More

    ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಸರ್ವರ್ ಬಿಜಿ ಕಾಟ

    ಮುದ್ದೇಬಿಹಾಳ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭಗೊಂಡಿದ್ದು ಗ್ರಾಪಂನಲ್ಲಿ ನಿರೀಕ್ಷಿತ ಯಶಸ್ಸು ದೊರೆತಿಲ್ಲ.

    ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಯರಝರಿ, ಅಡವಿಸೋಮನಾಳ ಗ್ರಾಪಂನಲ್ಲಿ ಗೃಹಲಕ್ಷ್ಮೀ ಅರ್ಜಿ ಸ್ವೀಕಾರಗೊಳ್ಳದಿರುವ ಸಂಗತಿ ಬೆಳಕಿಗೆ ಬಂದಿದೆ. ಪಟ್ಟಣದ ಪುರಸಭೆಯಿಂದ ಆರಂಭಿಸಿರುವ ಮೂರು ಕೇಂದ್ರಗಳಲ್ಲಿ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ.

    ನಗರ ಪ್ರದೇಶವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಸೇವಾ ಕೇಂದ್ರಗಳಲ್ಲಿ ಸರ್ವರ್ ಕಾಟ ಕಂಡು ಬಂದರೆ ಇನ್ನೂ ಕೆಲವು ಕೇಂದ್ರಗಳಲ್ಲಿ ಸೂಕ್ತ ಮಾಹಿತಿ ಕೊರತೆ, ಆಧಾರ್‌ಕಾರ್ಡ್‌ಗೆ ಮೊಬೈಲ್ ನಂಬರ್ ಜೋಡಣೆ ಇಲ್ಲದಿರುವ ಸಮಸ್ಯೆಗಳಿಂದ ಅರ್ಜಿ ಸ್ವೀಕೃತಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನುಳಿದಂತೆ ಗ್ರಾಪಂನಲ್ಲಿ ತೆರೆದಿರುವ ಕೇಂದ್ರಗಳಲ್ಲಿ ಇ-ಕೆವೈಸಿ ಆಗಿಲ್ಲದಿರುವ ಮಾಹಿತಿ ಬಂದಿದೆ. ವಿವಿಧ ಸೇವಾ ಕೇಂದ್ರಗಳಗೆ ಭೇಟಿ ನೀಡಿದ ತಹಸೀಲ್ದಾರ್ ರೇಖಾ ಟಿ., ಸಿಡಿಪಿಒ ಮಂಜುನಾಥ ಮಾತನಾಡಿ, ಕೆಲವು ಕಡೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಅದನ್ನು ಸರಿಪಡಿಸಲಾಗುವುದು. ಕೆಲವು ಕಡೆಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಮೊದಲ ದಿನ ಸ್ವಲ್ಪ ಗೊಂದಲ ಆಗುವುದು ಸಹಜ. ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಎಲ್ಲೆಲ್ಲಿ ಸಮಸ್ಯೆ ಕಂಡು ಬಂದಿದೆಯೋ ಅದನ್ನು ಸರಿಪಡಿಸುವುದಾಗಿ ತಿಳಿಸಿದರು.

    ಮೊದಲ ದಿನ 21 ಗ್ರಾಪಂಗಳಿಗೆ ಕೊಟ್ಟಿರುವ 1,260 ಟಾರ್ಗೆಟ್‌ನಲ್ಲಿ ಕೇವಲ 74 ಅರ್ಜಿಗಳು ಸಲ್ಲಿಕೆಯಾಗಿದ್ದು ಅಡವಿ ಸೋಮನಾಳ, ಯರಝರಿ ಗ್ರಾಪಂನಲ್ಲಿ ಅರ್ಜಿಗಳೇ ಸಲ್ಲಿಕೆಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

    ಕಂಪ್ಯೂಟರ್ ಆಪರೇಟರ್‌ಗಳಿಗೆ ಡಬಲ್ ಕೆಲಸ

    ಗ್ರಾಪಂಗಳಲ್ಲಿ ಸ್ಥಾಪಿಸಲಾದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಆಪರೇಟರ್‌ಗಳಿಗೆ ಹೆಚ್ಚಿನ ಕಾರ್ಯಭಾರದ ಒತ್ತಡ ಎದುರಾಗಿದೆ. ಪಂಚಾಯಿತಿಯ ಇತರೆ ಕೆಲಸಗಳ ಜತೆಗೆ ಗೃಹಲಕ್ಷ್ಮೀ ಅರ್ಜಿ ಹಾಕಬೇಕು ಎಂದು ಸರ್ಕಾರ ಸೂಚಿಸಿದ್ದರಿಂದ ಸರ್ವರ್ ಇಲ್ಲದ ಕಾರಣ ಅತ್ತ ಪಂಚಾಯಿತಿಯ ಬೇರೆ ಕೆಲಸಗಳನ್ನು ಮಾಡಲಾಗದೇ ಇತ್ತ ಅರ್ಜಿಯೂ ಸಲ್ಲಿಕೆಯಾಗದೇ ನೌಕರರು ಹೈರಾಣಾಗುವಂತಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕಲು ಹೆಚ್ಚುವರಿ ಆಪರೇಟರ್‌ಗಳ ನೇಮಕ ಮಾಡಬೇಕು ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts