More

    ಗುತ್ತಿಗೆದಾರನಿಗಾಗಿ ಅಧಿಕಾರಿಗಳ ಹುಡುಕಾಟ

    ಶಿರಸಿ: ತಾಲೂಕಿನ ಹೊಸಕೊಪ್ಪ ಮುಖ್ಯ ರಸ್ತೆಯಿಂದ ಉಮ್ಮುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರನಿಗಾಗಿ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

    2020ರಲ್ಲಿ ರಾಜ್ಯ ನೀರಾವರಿ ನಿಗಮ ಸೊರಬ ಉಪವಿಭಾಗದ ಮೂಲಕ ಶಿರಸಿ ಭಾಗದ ಹಲವು ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರು. ಅದರಲ್ಲಿ 57 ಲಕ್ಷ ರೂ. ವೆಚ್ಚದಲ್ಲಿ ಹೊಸಕೊಪ್ಪ ಮುಖ್ಯ ರಸ್ತೆಯಿಂದ ಉಮ್ಮುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟ್ ಕಾಮಗಾರಿಯನ್ನು ವಿಜಯಪುರ ಮೂಲದ ಗುತ್ತಿಗೆದಾರರಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರು 750 ಮೀಟರ್ ಉದ್ದದ ರಸ್ತೆಯನ್ನು ಅಗೆದು, ಜಲ್ಲಿ ಹರಡಿ ಹೋಗಿ 7 ತಿಂಗಳು ಕಳೆದಿವೆ. ನಂತರ ಕಾಮಗಾರಿಯೇ ನಡೆಯದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸ್ಥಳೀಯರು ನಿತ್ಯದ ಸಂಚಾರದ ವೇಳೆ ಸಂಕಟ ಅನುಭವಿಸುವಂತಾಗಿದೆ.

    ಏಕಾಏಕಿ ನಾಪತ್ತೆ:
    ಕಾಮಗಾರಿ ನಡೆಸುವ ಸಲುವಾಗಿ ಮೊದಲ ಹಂತದಲ್ಲಿ ಜಲ್ಲಿ ಸೇರಿದಂತೆ ಇತರ ಸಾಮಗ್ರಿಗಳನ್ನು ಗುತ್ತಿಗೆದಾರ ಸ್ಥಳಕ್ಕೆ ತಂದು ಸಂಗ್ರಹಿಸಿದ್ದ. ಜತೆ, ಸ್ಥಳೀಯರ ಸಹಕಾರದಿಂದ ರಸ್ತೆ ಅಗೆದು ಕೆಲಸ ಪ್ರಾರಂಭಿಸಿದ್ದ. ಜತೆ, ರಸ್ತೆ ಅಗೆದು ಜಲ್ಲಿಯನ್ನು ಅಲ್ಲಲ್ಲಿ ಹರಡಿದ್ದ. ಅದಾದ ನಂತರ ಏಕಾಏಕಿ ಕರೊನಾ ನೆಪವೊಡ್ಡಿ ಸ್ಥಳದಿಂದ ನಾಪತ್ತೆಯಾಗಿದ್ದನೆ. ಸಂಬಂಧಪಟ್ಟ ಅಧಿಕಾರಿಗಳು ಹುಡುಕಲು, ಸಂರ್ಪಸಲು ಮುಂದಾದರೂ ಅವರಿಗೂ ಸ್ಪಂದಿಸಿಲ್ಲ ಎನ್ನಲಾಗಿದೆ. ಇದೀಗ ಗುತ್ತಿಗೆದಾರನಿಗೆ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

    ಸ್ಥಳೀಯರು ಹೈರಾಣು:
    ಮುಕ್ಕಾಲು ಕಿಮೀ ರಸ್ತೆಯುದ್ದಕ್ಕೂ ಅಲ್ಲಲ್ಲಿ ಜಲ್ಲಿ ಹರಡಿದ ಪರಿಣಾಮ ಸಂಚಾರಕ್ಕೆ ಸ್ಥಳೀಯರು ತೀರಾ ಸಮಸ್ಯೆ ಅನುಭವಿಸುತ್ತಿದ್ದಾರೆ. ವಾಹನಗಳು ಪದೇ ಪದೇ ಪಂಕ್ಚರ್ ಆಗುವ ಜತೆ ಹಲವು ಬೈಕ್ ಸವಾರರು ಚಾಲನೆ ವೇಳೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಊರಿಗೆ ತೆರಳಲು ಇದೊಂದೇ ಮಾರ್ಗವಾಗಿರುವ ಕಾರಣ ಅನಿವಾರ್ಯವಾಗಿ ಇದೇ ರಸ್ತೆ ಬಳಸುವ ಸಂಕಷ್ಟ ಈ ಭಾಗದವರದ್ದಾಗಿದೆ.

    ಹಲವು ದಶಕಗಳಿಂದ ಈ ಭಾಗದಲ್ಲಿ ಉತ್ತಮ ರಸ್ತೆಯ ಬೇಡಿಕೆಯಿತ್ತು. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದರೆ, ಅರೆಬರೆ ಕಾಮಗಾರಿಯಿಂದ ಇದ್ದ ರಸ್ತೆಯೂ ಹಾಳಾಗಿದೆ. ತಕ್ಷಣ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು.
    | ಸೋಮಶೇಖರ ಗೌಡ ಸ್ಥಳೀಯ ನಿವಾಸಿ

    ಗುತ್ತಿಗೆದಾರನ ತಪ್ಪಿನಿಂದ ಕಾಮಗಾರಿ ಪೂರ್ಣವಾಗದೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಗುತ್ತಿಗೆದಾರಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಕೋವಿಡ್ ಕಾರಣಕ್ಕೆ ಸದ್ಯ ಅವರು ಬಂದಿಲ್ಲ. ಮುಂದಿನ ತಿಂಗಳು ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ, ಆದಷ್ಟು ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.
    | ಶ್ರೀಧರ ನೀರಾವರಿ ನಿಗಮದ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts