More

    ಗೃಹ ಸಾಲ 15 ಲಕ್ಷ ರೂ.ಗೆ ಏರಿಕೆ

    ಚಿತ್ರದುರ್ಗ: ಸದಸ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗೃಹ ಸಾಲ 5ರಿಂದ 15 ಲಕ್ಷಕ್ಕೆ, ಬಂಗಾರದ ಮೇಲಿನ ಸಾಲ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ತಿಳಿಸಿದರು.


    ಕಾಟಮ್ಮ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಸೊಸೈಟಿಯಿಂದ ಭಾನುವಾರ ಹಮ್ಮಿಕೊಂಡಿದ್ದ 106ನೇ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, 112 ವರ್ಷದ ಇತಿಹಾಸ ಹೊಂದಿರುವ ಸೊಸೈಟಿ ಈ ಹಿಂದೆ ಸಾಲದಲ್ಲಿತ್ತು. ಆದರೀಗ ಲಾಭದ ಹಾದಿಯಲ್ಲಿ ಮುನ್ನಡೆಸಲಾಗುತ್ತಿದೆ ಎಂದರು.


    ಸದಸ್ಯರ ಉಪಯೋಗಕ್ಕಾಗಿ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಹಣ ದ್ವಿಗುಣಗೊಳಿಸುವ ಕಾರ್ಯ 3 ತಿಂಗಳ ಹಿಂದೆ ಜಾರಿಯಾಗಿದ್ದು, ಅನೇಕರು ಆಸಕ್ತಿ ತೋರಿದ್ದಾರೆ. ಕೈ ಸಾಲವನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.


    ಸೊಸೈಟಿ ನಗರ ವ್ಯಾಪ್ತಿಗೆ ಸಿಮೀತವಾಗಿತ್ತು. ಆದರೀಗ ವ್ಯಾಪ್ತಿ ಮೀರಿ ಬೆಳೆದಿದ್ದು, 2,581 ಸದಸ್ಯರಿದ್ದಾರೆ. ವಿಮೆ ಜಾರಿಗಾಗಿ ಕಂಪನಿಯೊಂದರ ಜತೆ ಚರ್ಚಿಸಲಾಗಿದೆ. ಸದಸ್ಯರು 60 ರೂ. ಪಾವತಿಸಬೇಕಿದ್ದು, ಆಕಸ್ಮಿಕ ಅಥವಾ ಅಪಘಾತದಿಂದ ಮರಣ ಹೊಂದಿದರೆ 1 ಲಕ್ಷ ರೂ., ಗಾಯಗೊಂಡಲ್ಲಿ 50 ಸಾವಿರ ರೂ. ವಿಮಾ ಪರಿಹಾರ ಸಿಗಲಿದೆ ಎಂದು ತಿಳಿಸಿದರು.


    2022-23ನೇ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಡ್ ವಿತರಿಸಲು ನಿರ್ಧರಿಸಲಾಗಿದೆ. ಇದೇ ಸಾಲಿನಲ್ಲಿ 23 ಸದಸ್ಯರು ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಿಧಿಯಾಗಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಸೊಸೈಟಿಗೆ ಠೇವಣಿ ಹರಿದು ಬರುತ್ತಿದ್ದು, ಇದರ ಸದುಪಯೋಗ ಆಗಬೇಕಿದೆ. ಆದ್ದರಿಂದ ಅಗತ್ಯವಿದ್ದವರು ಸಾಲ ಪಡೆದು, ಆರ್ಥಿಕವಾಗಿ ಸಬಲರಾಗಬೇಕು ಎಂದು ಮನವಿ ಮಾಡಿದರು.


    ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ 75 ವರ್ಷ ದಾಟಿದ ಸೊಸೈಟಿಯ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.


    ಉಪಾಧ್ಯಕ್ಷ ಸಿ.ಎಚ್.ಸೂರ್ಯಪ್ರಕಾಶ್, ನಿರ್ದೇಶಕರಾದ ಡಾ.ರೆಹಮತ್ ಉಲ್ಲಾ, ಬಿ.ವಿ.ಶ್ರೀನಿವಾಸ್‌ಮೂರ್ತಿ, ಬಿ.ಎಂ.ನಾಗರಾಜ್‌ರಾವ್, ಕೆ.ಚಿಕ್ಕಣ್ಣ, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಚಂಪಕಾ, ಎನ್.ಎಂ.ಪುಷ್ಪವಲ್ಲಿ, ನಾಗರಾಜ್ ಬೇದ್ರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts