More

    ಗುರಿಯಿಲ್ಲದ, ಗುರಿ ಸಾಧಿಸದ ಬದುಕು ವ್ಯರ್ಥ

    ಕೊರಟಗೆರೆ: ಮಾನವ ಜೀವನದ ಉನ್ನತಿಗೆ ಗೊತ್ತು ಗುರಿಗಳಿರಬೇಕು. ಎಲ್ಲರೂ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ವ್ಯರ್ಥಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಸೋಮವಾರ 17ನೇ ವಾರ್ಷಿಕೋತ್ಸವ, ಜಗದ್ಗುರು ರೇಣುಕ-ಬಸವ ಜಯಂತಿ, ಸಾಮೂಹಿಕ ವಿವಾಹ ಪ್ರಯುಕ್ತ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಅಧ್ಯಾತ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶಾಂತಿ, ಸುಖದಾಯಕ ಬದುಕಿಗೆ ಧರ್ಮದ ಅರಿವು, ಆಚರಣೆ ಅಗತ್ಯವಾಗಿದೆ. ಬದುಕು ಭಗವಂತ ಕೊಟ್ಟ ಕೊಡುಗೆಯಾಗಿದ್ದು, ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರಧಾರೆಗಳಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀ ಬಸವೇಶ್ವರರು ವೀರಶೈವ ಧರ್ಮ ಸಂಸ್ಕೃತಿಯ ಸಂವರ್ಧನೆಗಾಗಿ ಶ್ರಮಿಸಿದ ಮಹಾಚೇತನ. ಅವರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

    ಗೃಹಸ್ಥಾಶ್ರಮ ಅತ್ಯಂತ ಪವಿತ್ರವಾಗಿದ್ದು, ಸತಿ-ಪತಿ ಪರಸ್ಪರ ಅರಿವು, ಸಾಮರಸ್ಯದಿಂದ ಬಾಳಿದರೆ ಜೀವನ ಉಜ್ವಲಗೊಳ್ಳುತ್ತದೆ. ಸಾಮೂಹಿಕ ವಿವಾಹ ಸಮಾರಂಭದಿಂದ ದುಂದು ವೆಚ್ಚಕ್ಕೆ ಕಡಿವಾಣ ಬಿದ್ದಿದೆ. 17 ಜೋಡಿ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದ್ದಾರೆ, ಅವರೆಲ್ಲರ ಬದುಕು ಸಮೃದ್ಧಗೊಳ್ಳಲೆಂದು ಹರಸಿದ ಜಗದ್ಗುರು ಮಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಧರ್ಮ ಮುಖಿಯಾಗಿ, ಸಮಾಜಮುಖಿಯಾಗಿ 17 ವರುಷಗಳಿಂದ ಶ್ರಮಿಸುತ್ತಿರುವುದು ಮಾದರಿಯಾಗಿದೆ ಎಂದರು.

    ಸಮಾರಂಭ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ವೀರಭದ್ರ ಶ್ರೀಗಳು ಪ್ರತಿ ವರ್ಷ ಕ್ಷೇತ್ರದಲ್ಲಿ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಸಾಮರಸ್ಯ, ಸದ್ಭಾವನೆ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಕೈಗೊಳ್ಳುವ ಎಲ್ಲ ಜನಹಿತ ಕಾರ್ಯಗಳಿಗೆ ನಮ್ಮೆಲ್ಲರ ಬೆಂಬಲ ಸಹಕಾರ ಸದಾ ಇದೆ ಎಂದರು.

    ಯಾವ ಧರ್ಮ ಜಾತಿಗಳೂ ಕೆಡಕುಗಳನ್ನು ಬಯಸುವುದಿಲ್ಲ, ಎಲ್ಲರೂ ಒಂದೇ ಕುಟುಂಬದಂತೆ ಬದುಕುತ್ತಿದ್ದಾರೆ. ಆದರೆ ರಾಜಕಾರಣಿಗಳಾದ ನಾವು ಎಲ್ಲ ಜಾತಿಗಳನ್ನು ಒಡೆದು ಆಳುವಂಥ ಕೆಲಸ ಮಾಡುತ್ತಿದ್ದೇವೆ, ಇದು ನಿಲ್ಲಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಷಾದಿಸಿದರು.

    ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಅಖಿಲ ಭಾರತ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಲೋಕೇಶ್, ತಹಸೀಲ್ದಾರ್ ಮುನಿಶಾಮಿರೆಡ್ಡಿ, ತಾಪಂ ಇಒ ಡಾ.ದೊಡ್ಡನರಸಯ್ಯ, ಕೃಷಿ ಅಧಿಕಾರಿ ನಾಗರಾಜು, ತಾಲೂಕು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದನಗೌಡ ಇದ್ದರು.

    ಲಿಂಗ ನಿರ್ಮಾಣಕ್ಕೆ ಚಿಂತನೆ: ಬದುಕಿ ಬಾಳುವ ಜನಾಂಗಕ್ಕೆ ಒಳಿತಾಗಬೇಕೆಂಬ ಉದ್ದೇಶದಿಂದ ಜನಹಿತ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಜೀವನ ಪರ್ಯಂತ ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಶ್ರಮಿಸುವ ಸಂಕಲ್ಪ ನಮ್ಮದಾಗಿದೆ ಎಂದು ಮಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಿದ್ಧರಬೆಟ್ಟವು ಸಿದ್ದರ ತಪೋಭೂಮಿಯಾಗಿದ್ದು, ಕ್ಷೇತ್ರವನ್ನು ರಾಜ್ಯ ವ್ಯಾಪ್ತಿಯಾಗಿ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಕ್ಷೇತ್ರದಲ್ಲಿ ಶಿಲೆಯಿಂದ ಬೃಹದಾಕಾರದ ಲಿಂಗ ನಿರ್ಮಾಣ ಮಾಡುವ ಚಿಂತನೆ ಇದ್ದು, ಸರ್ಕಾರ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ದಾಂಪತ್ಯಕ್ಕೆ ಕಾಲಿಟ್ಟ 17 ಜೋಡಿ: 17ನೇ ವಾರ್ಷಿಕೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿತ್ತು. 17 ಜೋಡಿ ನವ ದಾಂಪತ್ಯಕ್ಕೆ ಕಾಲಿಟ್ಟರು. ನೂತನ ವಧು-ವರರಿಗೆ ಧಾರ್ಮಿಕ ಮುಖಂಡ ಕುರುಬರಹಳ್ಳಿ ಶಿವರಾಮಯ್ಯ ವಸ್ತ್ರಗಳ ದಾನ ಮಾಡಿದರು. ಮಠದ ವತಿಯಿಂದ ಮೂಗುತಿ, ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಂದ ತಾಳಿ ಮತ್ತು ಬೆಳ್ಳಿ ಸರ ನೀಡಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಕೊರಟಗೆರೆ ತಾಲೂಕು ಗೌರವಾಧ್ಯಕ್ಷ ಹನುಮಂತಯ್ಯನಪಾಳ್ಯದ ಎಚ್.ಪಿ.ನೀಲೇಶ್ ಒಬ್ಬಟ್ಟಿನ ಊಟದ ಜವಾಬ್ದಾರಿ ವಹಿಸಿಕೊಂಡಿದ್ದರು.

    50 ಮಂದಿಗೆ ಶಿವದೀಕ್ಷೆ: ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯರು, ಎಲೆರಾಂಪುರದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ, ಬೆಳ್ಳಾವಿಯ ಶ್ರೀ ವೀರಬಸವ ಶ್ರೀಗಳು, ಬೀರೂರಿನ ಶ್ರೀ ರುದ್ರಮುನಿ ಶ್ರೀಗಳು, ಹಲಕರಟಿ ಮುನೀಂದ್ರ ಶ್ರೀಗಳು, ಕಲ್ಕೇರಿ ಸಿದ್ದರಾಮ ಶ್ರೀಗಳು, ತಂಗನಹಳ್ಳಿ ಬಸವಲಿಂಗ ಶ್ರೀಗಳು, ತಂಗನಹಳ್ಳಿ ಬಸವಲಿಂಗ ಸ್ವಾಮೀಜಿ ಸೇರಿ ಹಲವು ಮಠಾಧೀಶರು 50 ಜನ ವೀರಮಾಹೇಶ್ವರ ಮತ್ತು ಭಕ್ತರಿಗೆ ಶಿವದೀಕ್ಷೆ ನೀಡಿದರು.

    12ನೇ ಶತಮಾನದಲ್ಲಿ ಎಲ್ಲ ಮಾರ್ಗಗಳು ಬಸವ ಕಲ್ಯಾಣದ ಕಡೆಗೆ ನಡೆದವು. ಇದೆ ಹೆಮ್ಮೆಯ ವಿಚಾರ. ಆದ್ದರಿಂದ ಸಮಾಜದಲ್ಲಿ ದೊಡ್ಡ ಬದಲಾವಣೆ ಆರಂಭವಾಯಿತು. ಧರ್ಮ ಗುರುಗಳು ಧರ್ಮ ರಕ್ಷಣೆ ಮಾಡುತ್ತಾರೆ. ಇದರ ಜತೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಳಕಳಿ ಹೊಂದಿದ್ದು, ಧರ್ಮಗುರುಗಳಿಗೆ ಸಹಕಾರಿಯಾಗಿರಬೇಕು. | ಕಾರದ ವೀರಬಸವ ಸ್ವಾಮೀಜಿ ಕಾರದ ಮಠ ಬೆಳ್ಳಾವಿ.


    ನನ್ನನ್ನು ಬಾಳೆಹೊನ್ನೂರು ಜಗದ್ಗುರುಗಳು ಮಗನಂತೆ ಭಾವಿಸುತ್ತಾರೆ. ಅವರ ದರ್ಶನ ಪಡೆಯಲೆಂದೇ ನಾನು ಮಠದ ವಾರ್ಷಿಕೋತ್ಸವಕ್ಕೆ ಬರುತ್ತೇನೆ. ಅವರು ನನ್ನ ಪೂಜ್ಯ ತಂದೆಗೆ ಸಮಾನ. ವೀರಭದ್ರ ಶಿವಾಚಾರ್ಯರು ಸಿದ್ಧರಬೆಟ್ಟದಲ್ಲಿ ನಿರ್ಮಾಣ ಮಾಡಲು ಚಿಂತಿಸಿರುವ ಬೃಹದಾಕಾರದ ಶಿಲೆಯ ಲಿಂಗ ನಿರ್ಮಾಣಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ. | ಡಾ.ಹನುಮಂತನಾಥ ಸ್ವಾಮೀಜಿ ಕುಂಚಿಟಿಗ ಮಹಾಸಂಸ್ಥಾನ ಮಠ, ಎಲೆರಾಂಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts