More

    ಗುಜರಾತ್​ನಲ್ಲಿ ಕರ್ನಾಟಕ ದರ್ಶನ, ಅಹ್ಮದಾಬಾದ್ ಕರ್ನಾಟಕ ಸಂಘದ ಅಮೃತ ಮಹೋತ್ಸವ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕನ್ನಡಿಗರು ಎಲ್ಲಿಯೇ ಹೋದರೂ ತಮ್ಮ ವಿಶಿಷ್ಟ ಸಂಸ್ಕೃತಿ, ಪರಂಪರೆಯ ಮೂಲಕ ಜನಾನುರಾಗಿಯಾಗುತ್ತಾರೆ. ಕನ್ನಡದ ಕಂಪು ದೇಶ, ವಿದೇಶದಲ್ಲಿ ಹರಡಿದೆ. ಇದೇ ರೀತಿ ಗುಜರಾತ್ ರಾಜ್ಯದ ಅಹಮದಾಬಾದ್​ನಲ್ಲಿ ಕಟ್ಟಿದ ಕರ್ನಾಟಕ ಸಂಘ ಅಮೃತ ಮಹೋತ್ಸವ ಆಚರಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಗುಜರಾತ್​ನಲ್ಲಿ ಕರ್ನಾಟಕ ದರ್ಶನ ನಡೆಯುತ್ತಿದೆ.

    ಅಹ್ಮದಾಬಾದ್​ನ ಕರ್ನಾಟಕ ಸಂಘವು ಅ. 8ರಿಂದ ಎರಡು ದಿನಗಳ ಕಾಲ ಅಹಮದಾಬಾದ್​ನಲ್ಲಿರುವ ಗುಜರಾತ್ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹಬ್ಬದ ವಾತಾವರಣ ಸೃಷ್ಟಿಸಿದೆ. ಕರ್ನಾಟಕದ ಆಹಾರ, ಸಂಸ್ಕೃತಿ, ಸಂಗೀತ, ಕಲೆ ಹಾಗೂ ಪ್ರವಾಸೋದ್ಯಮ ಮುಂತಾದ ವಿಷಯಗಳ ಪ್ರದರ್ಶನ ಹಾಗೂ ಅನಾವರಣ ನಡೆಯಲಿದೆ. ಕರ್ನಾಟಕ ಸರ್ಕಾರದೊಂದಿಗೆ ಬಿಜಿನೆಸ್ ಸಮಾವೇಶವಾಗಲಿದೆ. ಜತೆಗೆ ಹಾಸ್ಯೋತ್ಸವ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಡೊಳ್ಳು ಕುಣಿತ, ಯಕ್ಷಗಾನ, ಜಾನಪದ ನೃತ್ಯ, ಕಂಸಾಳೆ, ನವಿಲು ಕುಣಿತ, ವೀರಭದ್ರ ಕುಣಿತ, ಬಂಜಾರಾ ನೃತ್ಯಗಳು ಜರುಗಲಿವೆ. ಸ್ಯಾಂಡಲ್​ವುಡ್ ನೈಟ್​ನಲ್ಲಿ ಅನೇಕ ಚಿತ್ರನಟರು ಪಾಲ್ಗೊಳ್ಳುವರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವವು.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸುವರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಮಂತ್ರಿಗಳಾದ ಆರ್. ಅಶೋಕ, ಮುರುಗೇಶ ನಿರಾಣಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಹಾಗೂ ಗುಜರಾತ್ ರಾಜ್ಯ ಸರ್ಕಾರಗಳ ಮಂತ್ರಿಗಳು ಭಾಗವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಹನಮಂತ ಬೆನ್ನೂರು, ರಾಜೇಂದ್ರ ನಾಯಕ, ಬಿ.ಎಸ್. ಆಲಮೇಲ್ ಇತರರು ಪಾಲ್ಗೊಳ್ಳುವರು.

    ಸಹಯೋಗ: ಅಹ್ಮದಾಬಾದ್​ನ ಎಸ್​ಎಸ್​ಕೆ ಸಮಾಜ, ರಾಘವೇಂದ್ರ ಮಂಡಳ, ಗೌಡ ಸಾರಸ್ವತ ಸಮಾಜ, ರುದ್ರವಂಶ ಕುರುಹಿನಶೆಟ್ಟಿ ಸಮಾಜ, ಕರ್ನಾಟಕ ಸಿದ್ಧಾರೂಢ ಸೇವಾ ಸಂಘ, ಬಿಲ್ಲವರ ಸಂಘ, ತುಳು ಸಂಘ, ಬಂಟ್ಸ್ ಸಂಘಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.

    ಸಂಘ ಸ್ಥಾಪಿಸಿದವರು ಹೊನ್ನಳ್ಳಿ

    ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿಯವರಾದ ಸಿದ್ದಪ್ಪ ಹೊನ್ನಳ್ಳಿ ಅವರು 1937ರಲ್ಲಿ ಕೆಲಸಕ್ಕೆಂದು ಅಹ್ಮದಾಬಾದ್​ಗೆ ಹೋಗಿದ್ದರು. ಅಲ್ಲಿನ ಮಿಲ್​ನ ಕನ್ನಡಿಗರು ಸೇರಿ ‘ಸತ್ಯವಾನ ಸಾವಿತ್ರಿ’ ಎಂಬ ನಾಟಕ ಪ್ರದರ್ಶಿಸಿದರು. ಇವರಿಗೆ ಕರ್ನಾಟಕ ಸಂಘ ಸ್ಥಾಪನೆಯ ಆಲೋಚನೆ ಬಂತು. ಜಮಾಲ್ಪುರದಲ್ಲಿ ಬಾಡಿಗೆ ಜಾಗದಲ್ಲಿ ಸಂಘ ಸ್ಥಾಪನೆ ಮಾಡಿದರು. ಸಂಘದಿಂದ ಗಣೇಶೋತ್ಸವ, ದಸರಾ, ದೀಪಾವಳಿ ಹಬ್ಬಗಳನ್ನು ಆಚರಣೆ ಮಾಡಲು ಆರಂಭಿಸಿದರು. ಸಂಘವು ಸದಸ್ಯರನ್ನು ಹೆಚ್ಚಿಸಿಕೊಳ್ಳುತ್ತ ಬೆಳೆಯಿತು. ನಂತರದಲ್ಲಿ ಸಂಘದ ಕಚೇರಿಯು ನವರಂಗಪುರಕ್ಕೆ ಸ್ಥಳಾಂತರವಾಯಿತು. 1970- 80ರ ದಶಕದಲ್ಲಿ ರಣಜಿ ಆಡಲು ಬಂದಿದ್ದ ಕರ್ನಾಟಕ ತಂಡದ ಅನೇಕರು ಸಂಘಕ್ಕೆ ಭೇಟಿ ನೀಡಿ, ಸಂಘದ ಸ್ವಂತ ಕಟ್ಟಡಕ್ಕಾಗಿ ದೇಣಿಗೆ ನೀಡಿದ್ದರು.

    ‘‘1989ರಲ್ಲಿ ತಂದೆಯವರು ವಾಪಸ್ ಹುಬ್ಬಳ್ಳಿಗೆ ಬಂದು ನೆಲೆಸಿದರು. ನಂತರದಲ್ಲಿ ಕೆ.ಜಿ. ಪ್ರಭು, ಆರ್.ಟಿ. ಅಮಿನಬಾವಿ, ಬಿ.ಡಿ. ಶ್ರೀಯನ್, ಸಾಲಿನ್ ಮುಂತಾದವರು ಸಂಘ ಬೆಳೆಯಲು ಪರಿಶ್ರಮ ವಹಿಸಿದರು. 1980ರ ದಶಕದಲ್ಲಿ ತಂದೆಯವರು ಮಣಿನಗರ ಸಮೀಪದ ಖೋಕ್ರಾ ಮೆಹ್ಮದವಾಡದಲ್ಲಿ ಸಿದ್ಧಾರೂಢಸ್ವಾಮಿ ದೇವಸ್ಥಾನ ನಿರ್ವಿುಸಿದರು. ಶಿವರಾತ್ರಿ ಆಚರಣೆ, ನಿತ್ಯ ಪೂಜೆ, ಪ್ರಸಾದ ವಿತರಣೆ ನಡೆಯುತ್ತಿದೆ. ಗುಜರಾತ್ ಸರ್ಕಾರವು ತಂದೆಯನ್ನು ಸ್ವಾತಂತ್ರ್ಯೊಧರೆಂದು ಗೌರವಿಸಿದೆ. 2022ರ ಫೆಬ್ರವರಿಯಲ್ಲಿ 102ನೇ ವಯಸ್ಸಿನಲ್ಲಿ ತಂದೆಯವರು ಇಹಲೋಕ ತ್ಯಜಿಸಿದರು. ಅವರು ಗುಜರಾತ್​ನಲ್ಲಿ ಕಟ್ಟಿ ಬೆಳೆಸಿದ ಸಂಘ ಇದೀಗ ಅಮೃತ ಮಹೋತ್ಸವ ಆಚರಿಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ’ ಎಂದು ಪುತ್ರ ನಾಗೇಂದ್ರ (ನಿಲೇಶ) ಹೊನ್ನಳ್ಳಿ ಸ್ಮರಿಸಿಕೊಳ್ಳುತ್ತಾರೆ. ನಿಲೇಶ ಅವರು ಅಹ್ಮದಾಬಾದ್​ನಲ್ಲಿ ಜನಿಸಿದರೂ ಕೆಲ ವರ್ಷಗಳ ನಂತರ ವಾಪಸ್ ಹುಬ್ಬಳ್ಳಿಗೆ ಬಂದು ಇಲ್ಲಿಯೇ ಉದ್ಯಮಿಯಾಗಿ ಬೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts