More

    ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ

    ಬೆಳಗಾವಿ: ನ್ಯಾಯಾಲಯ, ಸರ್ಕಾರವು ಹೊರಡಿಸುವ ಆದೇಶ, ಮಾರ್ಗಸೂಚಿಗಳ ಪ್ರಕಾರ ಗಣೇಶೋತ್ಸವ ಸೇರಿ ಮತ್ತಿತರ ಹಬ್ಬದಾಚರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

    ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆ.31ರಿಂದ ಸೆ.9ರ ವರೆಗೆ ಗಣೇಶೋತ್ಸವ ನಡೆಯಲಿದೆ. ಈ ವೇಳೆ ಅಹಿತಕರ ಘಟನೆಗೆ ಆಸ್ಪದವಾಗದಂತೆ ಸಂಭ್ರಮ, ಶಾಂತಿಯುತವಾಗಿ ಉತ್ಸವ ಆಚರಣೆಗೆ ಮಂಡಳಿಗಳು ಸಹಕರಿಸಬೇಕು ಎಂದರು.

    ಡಿಜೆಗೆ ಅವಕಾಶವಿಲ್ಲ: ನಿಗದಿತ ಪ್ರಮಾಣದ ಶಬ್ದ ಹೊರಸೂಸುವ ಧ್ವನಿವರ್ಧಕ ಬಳಕೆಗೆ ಅವಕಾಶವಿರುತ್ತದೆ. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಧ್ವನಿವರ್ಧಕ ಬಳಕೆಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್, ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಒಂದೇ ಕಡೆ ಲಭ್ಯವಿದ್ದು, ಅನುಮತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅನುಮತಿ ನೀಡಬೇಕಿದ್ದರೂ ನ್ಯಾಯಾಲಯ ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯವೇ ಅವಕಾಶ ಕಲ್ಪಿಸಲು ಸಾಧ್ಯವಿರುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಹೊರಡಿಸಲಾಗುವ ಮಾರ್ಗಸೂಚಿ ಪ್ರಕಾರ ಹಬ್ಬಗಳ ಆಚರಣೆಗೆ ಅವಕಾಶ ನೀಡಲಾಗುವುದು ಎಂದರು.

    ಪಿಒಪಿಗೆ ಅವಕಾಶವಿಲ್ಲ: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಪಿಒಪಿ ಗಣೇಶ ಮೂರ್ತಿ ತಯಾರಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕಿರುವುದರಿಂದ ಪೂರ್ವನಿಯೋಜಿತವಾಗಿ ಸಭೆ ನಡೆಸಲಾಗಿದೆ ಎಂದ ಅವರು, ಉತ್ಸವ ಸಂದರ್ಭದಲ್ಲಿ ಅಗತ್ಯ ಅನುಕೂಲ ಕಲ್ಪಿಸಲು ಕ್ಯಾಂಟೋನ್ಮಂಟ್ ಮಂಡಳಿ, ಅರಣ್ಯ ಇಲಾಖೆ ಸಿಬ್ಬಂದಿ ಜತೆ ಸಮನ್ವಯ ಸಾಧಿಸಲು ಸಭೆ ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ವಾಯು, ಶಬ್ದ ಹಾಗೂ ಜಲಮಾಲಿನ್ಯದ ಗಂಭೀರತೆ ಪರಿಗಣಿಸಿರುವ ನ್ಯಾಯಾಲಯ ಮತ್ತು ಸರ್ಕಾರವು ಮಾಲಿನ್ಯ ತಡೆಗಟ್ಟುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು. ಪೊಲೀಸ್ ಠಾಣೆಯ ಮಟ್ಟದಲ್ಲಿ ಕೂಡ ಸಭೆಗಳನ್ನು ನಡೆಸಲಾಗುವುದು. ಸ್ಥಳೀಯ ಮಟ್ಟದ ಅಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಬೇಕು ಎಂದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ರಾಜೇಶ್ವರಿ ಕುಳ್ಳಿ, ಜಿಪಂ ಸಿಇಒ ಎಚ್.ವಿ. ದರ್ಶನ, ಎಸ್ಪಿ ಡಾ.ಸಂಜೀವ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ಮಹಾನಿಂಗ ನಂದಗಾವಿ ಇತರರಿದ್ದರು.

    378 ಸ್ಥಳಗಳಲ್ಲಿ ಪ್ರತಿಷ್ಠಾಪನೆ

    ಬೆಳಗಾವಿ ನಗರದಲ್ಲಿ ಒಟ್ಟಾರೆ 378ಕ್ಕೂ ಅಧಿಕ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿವೆ. ಕರೊನಾ ಸಂದರ್ಭದಲ್ಲಿ ಸರ್ಕಾರದ
    ಮಾರ್ಗಸೂಚಿ ಪ್ರಕಾರ ಉತ್ಸವ ಆಚರಿಸಲಾಗಿದೆ. ನಗರದ ಎಲ್ಲ ಮಂಡಳಿಗಳ ಅಧ್ಯಕ್ಷರು- ಪದಾಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ಜಿಲ್ಲಾಡಳಿತದ ಜತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ವಿಕಾಸ ಕಲಘಟಗಿ ತಿಳಿಸಿದರು. ರಸ್ತೆ ದುರಸ್ತಿ ಮಾಡಬೇಕು, ವಿದ್ಯುತ್ ಕಂಬ ಸ್ಥಾಪಿಸಬೇಕು, ಮೆರವಣಿಗೆಗೆ ಅಡ್ಡಿಯಾಗುವ ಆಫ್ಟಿಕಲ್ ಫೈಬರ್ ಜಾಲದ ತಂತಿಗಳ ಸ್ಥಳಾಂತರಿಸಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts