More

    ಗುಣಮಟ್ಟದ ಬೀಜ, ಕೃಷಿ ಸಲಕರಣೆ ಪೂರೈಸಿ

    ರೈತ ಸಂಘ, ಹಸಿರುಸೇನೆ ಒತ್ತಾಯ – ಕೃಷಿ ಸಹಾಯಕ ನಿರ್ದೇಶಕಿಗೆ ಮನವಿ

    ಬಾಗೇಪಲ್ಲಿ: ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಹಾಗೂ ಸಕಾಲದಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ವತಿಯಿಂದ ಕೃಷಿ ಸಹಾಯಕ ನಿರ್ದೇಶಕಿ ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರು ಹಾಗೂ ಕಾರ್ಯಕರ್ತರು, ತಾಲೂಕಿನ ಕೃಷಿ ಇಲಾಖೆ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ರೈತರಿಗೆ ಬರ ಪರಿಹಾರ, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಸಮರ್ಪಕ ರೀತಿಯಲ್ಲಿ ಪೂರೈಸುವಂತೆ ಒತ್ತಾಯಿಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ಅಧ್ಯಕ್ಷ ಎಚ್.ಎನ್. ಗೋವಿಂದರೆಡ್ಡಿ ಮಾತನಾಡಿ, ತಾಲೂಕಿನಾದ್ಯಂತ ರೈತರು ಬರ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಮುಂಗಾರು ಬಿತ್ತನೆ ಆರಂಭವಾಗಿದ್ದರೂ ರೈತರಿಗೆ ಸಿಗಬೇಕಾಗಿರುವ ಬರ ಪರಿಹಾರದ ಹಣ ನೀಡುವಲ್ಲಿ ಸರ್ಕಾರ ವಿಲವಾಗಿದೆ. ಬರ ಪರಿಹಾರ ಸೇರಿ ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

    ಬೀಜ ಸ್ವೀಕೃತಿ ರಸೀದಿ ನೀಡಿ
    ಬರ ಪರಿಹಾರ, ಬಿತ್ತನೆ ಬೀಜ ವಿತರಣೆ ಸಮಸ್ಯೆಗಳ ಬಗ್ಗೆ ಮನವಿ ಮಾಡಲು ರೈತ ಸಂಪರ್ಕ ಕೇಂದ್ರಗಳ ಬಳಿ ರೈತರು ತೆರಳಿದರೆ ಅಲ್ಲಿ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಳೆದ ವರ್ಷ ಮುಂಗಾರು ಸಂದರ್ಭದಲ್ಲಿ ಕಳಪೆ ಬಿತ್ತನೆ ಬೀಜ ವಿತರಿಸಿರುವ ಸೀಡ್ಸ್ ಕಂಪನಿ ವಿರುದ್ದ ಕ್ರಮಕ್ಕಾಗಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಹಾಗೂ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿಯೂ ಕೃಷಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಾರಿಯಾದರೂ ಸಕಾಲದಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಬೇಕು. ರೈತರಿಂದ ಆಧಾರ್, ಪಹಣಿ, ದೂರವಾಣಿ ಸಂಖ್ಯೆ ಪಡೆದುಕೊಂಡು ಕಡ್ಡಾಯವಾಗಿ ಬಿತ್ತನೆ ಬೀಜ ವಿತರಣೆಯ ಸ್ವೀಕೃತಿ ರಸೀದಿ ನೀಡಬೇಕು ಎಂದು ಗೋವಿಂದ ರೆಡ್ಡಿ ಆಗ್ರಹಿಸಿದರು.

    ಬೇಡಿಕೆ ಅನುಗುಣವಾಗಿ ವಿತರಣೆ
    ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದು, ಇನ್ನೆರಡು ದಿನಗಳಲ್ಲಿ ವಿತರಿಸಲಾಗುವುದು. ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮೇಲದಿಕಾರಿಗಳು ಹಾಗೂ ಶಾಸಕರ ಗಮನ ಸೆಳೆಯಲಾಗಿದೆ. ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಆಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ರೈತರಿಗೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀ ತಿಳಿಸಿದರು.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಿ.ವಿ. ಶ್ರೀಕಾಂತ್‌ರೆಡ್ಡಿ, ತಾಲೂಕು ಗೌರವಾಧ್ಯಕ್ಷ ಲಕ್ಷ್ಮೀನರಸಪ್ಪ, ಕಾರ್ಯದರ್ಶಿ ಗಂಗಿರೆಡ್ಡಿ, ಸದಸ್ಯರಾದ ಚೌಡರೆಡ್ಡಿ, ಆಧಿನಾರಾಯಣಪ್ಪ, ಅಶ್ವತ್ಥಪ್ಪ, ವೆಂಕಟರಾಮರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts