More

    ಗುಮ್ಮಟ ನಗರಿಗೂ ಬಂತು ಕರೊನಾ ಲಸಿಕೆ….!

    ವಿಜಯಪುರ: ಮಹಾಮಾರಿ ಕರೊನಾದಿಂದ ಬೆಚ್ಚಿ ಬಿದ್ದಿದ್ದ ಗುಮ್ಮಟ ನಗರಿಗೆ ಕೊನೆಗೂ ಲಸಿಕೆ ಬಂದಿದ್ದು ಗುರುವಾರ ಸಂಜೆ ಜಿಲ್ಲಾಡಳಿತ ಲಸಿಕೆ ವಶಕ್ಕೆ ಪಡೆಯಿತು.

    ಬಾಗಲಕೋಟೆಯಿಂದ ವಿಶೇಷ ವಾಹನದಲ್ಲಿ ಲಸಿಕೆ ತರಿಸಿಕೊಳ್ಳಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಲಸಿಕೆ ಪಡೆದು ಸುರಕ್ಷಿತವಾಗಿ ಕಾಯ್ದಿರಿಸಿತು. ಒಟ್ಟು 9500 ಡೋಸ್ ಲಸಿಕೆ ಜಿಲ್ಲೆಗೆ ಆಗಮಿಸಿದ್ದು, ಜ. 16 ರಿಂದ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ 10 ತಿಂಗಳಿಂದ ಬೆಚ್ಚಿ ಬೀಳಿಸಿದ್ದ ಮಹಾಮಾರಿಗೆ ಕೊನೆಗೂ ಮದ್ದು ಲಭಿಸಿದ್ದು ಜನ ನಿರಾಳರಾಗಿದ್ದಾರೆ.
    ನೋಂದಣಿ ಪ್ರಕ್ರಿಯೆ:
    ಬಸವನಬಾಗೇವಾಡಿಯಲ್ಲಿ 1370, ವಿಜಯಪುರ-10487, ಇಂಡಿ-928, ಮುದ್ದೇಬಿಹಾಳ-1553, ಸಿಂದಗಿ-1482 ಹೀಗೆ ಒಟ್ಟು 15820 ಫಲಾನುಭವಿಗಳ ಹೆಸರು ನೋಂದಾಯಿಸಲಾಗಿದೆ. ಅದರಂತೆ ಕೋಲ್ಡ್ ಚೈನ್ ಸ್ಥಳಗಳು, ಕೇಂದ್ರಗಳು ಒಟ್ಟು 80 ಇರುತ್ತವೆ. 8 ಸ್ಥಳಗಳಲ್ಲಿ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ.
    ವಿಜಯಪುರ ನಗರದ ಬಿಎಲ್‌ಡಿಇಎ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ 1000, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 400, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 69, ಬ.ಬಾಗೇವಾಡಿಯಲ್ಲಿ 100, ಇಂಡಿಯಲ್ಲಿ 33, ಮುದ್ದೇಬಿಹಾಳದಲ್ಲಿ 100, ಸಿಂದಗಿಯಲ್ಲಿ 139, ಯುಪಿಎಚ್‌ಸಿ ದರ್ಗಾದಲ್ಲಿ 71 ಹೀಗೆ ಒಟ್ಟು 1912 ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.
    ಪ್ರಥಮ ಹಂತದಲ್ಲಿ ದಿನಾಂಕ ಜ.16 ರಂದು ಕೋವಿನ್ ತಂತ್ರಾಂಶದಲ್ಲಿ ನೋಂದಣಿಯಾದ ಒಟ್ಟು 1912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಕ್ಸಿನೇಶನ್ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.
    ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ 5 ಅಧಿಕಾರಿಗಳನ್ನು ಒಳಗೊಂಡ 20 ತಂಡಕ್ಕೆ ಸೂಕ್ತ ತರಬೇತಿಯನ್ನು ನೀಡಲಾಗಿದ್ದು, ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಇದಕ್ಕಾಗಿ 3 ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಲಸಿಕೆ ಪಡೆಯುವ ಫಲಾನುಭವಿಗಳಿಗೆ ಎಸ್‌ಎಮ್‌ಎಸ್ ಮೂಲಕ ಅವರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಎಲ್ಲಾ ಫಲಾನುಭವಿಗಳು ಕರೊನಾ ಲಸಿಕೆ ಪಡೆದು ಸರ್ಕಾರದ ಈ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕೋರಿದ್ದಾರೆ.
    ಅದೇ ರೀತಿ ವ್ಯಾಕ್ಸಿನ್ ನೀಡುವ ಕಾರ್ಯದಲ್ಲಿ ನಿಯೋಜಿಸಲಾಗಿರುವ ವ್ಯಾಕ್ಸಿನೇಶನ್ ಅಧಿಕಾರಿಗಳು ತಪ್ಪದೇ ತಮಗೆ ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897 ರನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts