More

    ಗಾಂಧೀಜಿ ತಂಗಿದ್ದ ಮನೆ ನವೀಕರಣ

    ತಿಪಟೂರು: ಇದೀಗ ಶಿಥಿಲಾವಸ್ಥೆಯಲ್ಲಿರುವ ಮಹಾತ್ಮಗಾಂಧಿ ತಂಗಿದ್ದ ಹೆಂಚಿನ ಮನೆ ನವೀಕರಣಕ್ಕೆ ಸರ್ಕಾರದಿಂದ ಹಣ ಮಂಜೂರಾಗದಿದ್ದರೂ, ಶಾಸಕರ ಅನುದಾನದಿಂದ ಈ ಕೆಲಸ ಮಾಡಲು ಸಿದ್ಧ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

    ತಾಪಂ ಸಂಭಾಗಣದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್ ಕ್ರಿಯಾ ಯೋಜನೆ ಅನುಮೋದನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಈ ಹಿಂದೊಮ್ಮೆ ಗಾಂಧೀಜಿ ನಗರಕ್ಕೆ ಭೇಟಿ ನೀಡಿದ ವೇಳೆ ತಾಪಂ ಕಾರ್ಯಾಲಯದ ಆವರಣದಲ್ಲಿರುವ ಹೆಂಚಿನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಲ್ಲಿನ ವರ್ತಕರು ಅವರಿಗೆ ಕೊಡುಗೆಯಾಗಿ ನೀಡಿದ್ದ ಕಬ್ಬಿಣದ ತಿಜೋರಿ ಈಗಲೂ ತಾಲೂಕು ಕಚೇರಿಯಲ್ಲಿ ಬಳಕೆಯಗುತ್ತಿದೆ. ಮಹಾತ್ಮರು ನಮ್ಮ ಊರಿಗೆ ಬಂದಿದ್ದೇ ನಮ್ಮ ಪುಣ್ಯ. ಅವರ ನೆನಪಿಗಾಗಿ ಆ ಮನೆ ನವೀಕರಿಸಿ, ಅಲ್ಲಿ ಸರ್ಕಾರಿ ಸುತ್ತೋಲೆ, ಗೆಜೆಟ್ ನೋಟಿಫಿಕೇಷನ್ ಸಂಗ್ರಹಿಸಿ ಸಾರ್ವಜನಿಕರ ಮಾಹಿತಿಗಾಗಿ ಇಡಲಾಗುವುದು ಎಂದರು.

    ತಿಮ್ಲಾಪುರ ನರ್ಸರಿ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರದಿಂದ ಮಂಜೂರಾತಿ ದೊರೆಯದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಶಾಸಕರು, ಆಸ್ಪತ್ರೆ ನಿರ್ಮಾಣದಿಂದ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಹುಳಿಯಾರು, ಗುಬ್ಬಿ, ತಿಪಟೂರು ಸೇರಿ ನಾಲ್ಕಾರು ತಾಲೂಕಿನ ರೋಗಿಗಳಿಗೆ ತುರ್ತು ಚಿಕಿತ್ಸೆ ಲಭ್ಯವಾಗುತ್ತಿತ್ತು. ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ, ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದರು.

    ಕೊನೇಹಳ್ಳಿ, ಬುರುಡೇಗಟ್ಟ, ನಗರದ ಆಯುಷ್ ಆಸ್ಪತ್ರೆ ನವೀಕರಣ ಮತ್ತು ದುರಸ್ಥಿ ಮತ್ತು 16 ಸಿಬ್ಬಂದಿ ಇರುವಲ್ಲಿ ಕೇವಲ ಮೂವರು ಸಿಬ್ಬಂದಿ ನಿಯೋಜನೆ ಮಾಡಿರುವ ಕ್ರಮಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮಂಜೂರಾತಿ ದೊರೆತಿಲ್ಲ ಎಂಬ ವೈದ್ಯರ ಮಾತಿಗೆ ಉತ್ತರಿಸಿದ ಶಾಸಕರು, ಗಾಳಿಪಟ ಹಾರಲು ಬಾಲಂಗೋಚಿ ಎಷ್ಟು ಮುಖ್ಯವೋ, ಜನಪ್ರತಿನಿಧಿಗಳ ಶಿಫಾರಸು ಪತ್ರವೂ ಅಷ್ಟೇ ಮುಖ್ಯ. ನೀವುಗಳಷ್ಟೇ ಮನವಿ ಸಲ್ಲಿಸಿ ಸುಮ್ಮನಾದರೆ ಸಾಲದು, ನನ್ನ ಗಮನಕ್ಕೂ ತಂದರೆ ಸದನದಲ್ಲಿ ಎಲ್.ಎ.ಅಡಿ ಪ್ರಶ್ನೆ ಮಾಡಿ ಮಂಜೂರಾತಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.

    ಜಿಲ್ಲೆಯಲ್ಲಿ ಸಿಜೇರಿಯನ್ ಸಂಖ್ಯೆ ಶೇ.50 ದಾಟಿ ಇಡೀ ದೇಶದ ಗಮನ ಸೆಳೆದಿದೆ, ಆದಷ್ಟೂ ಈ ಸಂಖ್ಯೆಯನ್ನು ಕಡಿಮೆ ಮಾಡಿ ಮರ್ಯಾದೆ ಉಳಿಸಿ ಎಂದು ಶಾಸಕರು ಮನವಿ ಮಾಡಿದರು.

    30 ಲಕ್ಷ ರೂಪಾಯಿ ವೆಚ್ಚದ ಲಿಫ್ಟ್‌ಗೆ ಆಕ್ಷೇಪ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿರುವ ಲಿಫ್ಟ್‌ಗೆ 30.50 ಲಕ್ಷ ರೂಪಾಯಿ ಟೆಂಡರ್ ಅಂತಿಮವಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಶಾಸಕ ಷಡಕ್ಷರಿ, 6-7 ಜನರನ್ನು ಸಾಗಿಸುವ ಲಿಫ್ಟ್‌ಗೆ 7 ಲಕ್ಷ ರೂಪಾಯಿ ಎಂದು ಕೇಳಿದ್ದೇನೆ. ಈ ದರ ದುಬಾರಿ ಎನಿಸುತ್ತಿದೆ. ಟೆಂಡರ್ ಮುಗಿದಿದೆ ಎನ್ನುತ್ತೀರಿ, ಆದರೆ ಎಲ್-ಒನ್‌ಗೆ ಆದ್ಯತೆ ನೀಡಿ. ನನಗೂ ಶಿಷ್ಯರಿದ್ದಾರೆ, ಹಾಗಂತ ನಿಯಮ ಮೀರಲು ನಾನು ಸಿದ್ಧನಿಲ್ಲ ಎಂದರು.

    ನಿರಾಕರಿಸಿದ್ದ ಇಒಗೆ ನವೀಕರಣ ಜವಾಬ್ದಾರಿ: ಕಳೆದ ವರ್ಷ ತಾಪಂ ಆವರಣದಲ್ಲಿ ಗಾಂಧಿ ಜಯಂತಿ ಆಚರಿಸುವುದಕ್ಕೆ ಅಂದು ಮಾಜಿಯಾಗಿದ್ದ ಕೆ.ಷಡಕ್ಷರಿಗೆ ಇಒ ಎಚ್.ಎಂ.ಸುದರ್ಶನ್ ಅಡ್ಡಿಪಡಿಸಿದ್ದರು, ಈಗ ಇದೇ ಇಒಗೆ ಗಾಂಧೀಜಿ ವಾಸ್ತವ್ಯ ಹೂಡಿದ್ದ ನಿವೇಶನ ನವೀಕರಿಸುವ ಹೊಣೆಯನ್ನು ಹಾಲಿ ಶಾಸಕ ಕೆ.ಷಡಕ್ಷರಿ ನೀಡಿದ್ದಾರೆ.

    ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಎಬಿಸಿಗೆ ಸರ್ಕಾರ 1650 ರೂ. ನಿಗದಿ ಮಾಡಿರುವುದರಿಂದ ಬಿಡ್‌ದಾರರು ಭಾಗವಹಿಸುತ್ತಿಲ್ಲ. ಸ್ವಂತ ಹೆತ್ತವರ ಯೊಗಕ್ಷೇಮ ನೋಡಿಕೊಳ್ಳಲಾಗದ ಕೆಲ ಪ್ರಾಣಿದಯಾ ಸಂಘದ ಸದಸ್ಯರಿಗೆ ಅನ್ಯತಾ ಟೀಕೆ ಮಾಡುವುದು ಬಿಟ್ಟರೆ ಬೇರೆ ಗೊತ್ತಿಲ್ಲ. ಸದನದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು.| ಕೆ.ಷಡಕ್ಷರಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts