More

    ಗುಂಡ್ಲುಪೇಟೆಯಲ್ಲಿ ಮೂರೂ ಪಕ್ಷಗಳ ಅಂತಿಮ ಕಸರತ್ತು

    ಗುಂಡ್ಲುಪೇಟೆ: ವಿಧಾನಸಭೆ ಚುನಾವಣೆಯ ಮತದಾನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.

    ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿಯಿದ್ದರೂ ಕಳೆದ ಎರಡು ತಿಂಗಳಿನಿಂದ ಜೆಡಿಎಸ್ ಅಭ್ಯರ್ಥಿ ಎಲ್ಲ ಗ್ರಾಮಗಳಲ್ಲಿಯೂ ಬಿರುಸಿನ ಪ್ರಚಾರ ನಡೆಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಬಿಜೆಪಿ ಅಭ್ಯರ್ಥಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದರೆ, ಅವರ ಪುತ್ರ ಭುವನ್‌ಕುಮಾರ್ ಪ್ರತ್ಯೇಕವಾಗಿ ಮತಯಾಚನೆ ಮಾಡುವ ಮೂಲಕ ತಂದೆಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಳೆದ ಮೂರು ಚುನಾವಣೆಗಳನ್ನು ಹತ್ತಿರದರಿಂದ ಬಲ್ಲ ಶಾಸಕರ ಪತ್ನಿ ಸವಿತಾ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕವೇ ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ಹಿಂದಿನ ಚುನಾವಣೆಯಲ್ಲಿ ಬಿದ್ದಿದ್ದ ಮತಗಳು ಅತ್ತಿತ್ತ ಚದುರದಂತೆ ತಂತ್ರ ಹೆಣೆಯುತ್ತಿದ್ದಾರೆ.

    ಗ್ಯಾಸ್ ಬೆಲೆ ಏರಿಕೆ ಹಾಗೂ ಉಚಿತ ಅಕ್ಕಿ ಕೈಬಿಟ್ಟಿದ್ದರಿಂದ ಬಿಜೆಪಿಗೆ ಆಗುತ್ತಿದ್ದ ಹಿನ್ನ್ನಡೆ ಸರಿಪಡಿಸಲು ಇತ್ತೀಚೆಗೆ ಮಹಿಳಾ ಮೊರ್ಚಾ ಹಾಗೂ ಸಂಘ ಪರಿವಾರದವರು ಪ್ರತ್ಯೇಕವಾಗಿ ಮನೆ ಮನೆಗೆ ತೆರಳಿ ಮಹಿಳೆಯರು ಹಾಗೂ ಪುರುಷರ ಮನವೊಲಿಸುತ್ತಿದ್ದಾರೆ. ಅಲ್ಲದೆ ನೆರೆಯ ತಮಿಳುನಾಡಿನ ಮಾಜಿ ಶಾಸಕ ಚೋಳನ್ ತಮಿಳು ಭಾಷಿಕರ ಮತಬೇಟೆಯಾಡುತ್ತಿದ್ದಾರೆ.

    ಬಿಜೆಪಿ ಸ್ಟಾರ್ ಕ್ಯಾಂಪೇನರ್‌ಗಳನ್ನು ಕರೆಸಿ ತನ್ನ ಮತಗಳನ್ನು ಗಟ್ಟಿಗೊಳಿಲು ಯೋಜನೆ ರೂಪಿಸಿದೆ. ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಸುದೀಪ್, ತಾಲೂಕಿನ ಗಡಿಯಲ್ಲಿ ಪ್ರಧಾನಿ ನರೇಂದ್ರಮೋದಿ ಮತಯಾಚಿಸಿರುವುದು ಮಂಕಾಗಿದ್ದ ಬಿಜೆಪಿಗೆ ಹೊಸ ಚೈತನ್ಯ ನೀಡಿದೆ.

    ನಾಮಪತ್ರ ಸಲ್ಲಿಕೆಗೂ ಮೊದಲೇ ಕಾಂಗ್ರೆಸ್ ಭಾರಿ ಅಬ್ಬರದಿಂದ ಪ್ರಚಾರ ಆರಂಭಿಸಿದರೂ ಬೇಸಿಗೆಯ ಬಿಸಿಲಿನ ತಾಪದಿಂದ ಅಭ್ಯರ್ಥಿ ಎಚ್.ಎಂ.ಗಣೇಶ್ ಪ್ರಸಾದ್ ಕಾಲ್ನಡಿಗೆ ಬಿಟ್ಟು ಆಟೋ ಏರಿದ್ದಾರೆ. ಚಿಕ್ಕಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು ಹಾಗೂ ರಾಜಶೇಖರ್ ಜತೆ ಪ್ರತಿದಿನವೂ ಎರಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
    ಇವರ ಪರವಾಗಿ ಪತ್ನಿ ವಿದ್ಯಾಗಣೇಶ್, ಸೋದರತ್ತೆ ಪ್ರೇಮಾ, ಚಿಕ್ಕಮ್ಮ ರೂಪಾ ಪ್ರತ್ಯೇಕವಾಗಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ನಂಜುಂಡಪ್ರಸಾದ್ ಪುತ್ರ ಚನ್ನಪ್ಪ ಸಹ ಮತಬೇಟೆಯಲ್ಲಿ ತೊಡಗಿದ್ದಾರೆ. ಬಿಜೆಪಿಯ ಅಬ್ಬರದಿಂದ ಸ್ವಲ್ಪ ಮಂಕಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮತಯಾಚಿಸಲಿದ್ದಾರೆ.

    ಕಾಂಗ್ರೆಸ್, ಬಿಜೆಪಿ ನಡುವೆ ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಮೂರು ತಿಂಗಳಿನಿಂದ ಗಲ್ಲಿಗಲ್ಲಿಗಳನ್ನೂ ಬಿಡದೆ ಸುತ್ತಿ ಬಿಜೆಪಿಯ ರೈತ ವಿರೋಧಿ ನೀತಿಗಳಿಂದಾಗಿರುವ ಸಮಸ್ಯೆಗಳ ಬಗ್ಗೆ ಜನತೆಗೆ ತಿಳಿಸುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಇವರಿಗೆ ರಾಜ್ಯಮಟ್ಟದ ಹಾಗೂ ಸ್ಟಾರ್ ಪ್ರಚಾರಕರ ಬೆಂಬಲವಿಲ್ಲದಿದ್ದರೂ ಯುವಕರು ಹಾಗೂ ರೈತರ ಮನವೊಲಿಸಿ ಬೇರೆ ಪಕ್ಷಗಳ ಕಾರ್ಯಕರ್ತರನ್ನೂ ಜೆಡಿಎಸ್ ಸೇರ್ಪಡೆ ಮಾಡುತ್ತಿದ್ದಾರೆ. ಅಲ್ಲದೆ, ಬಿಜೆಪಿ ಉಚ್ಚಾಟಿತ ಅಭ್ಯರ್ಥಿ ಎಂ.ಪಿ.ಸುನೀಲ್ ಸಹ ಬಿಜೆಪಿಯ ಮತಗಳ ಮೇಲೆ ಕಣ್ಣಿಟ್ಟು ಮತಬೇಟೆಗೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts