More

    ಗರಿಷ್ಠ ಉತ್ಪಾದನಾ ಮಟ್ಟಕ್ಕೆ ಎಂಆರ್‌ಪಿಎಲ್

    ವೇಣುವಿನೋದ್ ಕೆ.ಎಸ್. ಮಂಗಳೂರು

    ರಾಜ್ಯದ ಏಕೈಕ ರಿಫೈನರಿಯಾಗಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ಸ್ ಲಿ.(ಎಂಆರ್‌ಪಿಎಲ್) ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆಯಲ್ಲಿ ಕೋವಿಡ್ ಪೂರ್ವ ಸ್ಥಿತಿಗೆ ತಲುಪಿದೆ.

    ಪೆಟ್ರೋಲ್ ಉತ್ಪಾದನೆ ಕೆಲ ತಿಂಗಳ ಹಿಂದೆಯೇ ಚೇತರಿಕೆ ಕಂಡಿತ್ತು. ಆದರೆ ಡೀಸೆಲ್ ಉತ್ಪಾದನೆಯಲ್ಲಿ ಮಾತ್ರ ಬೇಡಿಕೆ ಇಲ್ಲದ ಕಾರಣ ಕಂಪನಿಯು ಸ್ಥಾವರಗಳನ್ನು ಪೂರ್ತಿಯಾಗಿ ಚಾಲನೆಗೊಳಿಸಿರಲಿಲ್ಲ. ಈಗ ಸಂಸ್ಕರಣೆಯ ಮೂರೂ ಘಟಕಗಳು ಪೂರ್ಣವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿವೆ.

    ಈಗ ಕಂಪನಿ ಪೂರ್ತಿಯಾಗಿ ಚೇತರಿಸಿಕೊಂಡಿದ್ದು, 2019ರಲ್ಲಿ ದೇಶ ಆರ್ಥಿಕ ಹಿನ್ನಡೆ ಕಾಣುವ ಹೊತ್ತಿಗೆ ಮೊದಲೇ ಇದ್ದಂತಹ ಸ್ಥಿತಿಗೆ ಬಂದಿದೆ. ಕಳೆದ 18 ತಿಂಗಳಲ್ಲಿ 2,500 ಕೋಟಿ ರೂ. ನಷ್ಟದ ಬಿಸಿ ಅನುಭವಿಸಿರುವ ಕಂಪನಿಗೆ ಡೀಸೆಲ್‌ನಲ್ಲಿ ಬೇಡಿಕೆ ಏರುತ್ತಿರುವುದು ತುಸು ಆಹ್ಲಾದಕರ ಸಂಗತಿ ಎನ್ನುತ್ತಾರೆ ಕಂಪನಿಯ ಹಿರಿಯ ಅಧಿಕಾರಿಗಳು.

    ರಾಜ್ಯಕ್ಕೆ ಬೇಕಾದ ಶೇ.80ರಷ್ಟು ಪೆಟ್ರೋಲ್, ಡೀಸೆಲ್‌ನ್ನು ಎಂಆರ್‌ಪಿಎಲ್ ಉತ್ಪಾದಿಸಿದರೆ, ಕಂಪನಿಗಳಾದ ಐಒಸಿ, ಎಚ್‌ಪಿಸಿಎಲ್ ವಿತರಣೆ ಮಾಡುತ್ತವೆ.

    ಡೀಸೆಲ್ ಅಧಿಕ ಉತ್ಪಾದನೆ: 2019ನೇ ಆರ್ಥಿಕ ವರ್ಷದ ಎರಡನೇ ಅರ್ಧ ವಾರ್ಷಿಕ ಅವಧಿಯಲ್ಲಿ ಡೀಸೆಲ್ ಬೇಡಿಕೆ ಕುಸಿತ ಆರಂಭಗೊಂಡಿತ್ತು. ಇದು ಕೋವಿಡ್ ಸಂದರ್ಭದಲ್ಲಂತೂ ನಿರಾಶಾದಾಯಕ ಪ್ರಮಾಣಕ್ಕೆ (1.40 ಲಕ್ಷ ಟನ್) ಕುಸಿಯಿತು. ಪ್ರಸಕ್ತ ವಿವಿಧ ಪೆಟ್ರೋಲಿಯಂ ಮಾರಾಟ ಸಂಸ್ಥೆಗಳು ಇರಿಸಿರುವ ಬೇಡಿಕೆ ಆಧರಿಸಿ ಪ್ರತಿ ತಿಂಗಳಿಗೆ ಸರಾಸರಿ 3.30 ಲಕ್ಷ ಟನ್ (ನವೆಂಬರ್ ಬೇಡಿಕೆ) ಉತ್ಪಾದನೆಯಾಗತೊಡಗಿದೆ.

    ಕೋವಿಡ್ ಪೂರ್ವ ಸ್ಥಿತಿಗೆ ಡೀಸೆಲ್ ಬೇಡಿಕೆ ಬಂದಿದೆ ಎಂದರೆ ಕೈಗಾರಿಕೆಗಳು ಚೇತರಿಕೆ ಕಂಡಿರುವುದಕ್ಕೆ ಒಂದು ಸೂಚನೆ. ಕೈಗಾರಿಕಾ ಉದ್ದೇಶ, ಸಾರ್ವಜನಿಕ ಸಾರಿಗೆ, ಟ್ರಾನ್ಸ್‌ಪೋರ್ಟ್ ಇತ್ಯಾದಿ ವಹಿವಾಟು ಈಗ ಮತ್ತೆ ಕಳೆಗಟ್ಟತೊಡಗಿದೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್‌ಗೆ ವಿವಿಧ ಕಾರಣಗಳಿಂದಾಗಿ ಬೇಡಿಕೆ ಏರುತ್ತಿದ್ದರೂ, ಡೀಸೆಲ್ ಮಾತ್ರ ಹಿನ್ನಡೆ ಕಂಡಿತ್ತು. ಕಳೆದ ಒಂದು ತಿಂಗಳಿಂದ ಚಿತ್ರಣ ಬದಲಾಗಿದೆ ಎನ್ನುತ್ತಾರೆ ಎಂಆರ್‌ಪಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರುಡೋಲ್ಫ್ ನರೋನ್ಹ.
    ಕಂಪನಿಯ ಸ್ವಂತ ವಿತರಣಾ ಬಂಕ್‌ಗಳಲ್ಲೂ ಸರಾಸರಿ ಶೇ.10ರಷ್ಟು ಇಂಧನ ವಿತರಣೆ ಏರಿಕೆ ಕಂಡಿದೆ.

    ಪೆಟ್ರೋಲ್ ಬೇಡಿಕೆ ಒಂದೂವರೆ ಪಟ್ಟು ಹೆಚ್ಚಳ: ಪೆಟ್ರೋಲ್, ಡೀಸೆಲ್ ಎರಡಕ್ಕೂ ಭಾರಿ ದರ ಏರಿಕೆಯಾಗಿದ್ದರೂ ಜನ ಅದನ್ನೇ ಅವಲಂಬನೆಯಾಗಿರುವುದು ಕೂಡ ಬೇಡಿಕೆ ಏರಿಕೆಯಾಗಲು ಕಾರಣ. ಒಂದೆಡೆ ಪೆಟ್ರೋಲ್ ವಾಹನಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಕೋವಿಡ್ ಬಳಿಕ ಜನರು ಸ್ವಂತ ವಾಹನ ಬಳಕೆ ಮಾಡುವ ಸನ್ನಿವೇಶ ಜಾಸ್ತಿಯಾಗುತ್ತಿದೆ. ಕೋವಿಡ್ ಪೂರ್ವದಲ್ಲಿ ಸರಾಸರಿ 90 ಸಾವಿರ ಮೆಟ್ರಿಕ್ ಟನ್ ಇದ್ದಂತಹ ಪೆಟ್ರೋಲ್ ಉತ್ಪಾದನೆ ಈಗ 1.30 ಲಕ್ಷ ಮೆಟ್ರಿಕ್ ಟನ್‌ಗೇರಿದೆ. ಕಳೆದ ವರ್ಷ ಜೂನ್‌ನಲ್ಲಿ, ಅಂದರೆ ಕೋವಿಡ್ ಮೊದಲ ಅಲೆಯ ಲಾಕ್‌ಡೌನ್ ಬಳಿಕದ ಸಂದರ್ಭ ಇದು 45 ಸಾವಿರ ಮೆಟ್ರಿಕ್ ಟನ್‌ಗೆ ಕುಸಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts