More

    ಕೂಸಿನ ಮನೆಗೆ ಬರಲಿದ್ದಾರೆ 1203 ಚಿಣ್ಣರು -ಜಿಲ್ಲಾದ್ಯಂತ 64 ಕೇಂದ್ರಗಳ ಗುರುತು – ಕಾರ್ಯಾರಂಭಕ್ಕೆ ದಾವಣಗೆರೆ ಜಿಪಂ ಸಜ್ಜು 

    ಡಿ.ಎಂ.ಮಹೇಶ್, ದಾವಣಗೆರೆ : ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದ ಕುಟುಂಬದ ಮೂರು ವರ್ಷದೊಳಗಿನ ಮಕ್ಕಳಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೂಸಿನ ಮನೆ ಶೀರ್ಷಿಕೆಯಡಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
    ದಾವಣಗೆರೆ ಜಿಲ್ಲೆಯಲ್ಲೂ ಈ ಕೇಂದ್ರಗಳ ಕಾರ್ಯಾರಂಭಕ್ಕೆ ಜಿಲ್ಲಾ ಪಂಚಾಯ್ತಿ ಸನ್ನದ್ಧಗೊಂಡಿದೆ. 150 ಕೂಸಿನ ಮನೆ ಆರಂಭಿಸುವ ಉದ್ದೇಶವಿದ್ದು ಆರಂಭಿಕ ಹಂತದಲ್ಲಿ ಎಲ್ಲ ಆರು ತಾಲೂಕಿಗಳ ಆಯ್ದ ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 64 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಒಟ್ಟು 1203 ಚಿಣ್ಣರು ಗೃಹಪ್ರವೇಶ ಮಾಡಲಿದ್ದಾರೆ.
    ಸುಸ್ಥಿತಿ ಮತ್ತು ಮಕ್ಕಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಹಾಗೂ ಮಹಿಳಾ ಕೂಲಿಕಾರ್ಮಿಕರು ಹೆಚ್ಚಿರುವ ಪಂಚಾಯ್ತಿಗಳನ್ನು ಕೇಂದ್ರೀಕರಿಸಿ ಈ ಕೇಂದ್ರಗಳನ್ನು ಗುರುತಿಸಲಾಗಿದೆ. ಚಿತ್ತಾಕರ್ಷಕ ಪೇಂಟಿಂಗ್‌ನೊಂದಿಗೆ ಗಮನ ಸೆಳೆಯುತ್ತಿರುವ ಕೇಂದ್ರಗಳಲ್ಲಿ ಮಕ್ಕಳ ಆಟಿಕೆ, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.
    ಮಕ್ಕಳ ಹಾಜರಾತಿ, ಆಹಾರ ವಿತರಣೆ, ವೈದ್ಯಾಧಿಕಾರಿಗಳ ಆರೋಗ್ಯ ತಪಾಸಣೆ, ಖರ್ಚು-ವೆಚ್ಚ ಮೊದಲಾದ ದಾಖಲಾತಿ ವಹಿಗಳನ್ನು ಆಯಾ ಕೇಂದ್ರದಲ್ಲಿ ನಿರ್ವಹಿಸಬೇಕಿದೆ. ಆಟಿಕೆ ಸಾಮಗ್ರಿಗಳನ್ನೂ ಹೊಂದಬೇಕಿದೆ. ಪ್ರತಿ ಕೇಂದ್ರದ ನಿರ್ವಹಣೆಗೆ ವರ್ಷಕ್ಕೆ 65ಸಾವಿರ ರೂ.ಗಳನ್ನು ಸರ್ಕಾರ ಒದಗಿಸುತ್ತಿದೆ. ಉಳಿದಂತೆ ಜಿಪಂ, ತಾಪಂ ಹಾಗೂ ಗ್ರಾಪಂಗಳ ಹೊಂದಾಣಿಕೆ ಹಣ ಬಳಸಲಾಗುತ್ತಿದೆ.
    ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು, ಮಹಿಳಾ ಕಾರ್ಮಿಕರು ನೆಮ್ಮದಿಯಿಂದ ಕೆಲಸ ಮಾಡಲು, ಅವರ ಮಕ್ಕಳಿಗೆ ಸುರಕ್ಷತೆ ಹಾಗೂ ಪೂರಕ ಪೌಷ್ಟಿಕ ಆಹಾರ ಒದಗಿಸುವುದು ಈ ಕೂಸಿನ ಮನೆಯ ಆಶಯಗಳಾಗಿವೆ.
    ಈಗಾಗಲೆ 1200 ಮಂದಿ ಪೈಕಿ 1073 ಕೇರ್ ಟೇಕರ್‌ಗಳನ್ನು ಗುರುತಿಸಲಾಗಿದೆ. 10 ಮಂದಿ ಮಾಸ್ಟರ್ ತರಬೇತುದಾರರು ಮೈಸೂರಿನಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಸ್ಥಳೀಯವಾಗಿ 320 ಸಿಬ್ಬಂದಿ ಗುರುತಿಸಲಾಗಿದ್ದು, 199 ಮಂದಿಗೆ ತರಬೇತಿ ನೀಡಲಾಗಿದೆ.
    ಈ ಮನೆಗಳಲ್ಲಿ ದಿನದ ಆರೂವರೆ ತಾಸು 6 ತಿಂಗಳಿಂದ ಹಿಡಿದು 3 ವರ್ಷದೊಳಗಿನ ಮಕ್ಕಳನ್ನು ಇರಿಸುವ ವ್ಯವಸ್ಥೆ ಇದೆ. ಪ್ರತಿ ಗ್ರಾಪಂಗೆ ತಲಾ 10ರಂತೆ ಕನಿಷ್ಠ ವಿದ್ಯಾರ್ಹತೆಯುಳ್ಳ ಹಾಗೂ ಕ್ರಿಯಾಶೀಲ ಕೂಲಿಕಾರ್ಮಿಕ ಮಹಿಳೆಯರನ್ನು ಕೇರ್‌ಟೇಕರ್‌ಗಳಾಗಿ ನಿಯೋಜಿಸಲಾಗಿದೆ. ಅವರು, ಕೂಲಿಕಾರ್ಮಿಕರ ಮಕ್ಕಳ ಆರೈಕೆ, ಪಾಲನೆ ಮಾಡಲಿದ್ದಾರೆ. ನರೇಗಾ ಅಡಿಯಲ್ಲೇ ಅವರಿಗೂ 100 ದಿನದ ನಿಗದಿತ ದಿನಗೂಲಿ ಪಾವತಿಸುವ ನಿರ್ದೇಶನವಿದೆ.
    ಮಕ್ಕಳಿಗೆ ಸಮತೋಲಿತ ಮತ್ತು ಪೌಷ್ಟಿಕ ಆಹಾರ ನೀಡುವುದು. ಪ್ರತಿ ಮಗುವಿಗೂ ದಿನಕ್ಕೆ 12 ರೂ.ನಂತೆ, ಮೆನು ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಯಾರು ಮಾಡಿದೆ. ವೇಳಾಪಟ್ಟಿಯಂತೆ ಲಸಿಕಾಕರಣ, ತಪಾಸಣೆ ಮಾಡಲೂ ಕೂಡ ಅವಕಾಶವಿದೆ. ಜಿಲ್ಲೆಯಲ್ಲಿ ನರೇಗಾದಡಿ 2,25,731 ಸಕ್ರಿಯ ಮಹಿಳಾ ಕೂಲಿಕಾರ್ಮಿಕರಿದ್ದಾರೆ. ಕೂಸಿನ ಮನೆ ಬಂದರೆ ಸಾವಿರಾರು ಹೆಂಗಳೆಯರಿಗೆ ನಿರುಮ್ಮಳ ಭಾವ.
    ಶಿಶುಪಾಲನಾ ಕೇಂದ್ರಗಳ ಕಾರ್ಯ ನಿರ್ವಹಣೆ ಸಂಬಂಧ ಜಿಪಂ ಸಿಇಒ ನೇತೃತ್ವದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ, ತಾಪಂ ಇಒ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟ ಹಾಗೂ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಪಂ ಶಿಶುಪಾಲನಾ ಕೇಂದ್ರದ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ. ಶೀಘ್ರವೇ ಕೂಸಿನ ಮನೆಗಳು ಮಕ್ಕಳ ಕಲರವಕ್ಕೆ ಸಾಕ್ಷಿಯಾಗಲಿವೆ.

    ನರೇಗಾ ಮಹಿಳಾ ಕೂಲಿಕಾರ್ಮಿಕರು ತಮ್ಮ ಮಕ್ಕಳನ್ನು ಒಂದೆಡೆ ಇರಿಸಿ, ನೆಮ್ಮದಿಯಿಂದ ಕೆಲಸ ಮಾಡಲು ಕೂಸಿನ ಮನೆ ಅನುಕೂಲವಾಗಲಿದೆ. ಮಕ್ಕಳಿಗೆ ನಿಯಮಿತವಾಗಿ ಸಮತೋಲಿತ ಆಹಾರದ ಜತೆಗೆ ಲಸಿಕೆ ನೀಡಲು, ಅವರ ಆರೋಗ್ಯ ಸುಧಾರಣೆಯಲ್ಲೂ ಸಹಕಾರಿಯಾಗಲಿದೆ.
    ಸುರೇಶ್ ಇಟ್ನಾಳ್
    ದಾವಣಗೆರೆ ಜಿಪಂ ಸಿಇಒ.

    ——
    ತಾಲೂಕು ಕೇಂದ್ರ ಮಕ್ಕಳು
    ——————-
    ದಾವಣಗೆರೆ-11 215
    ಹರಿಹರ- 10 169
    ಜಗಳೂರು- 10 147
    ಹೊನ್ನಾಳಿ- 10 328
    ನ್ಯಾಮತಿ- 08 115
    ಚನ್ನಗಿರಿ- 15 229
    —————–
    ಒಟ್ಟು 64 1203
    —————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts