More

    ಗಾಂಜಾ ಮಾಫಿಯಾಕ್ಕೆ ಕಡಿವಾಣ ಹಾಕಿ

    ನಾಗಮಂಗಲ: ತಾಲೂಕಿನ ಬೆಳ್ಳೂರು ಭಾಗದಲ್ಲಿ ಗಾಂಜಾ ಸೇವನೆ ಹೆಚ್ಚಾಗಿದ್ದು, ಮಾಫಿಯವನ್ನು ಪತ್ತೆಹಚ್ಚಿ ಬೇರು ಸಮೇತ ಕಿತ್ತುಹಾಕುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಒತ್ತಾಯಿಸಿದರು.

    ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಬೆಳ್ಳೂರು ಪಟ್ಟಣದ ಶಿವಣ್ಣ ಮಾತನಾಡಿ, ಬೆಳ್ಳೂರಿನಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗಿದೆ. 12-13 ವರ್ಷದ ಹುಡುಗರು ಗಾಂಜಾ ಸೇವಿಸುತ್ತಿದ್ದಾರೆ. ಅವರನ್ನು ಮಾತನಾಡಿಸುವುದಕ್ಕೇ ಭಯವಾಗುತ್ತದೆ. ಈ ರೀತಿಯ ಹುಡುಗರನ್ನು ಹಲವಾರು ಬಾರಿ ಪೊಲೀಸರು ವಶಕ್ಕೆ ಪಡೆದು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೀರಿ. ಆದರೆ ಅವರನ್ನು ಮಾಲು ಸಮೇತ ಬಂಧಿಸಿದರೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ದೂರಿದರು.

    ತಾಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ದನಗಳನ್ನು ತುಂಬಿಕೊಂಡು ಹೋಗುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಆದರೆ ಕೆಲವು ಸಂಘಟನೆಗಳೊಂದಿಗೆ ಪೊಲೀಸರು ಜತೆಗೂಡಿ ವಸೂಲಿಗೆ ನಿಂತಿದ್ದಾರೆ. ಬೆಳ್ಳೂರು ಕ್ರಾಸ್‌ನ ಹೋಟೆಲ್‌ವೊಂದರಲ್ಲಿ ಸಂಘಟನೆಗಳ ಮುಖಂಡರೊಂದಿಗೆ ಪೊಲೀಸರು ಕುಳಿತುಕೊಂಡು ವಾಹನಗಳ ಚಾಲಕರೊಂದಿಗೆ ವ್ಯವಹಾರ ಕುದುರಿಸುತ್ತಾರೆ ಎಂದು ಬೆಳ್ಳೂರು ಶಿವಣ್ಣ ಆರೋಪಿಸಿದರು. ಇದಕ್ಕೆ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ಪ್ರತಿಕ್ರಿಯಿಸಿ, ಈ ಸಂಬಂಧ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

    ತಾಲೂಕಿನಲ್ಲಿ ಜಮೀನು ವಿವಾದಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗುತ್ತಿದೆ. ಕಂದಾಯ ಇಲಾಖೆಯ ಯಡವಟ್ಟಿನಿಂದ ಪೊಲೀಸರ ಮೇಲೆ ಜನರು ಗೂಬೆ ಕೂರಿಸುವಂತಾಗಿದೆ. ಕಂದಾಯ ಇಲಾಖೆ ಸರಿಯಾಗಿ ಕೆಲಸ ಮಾಡದಿರುವುದರಿಂದ ಪೊಲೀಸ್ ಮೇಲೆ ಸುಮ್ಮನೆ ದೂರುವಂತಾಗಿದೆ. ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸುವುದೇ ಮೂಲ ಉದ್ದೇಶವಾಗಬಾರದು. ಸ್ಥಳದಲ್ಲಿಯೇ ಸಮಸ್ಯೆಗಳನ್ನು ನಿವಾರಿಸುವ ಕೆಲಸವಾದರೆ, ವೈಷಮ್ಯ ಉಂಟಾಗುವುದಿಲ್ಲ ಹಿರಿಯ ಮುಖಂಡ ಕಂಬದಹಳ್ಳಿ ನಂಜುಂಡಪ್ಪ ಹೇಳಿದರು.

    ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ಮಾತನಾಡಿ, ಜಮೀನು ವಿಚಾರವಾಗಿ ಸಂಬಂಧಿಸಿದ ಪ್ರಕರಣಗಳಿಗೆ ಕಂದಾಯ ಇಲಾಖೆ ಯಾವ ರೀತಿ ದಾಖಲೆಗಳನ್ನು ನೀಡಿರುತ್ತಾರೆ ಅದಕ್ಕೆ ತಕ್ಕಂತೆ ಕ್ರಮ ವಹಿಸುತ್ತೇವೆ. ಹಂದೇನಹಳ್ಳಿ ಕಾಲನಿಯ ವಿವಾದ ಅರಣ್ಯ ಇಲಾಖೆ ನಡುವೆ ಇರುವಂಥದ್ದು. ಇದರಲ್ಲಿ ಪೊಲೀಸರ ಪಾತ್ರವೇನಿಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಕ್ರಿಮಿನಲ್ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ಬಂಧನ ಮಾಡಲಾಗಿರುತ್ತದೆ. ಸಿವಿಲ್ ಪ್ರಕರಣಗಳಲ್ಲಿ ಏಕಾಏಕಿ ಬಂಧಿಸುವುದಿಲ್ಲ ಎಂದು ತಿಳಿಸಿದರು.

    ಸಭೆಯಲ್ಲಿ ವೃತ್ತ ನಿರೀಕ್ಷಕ ನಿರಂಜನ್, ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ರಾಜೇಂದ್ರ, ಬಸವರಾಜ ಚಿಂಚೋಳಿ, ತಾಪಂ ಮಾಜಿ ಸದಸ್ಯ ಬೆಳ್ಳೂರು ವೆಂಕಟೇಶ್, ಮುಖಂಡರಾದ ಕಂಚಿನಕೋಟೆ ಮೂರ್ತಿ, ಕ್ಯಾತನಹಳ್ಳಿ ಮಂಜುನಾಥ್, ನಾಗರಾಜಯ್ಯ, ಸಂತೋಷ್, ಮುಳುಕಟ್ಟೆ ಶಿವರಾಮಯ್ಯ ಸೇರಿದಂತೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts