More

    ಗಿಡದಲ್ಲೇ ಮೊಳಕೆಯೊಡೆದ ಹೆಸರು!

    ಹುಬ್ಬಳ್ಳಿ: ಅತಿವೃಷ್ಟಿಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಮುಂಗಾರಿನ ಪ್ರಮುಖ ಹೆಸರು ಬೆಳೆ ಬಹುತೇಕ ಕೊಳೆತು ಹೋಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ವಣವಾಗಿದೆ.

    ಹೆಸರು ಎರಡೂವರೇ ತಿಂಗಳ ಬೆಳೆ. ಜೂನ್ ಮೊದಲ ವಾರ ಬಿತ್ತನೆಯಾಗಿ ಈಗ ಕೊಯ್ಲಿಗೆ ಬಂದಿದೆ. ಗಿಡದಲ್ಲಿ ಒಣಗಿದ ಹೆಸರುಕಾಯಿ ತೆಗೆದುಕೊಳ್ಳಲು ಮಳೆರಾಯ ಪುರುಸೊತ್ತು ನೀಡುತ್ತಿಲ್ಲ. ಇದರ ಪರಿಣಾಮವಾಗಿ ಹೆಸರುಕಾಳು ಗಿಡದಲ್ಲೇ ಉಬ್ಬಿಕೊಂಡಿದೆ. ಇನ್ನೂ ಕೆಲವೆಡೆ ಮೊಳಕೆಯೊಡೆದಿದೆ.

    ಈ ವರ್ಷ ಆರಂಭದಿಂದಲೂ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿತ್ತು. ಈ ಮಧ್ಯೆ ಹಳದಿ ರೋಗವೂ ಕೆಲವು ಕಡೆಗಳಲ್ಲಿ ಬೆಳೆಗೆ ಕಾಡಿದೆ. ಅಷ್ಟು ಇಷ್ಟು ಬಂದಿದ್ದ ಬೆಳೆ ಕೊಯ್ಲು ಮಾಡುವ ಹೊತ್ತಿಗೆ ಧೋ ಎಂದು ಮಳೆ ಸುರಿಯುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

    ಹೆಸರು ಒಕ್ಕಣೆ ಮಾಡಿ ಕಾಳು ಮನೆಗೆ ತೆಗೆದುಕೊಂಡು ಹೋಗೋಣ ಎಂದರೆ ಮಳೆ ಬಿಡುತ್ತಿಲ್ಲ. ಮಳೆಗೆ ಸಿಕ್ಕ ಕಾಳು ಕೆಟ್ಟು ಹೋಗಿವೆ. ವಾರದ ಹಿಂದೆ ಬಿಡಿಸಿಟ್ಟ ಹೆಸರು ಕಾಳು ಕಪ್ಪಗಾಗಿದ್ದು, ತಿಪ್ಪೆಗೆ ಎಸೆಯುವ ಪ್ರಸಂಗ ಬಂದಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

    ಬಾರದ ವಿಮೆ:

    ಕಳೆದ ವರ್ಷದ ವಿಮಾ ಪರಿಹಾರವೂ ರೈತರಿಗೆ ಸಿಕ್ಕಿಲ್ಲ. ಇದೀಗ ಹೆಸರು ಬೆಳೆ ನಾಶವಾಗಿದೆ. ಬೆಳೆ ವಿಮೆ ಪ್ರಿಮಿಯಂ ಪಾವತಿಸಿಕೊಂಡವರು ಬಂದು ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಿಲ್ಲ. ಫಸಲು ನಾಶವಾಗಿದ್ದರಿಂದ ಹೊಲವನ್ನು ಹರಗಿ ಬೇರೆ ಬೆಳೆ ಬೆಳೆಯಲು ಅಣಿಗೊಳಿಸಬೇಕಾಗಿದೆ. ಎಲ್ಲ ಮುಗಿದ ಮೇಲೆ ಅಧಿಕಾರಿಗಳು ಬಂದರೆ ಏನು ಪ್ರಯೋಜನ ಎಂದು ಕೋಳಿವಾಡ ಗ್ರಾಮದ ರೈತರು ಪ್ರಶ್ನಿಸಿದ್ದಾರೆ.

    10- 12 ದಿನದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹೆಸರು ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ. ಸಾವಿರಾರು ರೂ. ಖರ್ಚು ಮಾಡಿ ಔಷಧ, ಗೊಬ್ಬರ ಹಾಕಿದ್ದೇವೆ. ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಪಾವತಿಸಿದ್ದೇವೆ. ಸೀಜನ್ ಮುಗಿದ ಮೇಲೆ ಸಮೀಕ್ಷೆ ಮಾಡುತ್ತಾರೆಯೇ? ಎಂದು ಕೋಳಿವಾಡ ಗ್ರಾಮದ ಬಸವರಾಜ, ಹನಮಂತಪ್ಪ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳೆ ವಿಮೆಗೆ ಸಂಬಂಧಿಸಿ ಆಣೆವಾರಿ ಸಮೀಕ್ಷೆ ಆರಂಭವಾಗಿದೆ. ಹೋಬಳಿ ಮಟ್ಟದಲ್ಲಿ ರ್ಯಾಂಡಮ್ ಆಗಿ ಕೆಲವು ಸರ್ವೆ ನಂಬರ್​ಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ಮಾಡುವುದರಿಂದ ಇಂತಹುದೇ ಜಮೀನು ಸಮೀಕ್ಷೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಶಿರಗುಪ್ಪಿ ಹೋಬಳಿ ವ್ಯಾಪ್ತಿಗೆ ಬರುವ ಕೋಳಿವಾಡ ಗ್ರಾಮದಲ್ಲಾದ ನಷ್ಟವೂ ಸಮೀಕ್ಷೆಯಲ್ಲಿ ಸೇರಲಿದೆ.

    | ರಾಜಶೇಖರ ಅಣಗೌಡರ, ಸಹಾಯಕ ಕೃಷಿ ನಿರ್ದೇಶಕ

    ಕಳೆನಾಶಕದಿಂದ ಬೆಳೆಗೆ ಹಾನಿ

    ಹುಬ್ಬಳ್ಳಿ: ಪಡ ಬಿದ್ದಿದ್ದ ಜಮೀನಿನಲ್ಲಿ ಬೆಳೆದಿದ್ದ ಕಳೆಗೆ ಹೊಡೆದ ಕಳೆನಾಶಕ ಔಷಧಿ ಅಕ್ಕಪಕ್ಕದ ಹೊಲಗಳ ಬೆಳೆಗೆ ಹಾನಿ ಮಾಡಿದ ಘಟನೆ ಸಮೀಪದ ಕೋಳಿವಾಡದಲ್ಲಿ ನಡೆದಿದೆ.

    ವಿದ್ಯುತ್ ಉತ್ಪಾದನೆ ಕಂಪನಿಯೊಂದಕ್ಕೆ ನೀಡಿದ್ದ ಜಮೀನು ಹಲವು ವರ್ಷಗಳಿಂದ ಕೃಷಿ ಮಾಡದ ಹಿನ್ನೆಲೆಯಲ್ಲಿ ಕಳೆ ವ್ಯಾಪಕವಾಗಿ ಬೆಳೆದಿತ್ತು. ಹೀಗಾಗಿ ಜಮೀನಿನ ಮಾಲೀಕರು ಎರಡು ವಾರದ ಹಿಂದೆ ಕಳೆನಾಶಕ ಸಿಂಪಡಿಸಿದ್ದರು.

    ಹೀಗೆ ಸಿಂಪಡಣೆ ಮಾಡಿದ ಕಳೆನಾಶಕ ಹಾರುತ್ತ ಅಕ್ಕಪಕ್ಕದ ಹತ್ತಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳಿದ್ದ ಜಮೀನುಗಳಿಗೂ ವ್ಯಾಪಿಸಿದೆ. ಅದರಿಂದ ಅಂದಾಜು 25 ಎಕರೆಗೂ ಹೆಚ್ಚಿನ ಭೂಮಿಯಲ್ಲಿನ ಹತ್ತಿ, ಮೆಣಸಿನಕಾಯಿ ಬೆಳೆ ಹಾನಿಯಾಗಿದೆ ಎಂದು ಅಕ್ಕಪಕ್ಕದ ರೈತರು ಕೃಷಿ ಅಧಿಕಾರಿಗಳ ಎದುರು ಅಳಲು ತೋಡಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಗ್ರಾಮದವರಾಗಿರುವುದರಿಂದ ಪರಸ್ಪರ ರ್ಚಚಿಸುವುದು ಒಳಿತು. ನಷ್ಟವನ್ನು ಹೇಗೆ ಭರಿಸಬೇಕೆಂಬ ಬಗ್ಗೆ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ತೀರ್ವನಕ್ಕೆ ಬನ್ನಿ ಎಂದು ಸಲಹೆ ನೀಡಿದ್ದಾರೆ.

    ಕಳೆನಾಶಕದಿಂದ ಬೆಳೆಗಳ ಮೇಲಾದ ಪರಿಣಾಮದ ಬಗ್ಗೆ ಹಿರಿಯ ಕೃಷಿ ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದೇವೆ. ವಿಜ್ಞಾನಿಗಳು ಪರಿಶೀಲನೆ ನಡೆಸಿದ ನಂತರ ಹಾನಿಯ ಅಂದಾಜು ತಿಳಿಯಲಿದೆ. ಅಲ್ಲದೆ, ರೈತರು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಲು ಸಹ ಸಲಹೆ ನೀಡಿದ್ದೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts