾಲ ಕಳೆದಿದ್ದರು. ಅಲ್ಲದೆ, ಇಬ್ಬರು ತಮ್ಮಂದಿರ ಮದುವೆ ಬಗ್ಗೆ ಕುಟುಂಬದವರೊಂದಿಗೆ ರ್ಚಚಿಸಿದ್ದರು. ದೊಡ್ಡ ತಮ್ಮನಿಗೆ ವಧುವನ್ನೂ ನಿಶ್ಚಯಿಸಲಾಗಿತ್ತು. ಸಣ್ಣ ತಮ್ಮನ ಬಗ್ಗೆ ಚರ್ಚೆ ನಡೆದು ಮುಂದಿನ ಕಾರ್ತಿಕ ಮಾಸದಲ್ಲಿ ಮದುವೆ ಮಾಡುವ ಬಗ್ಗೆ ನಿರ್ಧರಿಸಿದ್ದರು.
    ಲಕ್ಷ್ಮಣ ಅವರಿಗೆ ಮದುವೆಯಾಗಿ 6 ವರ್ಷವಾಗಿದ್ದು, 5 ಮತ್ತು 3 ವರ್ಷದ ಪುತ್ರರು, 7 ತಿಂಗಳ ಮಗಳಿದ್ದಾಳೆ. ಕುಟುಂಬಕ್ಕೆ ಸಣ್ಣ ಮನೆಯೊಂದನ್ನು ಬಿಟ್ಟರೆ ಸ್ವಂತ ಜಮೀನು ಇಲ್ಲ. ಒಬ್ಬ ಸಹೋದರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಗ್ರಾಮದಲ್ಲಿಯೇ ಕೂಲಿ ಕೆಲಸ ಮಾಡುತ್ತಾನೆ.

    ಶೋಕದಲ್ಲಿ ಮುಳುಗಿದ ಕುಟುಂಬ: ಮಂಗಳವಾರ ಬೆಳಗ್ಗೆ ಯೋಧ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರಿಗೆ ದಿಗಿಲು ಬಡಿದಂತಾಗಿದೆ. ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ. ಯೋಧನ ಮನೆ ಮುಂದೆ ಬುಧವಾರ ಬೆಳಗ್ಗೆಯಿಂದಲೇ ಅಪಾರ ಜನ ಸೇರಿದ್ದರು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಯೋಧನ ಭಾವಚಿತ್ರ ಹಾಕಿ ಗೌರವ ಸಲ್ಲಿಸಿದರು. ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಗಣ್ಯರು, ಹಿರಿಯರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮಸ್ಥರ ತೀರ್ವನದಂತೆ ಅಧಿಕಾರಿಗಳು ಗ್ರಾಮದ ದರ್ಗಾ ಹಿಂದಿನ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಸಿದ್ಧತೆ ನಡೆಸಿದರು.



    ಬಡತನದ ನಡುವೆಯೂ ಮೂವರು ಮಕ್ಕಳನ್ನು ದೊಡ್ಡವರನ್ನಾಗಿಸಿದ್ದೇವೆ. ಹಿರಿಯ ಮಗ ಲಕ್ಷ್ಮಣ ದೇಶ ಕಾಯುವ ಕೆಲಸಕ್ಕೆ ಸೇರಿದ್ದು ನಮಗೆ ಹೆಮ್ಮೆಯಾಗಿತ್ತು. ದೇಶ ಸೇವೆ ಜತೆಗೆ ಕುಟುಂಬಕ್ಕೂ ಆಸರೆಯಾಗಿದ್ದ. ಕುಟುಂಬಕ್ಕೆ ಕಣ್ಣಾಗಿದ್ದ ಆತನದು ದೊಡ್ಡ ಮನಸು. ಸತತ ಪೋನ್ ಸಂಪರ್ಕದಲ್ಲಿರುತ್ತಿದ್ದ ಮಗನಿಗೆ ಏನಾಗಿದೆ ಎಂಬುದನ್ನು ಯಾರೂ ಹೇಳುತ್ತಿಲ್ಲ. ಮನೆಯ ಕಳಸ ಕಳಚಿದೆ. ನಾವೀಗ ಅನಾಥರಾಗಿದ್ದೇವೆ.
    ನಿಂಗಪ್ಪ, ಚಿನ್ನವ್ವ, ಯೋಧನ ಪಾಲಕರು

    ಮಕ್ಕಳ ಮೇಲೆ ಭಾಳ ಪ್ರೀತಿ ಇತ್ತು. ದಿನವೂ ಫೋನ್ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಕರೆ ಮಾಡಿ ಮಕ್ಕಳು, ನನ್ನೊಂದಿಗೆ ಹಾಗೂ ಅತ್ತೆ-ಮಾವಂದಿರೊಂದಿಗೆ ಮಾತನಾಡಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ಕೇಳಿ ಬಂದ ಸುದ್ದಿ ನಂಬಲಾಗುತ್ತಿಲ್ಲ. ಏನೂ ಅರಿಯದ ಮೂವರು ಕಂದಮ್ಮಗಳನ್ನು ಕಟಗೊಂಡು ನಾ ಹೆಂಗ ಬದುಕಲಿ? ನಾನು ಏನು ಮಾಡ್ಲಿ?
    ಶಿಲ್ಪಾ ಗೌರಣ್ಣವರ, ಯೋಧ ಲಕ್ಷ್ಮಣನ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts