More

    ಗದಗ ಜಿಲ್ಲೆಗೂ ಕರೊನಾ ವ್ಯಾಪಿಸುವ ಭೀತಿ

    ​ಧಾರವಾಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಗದಗ ಜಿಲ್ಲೆಯಲ್ಲಿ ಕರೊನಾ ವೈರಸ್ ಭಯ ಶುರುವಾಗಿದೆ.

    ಮಾ. 12ರಂದು ರಾತ್ರಿ ಗೋವಾದಿಂದ ಪಣಜಿ-ಗದಗ ಬಸ್ ಹೊರಟಿದ್ದು, ಇದರಲ್ಲಿ 30 ಪ್ರಯಾಣಿಕರು ಇದ್ದರು. ಇದೇ ಬಸ್​ನಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅದೇ ಬಸ್​ನಲ್ಲಿ ಗದಗ ಜಿಲ್ಲೆಯ 27 ಜನರು ಪ್ರಯಾಣಿಸಿದ್ದರಿಂದ ಭೀತಿ ಹೆಚ್ಚಲು ಕಾರಣವಾಗಿದೆ.

    ಮಾ. 13ರಂದು ಪಣಜಿಯಿಂದ ಗದಗಕ್ಕೆ ಬಸ್ ಆಗಮಿಸಿದ್ದು, ಮಾರ್ಗ ಮಧ್ಯದ ಅಡವಿಸೋಮಾಪುರ ತಾಂಡದಲ್ಲಿ 11ಜನರು, ಪಾಪನಾಶಿ ತಾಂಡದಲ್ಲಿ ಮಗು ಸೇರಿ 3 ಮತ್ತು ಸಿಂಗಟರಾಯನಕೆರೆ ತಾಂಡಾದಲ್ಲಿ 7 ಜನರು ಹಾಗೂ ಗದಗದಲ್ಲಿ 6 ಜನ ಪ್ರಯಾಣಿಕರು ಇಳಿದುಕೊಂಡಿದ್ದಾರೆ ಹೀಗಾಗಿ ಗದಗ ಜಿಲ್ಲೆಗೂ ವೈರಸ್ ಹರಡಬಹುದು ಎಂಬ ಭೀತಿ ಆವರಿಸಿದ್ದು, ಆ ಬಸ್​ನ ಚಾಲಕ ಹಾಗೂ ನಿರ್ವಾಹಕರು ಈಗಾಗಲೇ ಗದಗ ಜಿಮ್ಸ್​ನಲ್ಲಿ ಚಿಕಿತ್ಸೆ ಒಳಪಟ್ಟಿದ್ದಾರೆ.

    ವಿಷಯ ತಿಳಿದ ತಕ್ಷಣ ಬಸ್​ನಲ್ಲಿ ಬಂದಿಳಿದ 25 ಜನರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಮುಂಡರಗಿ ತಾಲೂಕಿನ ಸಿಂಗಟರಾಯನಕೆರೆ ತಾಂಡಾದ 7 ಪ್ರಯಾಣಿಕರ ಪೈಕಿ 6 ಜನರು ಮತ್ತೆ ಗೋವಾಕ್ಕೆ ವಾಪಸ್ಸಾಗಿದ್ದಾರೆ. ಇದರಲ್ಲಿ ಸದ್ಯ ಓರ್ವ ಗರ್ಭಿಣಿ ಮಾತ್ರ ತಾಂಡಾದಲ್ಲಿ ಇದ್ದಾರೆ. ತಾಂಡಾಕ್ಕೆ ತೆರಳಿದ ವೈದ್ಯರ ತಂಡ ಗರ್ಭಿಣಿ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಬಸ್​ನಲ್ಲಿ ಜಿಲ್ಲೆಗೆ ಸಂಬಂಧಿಸಿದವರು 27 ಜನರ ಪೈಕಿ ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. 25 ಜನರ ಪೈಕಿ 13 ಜನರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ. ಉಳಿದವರು ಪತ್ತೆಗಾಗಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ.

    ಅಡವಿಸೋಮಾಪುರ ತಾಂಡಾದ 11 ಜನರ ಪೈಕಿ 9 ಜನರು ಹಾಗೂ ಪಾಪನಾಶಿ ತಾಂಡಾದಲ್ಲಿ ಮಗು ಸೇರಿ ಇಬ್ಬರು ಪತ್ತೆಯಾಗಿದ್ದಾರೆ. ಎಲ್ಲರಿಗೂ ಮನೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ನಿಗಾ ಮುಂದುವರಿಸಲಾಗಿದೆ. ಗೋವಾ ರಾಜ್ಯಕ್ಕೆ ಮರಳಿದವರನ್ನು ಬಿಟ್ಟು ಉಳಿದ 6 ಜನರ ಪತ್ತೆ ಕಾರ್ಯ ಮುಂದುವರೆದಿದೆ. ಪಣಜಿಯಿಂದ ಗದಗ ಬಸ್​ಗೆ ಆಗಮಿಸಿದ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಗದಗ ಜಿಮ್್ಸ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದು ಪರೀಕ್ಷೆಗೆ ಒಳಗಾಗಬೇಕು. | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಗದಗ

    ತಾಂಡಾಗಳಿಗೆ ಜಿಮ್್ಸ ವೈದ್ಯರ ಭೇಟಿ, ಆರೋಗ್ಯ ತಪಾಸಣೆ: ಗದಗ: ಕಳೆದ ವಾರ ಗೋವಾದ ಪಣಜಿಯಿಂದ ಗದಗ ನಗರಕ್ಕೆ ಆಗಮಿಸಿರುವ ಪ್ರಯಾಣಿಕರ ಸ್ವಗ್ರಾಮಗಳಾದ ಅಡವಿಸೋಮಾಪುರ ತಾಂಡಾ, ಪಾಪನಾಶಿ ತಾಂಡಾ, ಸಿಂಗಟರಾಯನೆಕೆರೆ ತಾಂಡಾಕ್ಕೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಎಲ್ಲರನ್ನೂ ವೈದ್ಯಕೀಯ ಆರೋಗ್ಯ ನಿಗಾದಲ್ಲಿ ಇರಿಸಲಾಗಿದೆ. ಸದ್ಯಕ್ಕೆ ಎಲ್ಲರೂ ಸಹಜವಾಗಿ ಇದ್ದು, ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ. ಆದರೂ ಸಹ ಅವರ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ಜಿಮ್್ಸ ವೈದ್ಯರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಮೇಲೆ ಈ ಗ್ರಾಮಗಳಲ್ಲಿ ಭಯ ಸೃಷ್ಟಿಯಾಗಿದೆ. ಕರೊನಾ ವೈರಸ್ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕಡಿಮೆ ಎಂದುಕೊಂಡರೂ ಭಾನುವಾರ ಈ ಗ್ರಾಮಗಳ ಜನರಲ್ಲಿ ಕೊಂಚ ಆತಂಕ ಮೂಡಿದ್ದು ಕಂಡುಬಂದಿತು. ಆದರೆ, ಎಲ್ಲರೂ ಸ್ವಚ್ಛತೆ ಕಾಪಾಡಬೇಕು. ಪ್ರತಿಯೊಬ್ಬರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಯಾರೂ ಭಯಪಡಬಾರದು ಎಂದು ವೈದ್ಯರು ತಿಳಿವಳಿಕೆ ನೀಡುತ್ತಿದ್ದಾರೆ. ಆದರೆ, ತಾಂಡಾದ ಆರು ಜನರು ಬಂದು ಮತ್ತೆ ಗೋವಾಕ್ಕೆ ವಾಪಸ್ಸಾಗಿದ್ದಾರೆ. ಇಲ್ಲಿಗೆ ಬಂದು ಹೋಗಿರುವವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಪಣಜಿಯಿಂದ ಬಂದ ಬಸ್​ನಲ್ಲಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಈ ಸಂದರ್ಭದಲ್ಲಿ ಮುಂಡರಗಿ ಪೊಲೀಸರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts