More

    ಗಾಂಜಾ ಮಾರಾಟ, ಓರ್ವನ ಬಂಧನ

    ಬೆಳಗಾವಿ: ನಿಷೇಧಿತ ಮಾದಕ ಗಾಂಜಾ ಪದಾರ್ಥವನ್ನು ಮಹಾರಾಷ್ಟ್ರದಿಂದ ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಬೇಧಿಸಿರುವ ನಿಪ್ಪಾಣಿ ಪೊಲೀಸರು, ಮಂಗಳವಾರ ಓರ್ವನನ್ನು ಬಂಧಿಸಿ, 490 ಗ್ರಾಂ ಗಾಂಜಾ ಜಪ್ತಿ ಪಡಿಸಿಕೊಂಡಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ತೇರವಾಡ ಗ್ರಾಮದ ನಿವಾಸಿ ಅಮೀರ್ ಬಸೀರ್ ಜಮಾದಾರ್ (21) ಬಂಧಿತ. ಜತ್ರಾಟ ಗ್ರಾಮದ ವ್ಯಾಪ್ತಿಯ ಜಂಗ್ಲಿಪೀರ್ ದರ್ಗಾ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೈಕ್ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 490 ಗ್ರಾಂ ಗಾಂಜಾ, ಒಂದು ಮೊಬೈಲ್ ಫೋನ್, ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಆತನಿಗೆ ಗಾಂಜಾ ಸರಬರಾಜು ಮಾಡಿದ್ದ ಕುರಂದವಾಡ ಗ್ರಾಮದ ಪ್ರಸಾದ ಪ್ರಕಾಶ ಅಂಬಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್‌ಐ ಆನಂದ ಕ್ಯಾರಕಟ್ಟಿ, ಪಿ.ಬಿ.ಕಾಂಬಳೆ, ವಿ.ಎಸ್.ಬಾಳಿಕಾಯಿ, ಎಂ.ಎ.ತೇರದಾಳ, ಆರ್.ಆರ್.ದಮನೆ, ಎಸ್.ಪಿ.ಅಸೂದೆ ಹಾಗೂ
    ಆರ್.ಎಂ.ಪಾಟೀಲ ಕಾರ್ಯಾಚರಣೆಯಲ್ಲಿದ್ದರು.

    196 ಲೀಟರ್ ಗೋವಾ ಮದ್ಯ ಜಪ್ತಿ: ಬೆಳಗಾವಿ: ಇಲ್ಲಿನ ಶಹಾಪುರದ ಸಂಭಾಜಿ ಗಲ್ಲಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ 196 ಲೀಟರ್ ವಿವಿಧ ಬಗೆಯ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮದ್ಯವನ್ನು ಅಕ್ರಮವಾಗಿ ಸಾಗಣೆ ಮತ್ತು ಮಾರಾಟ ಮಾಡುವ ಉದ್ದೇಶದಿಂದ ಶಹಾಪುರದ ಸಂಭಾಜಿ ಗಲ್ಲಿಯ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ 196.56 ಲೀಟರ್ ಗೋವಾ ಮದ್ಯ ಮಾರಾಟಕ್ಕೆ ಬಳಕೆ ಮಾಡುತ್ತಿದ್ದ ವಾಹನಗಳು ಸೇರಿ 5.80 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ
    ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇಬ್ಬರು ಕೊಲೆ ಆರೋಪಿಗಳು ಅಂದರ್: ಬೆಳಗಾವಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ. ಕರೋಶಿ ಗ್ರಾಮದ ಮಹಾಂತೇಶ ತಳವಾರ, ರಾಜು ದೊಡಮನಿ ಬಂಧಿತರು. ಕರೋಶಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅ.7ರಂದು ಕೊಳೆತ ಸ್ಥಿತಿಯಲ್ಲಿ ಸುನೀಲ ಸಾಳುಂಕೆ (25) ಎಂಬ ಯುವಕನ ಶವ ಪತ್ತೆಯಾಗಿತ್ತು. ಅ.2ರಂದು ಬೆಳಗ್ಗೆ ನನ್ನ ಮಗ ಮತ್ತು ಸ್ನೇಹಿತ ಇಬ್ಬರು ಸೇರಿಕೊಂಡು ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಅ.7ರಂದು ಕರೋಶಿ ಅರಣ್ಯ ಪ್ರದೇಶದಲ್ಲಿ ಮಗ ಶವವಾಗಿ ಪತ್ತೆಯಾಗಿದ್ದಾನೆ. ಆ ಸ್ನೇಹಿತನ ಹೆಂಡತಿ ಜತೆ ನನ್ನ ಮಗ ಅಸಭ್ಯವಾಗಿ ವರ್ತಿಸಿದ್ದ. ಇದು ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಮತ್ತೆ ಇಬ್ಬರು ಸರಿಹೊಂದಿ ಮೊದಲಿನಂತೆ ಅನ್ಯೋನ್ಯವಾಗಿದ್ದರು. ಮಗನ ಕೊಲೆಗೆ ಹಳೆಯ ವೈಷಮ್ಯ ಕಾರಣ ಇರಬಹುದು ಎಂದು ಮೃತ ಯುವಕನ ತಾಯಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಚಿಕ್ಕೋಡಿ ಠಾಣೆ ಸಿಪಿಐ ಆರ್.ಆರ್. ಪಾಟೀಲ ನೇತೃತ್ವದ ತಂಡವು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts