More

    ಗಾಣಿಗರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ

    ಬೈಲಹೊಂಗಲ: ಗಾಣಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ನನಗಿದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗಾಣಿಗ ಸಮಾಜ ಹಾಗೂ ನೌಕರರ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇವತ್ತಿನ ಎಲ್ಲ ಕೆಲಸಗಳು ಸರ್ಕಾರ ಮತ್ತು ಮುಖ್ಯಮಂತ್ರಿಗಳಿಂದ ಆಗಬೇಕಿದ್ದರಿಂದ ತಮ್ಮ ಬೇಡಿಕೆಗಳನ್ನು ಅವರ ಗಮನಕ್ಕೆ ತರಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಗಾಣಕ್ಕೆ ಎತ್ತುಗಳನ್ನು ಕಟ್ಟಿ ಎಣ್ಣೆ ತೆಗೆಯುವ ಮೂಲ ಕಸುಬು ಗಾಣಿಗರದ್ದಾಗಿದೆ. ಪುರಾತಾನ ಕಾಲದಿಂದ ಗಾಣಿಗರಿಗೆ ಪ್ರಮುಖ ಸ್ಥಾನಮಾನ ನೀಡಲಾಗಿದೆ. ಆದರೆ, ಕೆಲವರು ಮಾತ್ರ ತಮ್ಮ ಮುಖ್ಯ ಕಸುಬು ಉಳಿಸಿಕೊಂಡಿದ್ದಾರೆ ಎಂಬುದು ಸಂತಸ ಸಂಗತಿ ಎಂದರು.

    ಶಿವಮೊಗ್ಗದ ಐದು ಸಾವಿರ ಜನರಿಗೆ ನಿವೇಶನ ಮಂಜೂರು ಮಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ್ದೆ. ಮುಧೋಳದಲ್ಲಿ ಗಾಣಿಗ ಸಮುದಾಯ ನಿರ್ಮಾಣಕ್ಕೆ ಒಂದು ಕೋಟಿ ರೂ.ವಿಶೇಷ ಅನುದಾನ ಮಂಜೂರು ಮಾಡಿದ್ದೆ. ರಾಜ್ಯದಲ್ಲಿರುವ 50 ಲಕ್ಷಕ್ಕೂ ಅಧಿಕ ಹೆಚ್ಚು ಜನ ಗಾಣಿಗ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ವಿಶೇಷ ಅನುದಾನ ನೀಡಿದ ತೃಪ್ತಿ ನನಗಿದೆ ಎಂದರು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ವಿಶೇಷ ಗಮನಹರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯೂ ಇದೇ ಆಗಿದೆ. ವಿದ್ಯಾವಂತರಾದರೆ ತಮ್ಮ ಕಾಲ ಮೇಲೆ ನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಅವಸರ ಮಾಡದೇ ಅವರು ಎಲ್ಲಿಯವರೆಗೆ ಓದುತ್ತಾರೆಯೋ ಅಲ್ಲಿಯವರೆಗೆ ಓದಿಸಬೇಕು. ಆಗ ಮಾತ್ರ ಹೆಣ್ಣು ಮಕ್ಕಳು ಕೂಡ ಪುರುಷರಿಗೆ ಸರಿಸಮಾನವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

    ವಿಜಯಪುರದ ಗಾಣಿಗ ಗುರು ಪೀಠದ ಪೀಠಾಧ್ಯಕ್ಷ ಡಾ.ಜಯಬಸವ ಕುಮಾರ ಸ್ವಾಮಿಗಳು, ಕೊಲ್ಹಾರ ಜಗದ್ಗುರು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಭಗಳಾಂಬಾದೇವಿ ಆರಾಧಕ ವೀರಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಸದೆ ಮಂಗಲ ಅಂಗಡಿ, ಶಾಸಕ ಮಹಾಂತೇಶ ಕೌಜಲಗಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಉಟಗಿ, ಸಂಘದ ಜಿಲ್ಲಾಧ್ಯಕ್ಷ ಪ್ರವೀಣ ಗಾಣಿಗೇರ, ತಾಲೂಕಾಧ್ಯಕ್ಷ ಗಂಗಾಧರ ಗಿರಿಜಣ್ಣವರ ಮಾತನಾಡಿದರು.

    ಶಾಸಕರಾದ ಮಹಾಂತೇಶ ದೊಡಗೌಡರ, ರಮೇಶ ಬೂಸನೂರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಎಸ್.ಕೆ.ಬೆಳ್ಳುಬ್ಬಿ, ಬಿ.ಜಿ.ಪಾಟೀಲ ಹಾಗೂ ಗೂಳಪ್ಪ ಹೊಸಮನಿ, ಶೇಖರ ಸಜ್ಜನ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಜ್ಯೋತಿ ಕೋಲ್ಹಾರ, ಶೋಭಾ ಗಾಣಿಗೇರ, ಮಲ್ಲಪ್ಪ ಗಾಣಿಗೇರ ಇದ್ದರು.

    ಗಾಣಿಗ ಸಂಘದ ರಾಜ್ಯ ಉಪಾಧ್ಯಕ್ಷ ಸೋಮಲಿಂಗ ಮೆಟಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯಗೌಡ ಪ್ರಾರ್ಥಿಸಿದರು, ಲೀನಾ ವಕ್ಕುಂದ, ಪ್ರವೀಣ ಗಾಣಿಗೇರ ನಿರೂಪಿಸಿದರು. ವಿವಿಧ ಕ್ಷೇತ್ರದ ಸಾಧಕರು, ಪ್ರಗತಿಪರ ರೈತರು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವೈದ್ಯರನ್ನು, ಗಣ್ಯರನ್ನು ಸನ್ಮಾನಿಸಲಾಯಿತು. ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಿಂದ ಶ್ರೀಗಳ ಬೆಳ್ಳಿ ಸಾರೋಟಿನ ಮೆರವಣಿಗೆ ಮುರಗೋಡ ರಸ್ತೆಯ ವೇದಿಕೆವರೆಗೆ ಜರುಗಿತು. ಮೆರವಣಿಗೆಯಲ್ಲಿ ಕುಂಭಮೇಳ, ಕುದುರೆ ಕುಣಿತ ನೋಡುಗರ ಗಮನಸೆಳೆದವು.

    ಮನವಿ ಸಲ್ಲಿಕೆ: ಬೈಲಹೊಂಗಲದಲ್ಲಿ ಗಾಣಿಗ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸರ್ಕಾರದಿಂದ 1.5 ಕೋಟಿ ರೂ.ಅನುದಾನ ಒದಗಿಸಬೇಕು. ಗಾಣಿಗ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು
    ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts