More

    ಗುರುವಿನ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

    ರೋಣ: ಅವರು ಪಟ್ಟಣದ ಅಟಲ್​ಬಿಹಾರಿ ವಾಜಪೇಯಿ ವಸತಿ ಶಾಲೆಯ ಕನ್ನಡ ಶಿಕ್ಷಕ. ವೃತ್ತಿ ನಿಷ್ಠೆಯಿಂದಲೇ ಎಲ್ಲರ ಮನಸು ಗೆದ್ದ ಮಕ್ಕಳ ಪಾಲಿನ ನಾಯಕ. 7 ವರ್ಷಗಳ ಕಾಲ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ ಅವರಿಗೆ ಈಗ ವರ್ಗಾವಣೆಯಾಗಿದ್ದರಿಂದ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು. ಗುರುವಿನ ಕಾಲು ಹಿಡಿದು ಎಲ್ಲೂ ಹೋಗ್ಬೇಡಿ… ಎಂದು ಗೋಗರೆದರು. ಮಕ್ಕಳು-ಗುರುವಿನ ಈ ಬಾಂಧವ್ಯ ಶಿಕ್ಷಕ ವೃಂದ ಹಾಗೂ ಸ್ಥಳೀಯರ ಕಣ್ಣಂಚಲ್ಲಿ ನೀರು ತರಿಸಿತು.

    ವಸತಿ ಶಾಲೆಯ ಕನ್ನಡ ಶಿಕ್ಷಕ ಜಯಪ್ರಕಾಶ ತಳಗಿಹಾಳ ಅವರು ಬಾಗಲಕೋಟೆ ಜಿಲ್ಲೆ ಬದಾಮಿಯ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ವರ್ಗಾವಣೆಗೊಂಡಿದ್ದರಿಂದ ಶಾಲೆಯಲ್ಲಿ ಶನಿವಾರ ಬೀಳ್ಕೊಡುವ ಸಮಾರಂಭ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಚಿಕ್ಕ ಮಕ್ಕಳಂತೆ ಹಠ ಹಿಡಿದು ಈ ಶಾಲೆ ಬಿಟ್ಟು ಎಲ್ಲೂ ಹೋಗ್ಬೇಡಿ ಎಂದು ಗೋಗರೆದರು. ಮಕ್ಕಳು ತೋರಿದ ಪ್ರೀತಿಯಿಂದ ಭಾವುಕರಾದ ಶಿಕ್ಷಕ ಜಯಪ್ರಕಾಶ ಕೂಡ ಗದ್ಗದಿತರಾದರು.

    ನಾವು ಮನೆ ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ. 5ನೇ ತರಗತಿಯ ಸ್ಪರ್ಧಾತ್ಮಕ ಪರೀಕ್ಷೆ ಬರೆದ ನಂತರ ಇಲ್ಲಿನ ವಸತಿ ಶಾಲೆಗೆ ಆಯ್ಕೆಯಾಗಿ ಬಂದಾಗ ತುಂಬಾ ಚಿಂತೆಯಾಗಿತ್ತು. ಆದರೆ, ನಮ್ಮ ಕನ್ನಡ ಶಿಕ್ಷಕ ಜಯಪ್ರಕಾಶ ಸರ್ ಈ ಶಾಲೆಯಲ್ಲಿ ನಮ್ಮ ತಂದೆ ತಾಯಿಯನ್ನೇ ಮರೆಯುವಂತಹ ವಾತಾವರಣ ನಿರ್ಮಾಣ ಮಾಡಿದ್ದರು. ನಮಗೆ ಬದುಕು ಹೇಗಿರುತ್ತದೆ ಎನ್ನುವುದನ್ನು ಕಲಿಸಿಕೊಟ್ಟರು. ಅವರ ವರ್ಗಾವಣೆ ನಮಗೆ ಅತ್ಯಂತ ನೋವು ತಂದಿದೆ.
    | ಲಕ್ಷ್ಮೀ ಹಂಗನಕಟ್ಟಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ

    ನಾನು ಮೂಲತಃ ಬದಾಮಿ ತಾಲೂಕಿನ ಜಾಲಿಹಾಳ ಗ್ರಾಮದವನು. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ತಂದೆ-ತಾಯಿಯ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಬದಾಮಿಗೆ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿ ಹಾಕಿದ್ದೆ. ಅದೃಷ್ಟವೆನ್ನುವಂತೆ ವರ್ಗಾವಣೆಯಾಗಿದೆ. ಆದರೆ, ಇಲ್ಲಿನ ವಿದ್ಯಾರ್ಥಿಗಳು, ಸಹ ಶಿಕ್ಷಕರು ಹಾಗೂ ಸಿಬ್ಬಂದಿಯ ಪ್ರೀತಿ ಕಂಡು ಯಾಕಾದರೂ ವರ್ಗಾವಣೆ ಮಾಡಿಸಿಕೊಂಡೆ ಎಂಬ ಭಾವನೆ ಬಂತು. ಎಲ್ಲರ ಪ್ರೀತಿ- ವಿಶ್ವಾಸಕ್ಕೆ ಪಾತ್ರನಾಗಿದ್ದಕ್ಕೆ ಸಂತೋಷವಾಗಿದೆ. ಅವರ ಪ್ರೀತಿಗೆ ನಾನು ಚಿರಋಣಿ.
    | ಜಯಪ್ರಕಾಶ ತಳಗಿಹಾಳ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts