More

    ಗಾಂಧಿ ಜಯಂತಿ ಸರಳ ಆಚರಣೆ

    ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಅ. 2ರಂದು ಗಾಂಧಿ ಜಯಂತಿಯನ್ನು ಸರಳ, ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಡಿಯೋ ಸಂವಾದ ಮೂಲಕ ಎಲ್ಲ ತಾಲೂಕಾಡಳಿತದೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲಾ ಮಟ್ಟದಲ್ಲಿ ಗಾಂಧಿ ವೃತ್ತದಲ್ಲಿ ಸರಳವಾಗಿ ಆಚರಿಸಬೇಕು. ವೇದಿಕೆ ಕಾರ್ಯಕ್ರಮ ಆಯೋಜಿಸಬಾರದು. ಗಾಂಧಿ ಪ್ರತಿಮೆ, ಲಾಲ್​ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಮಾಲಾರ್ಪಣೆ, ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಗೆ ಪ್ರಿಯವಾದ ಗೀತೆಗಳ ಗಾಯನಗಳನ್ನು ಪ್ರಸ್ತುತಪಡಿಸಬೇಕು. ನಗರದಲ್ಲಿ ಒಂದು ವಾರ ವಾರ್ಡ್​ವಾರು ಸಾಮೂಹಿಕ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಒಣ ಕಸ, ಬಳಸಿದ ಮಾಸ್ಕ್​ಗಳ ವಿಲೇವಾರಿಗೆ ತಹಸೀಲ್ದಾರ್​ಗಳ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕು. ಎಲ್ಲ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಆಯಾ ಕಚೇರಿಗಳನ್ನು ಸ್ವಚ್ಛಗೊಳಿಸಬೇಕು. ಶಾಲೆ ಸ್ವಚ್ಛತೆಗೆ ಮಕ್ಕಳನ್ನು ತೊಡಗಿಸಬಾರದು. ಪರಸ್ಪರ ಅಂತರ, ಸುರಕ್ಷತೆಗೆ ಆದ್ಯತೆ ನೀಡಿ ಕಾರ್ಯಕ್ರಮ ನಡೆಸಿ ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಅ. 2ರಿಂದ 9ರವರೆಗೆ ನಿತ್ಯ ಬೆಳಗ್ಗೆ 7ರಿಂದ 9ರವರೆಗೆ ಜಿಲ್ಲಾ ಕೇಂದ್ರ ಸೇರಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಗರದ ಒಂದೊಂದು ವಾರ್ಡ್ ಅಥವಾ ಐತಿಹಾಸಿಕ ಸ್ಥಳಗಳು, ದೇವಾಲಯಗಳ ಆವರಣಗಳನ್ನು ಸ್ವಚ್ಛಗೊಳಿಸಬೇಕು. ಒಂದೊಂದು ಇಲಾಖೆ ಅಧಿಕಾರಿಗಳನ್ನು ಆಯಾ ದಿನದ ಸ್ವಚ್ಛತಾ ಕಾರ್ಯದ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಬೇಕು. ಪಪಂ, ಪುರಸಭೆ, ನಗರಸಭೆಗಳಿಂದ ಅಗತ್ಯ ಸ್ವಚ್ಛತೆ ಪರಿಕರ ಪಡೆಯಬೇಕು. ಆರೋಗ್ಯ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್ ಪಡೆಯಬೇಕು. ಮಾಸ್ಕ್ ಧರಿಸುವುದು, ಬಳಸಿದ ಮಾಸ್ಕ್ ಹಾಗೂ ಒಣ ಕಸ ವಿಲೇವಾರಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

    ಪ್ರತಿ ಸರ್ಕಾರಿ ಕಚೇರಿಗಳ ಆವರಣ, ಕಟ್ಟಡಗಳ ಮೇಲ್ಛಾವಣಿ, ಒಳಾವರಣ ಸ್ವಚ್ಛಗೊಳಿಸಬೇಕು. ಧೂಳು, ಪಾಚಿ, ಗಿಡಗಂಟಿ, ಕಸವನ್ನು ಅಧಿಕಾರಿಗಳು ಶ್ರಮದಾನದಿಂದ ಸ್ವಚ್ಛಗೊಳಿಸಬೇಕು. ಕಚೇರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದವರಿಗೆ ರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡದ ಕಚೇರಿ ಮುಖ್ಯಸ್ಥರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

    ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಜಿಪಂ ಸಹಾಯಕ ಕಾರ್ಯದರ್ಶಿ ಕುಮಾರ ಮಣ್ಣವಡ್ಡರ, ಪೌರಾಯುಕ್ತ ಬಸವರಾಜ ಜಿದ್ದಿ, ಡಿಡಿಪಿಐ ಅಂದಾನೆಪ್ಪ ವಡಿಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ. ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎ. ಜಮಖಾನೆ, ತಹಸೀಲ್ದಾರ್ ಶಂಕರ ಜಿ.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಎಚ್. ಬಸವರಾಜ ಇತರರಿದ್ದರು. ವಾರ್ತಾಧಿಕಾರಿ ಬಿ.ಆರ್. ರಂಗನಾಥ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts